ಮನೆ ಕಾನೂನು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿ: ರಾಜ್ಯಪಾಲರೇ ತನಿಖಾಧಿಕಾರಿ ರೀತಿ ನಡೆದುಕೊಂಡಿದ್ದಾರೆ- ಎಜಿ ಆಕ್ಷೇಪ

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿ: ರಾಜ್ಯಪಾಲರೇ ತನಿಖಾಧಿಕಾರಿ ರೀತಿ ನಡೆದುಕೊಂಡಿದ್ದಾರೆ- ಎಜಿ ಆಕ್ಷೇಪ

0

 “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ನಿರ್ಧರಿಸಬೇಕಿತ್ತು. ಆದರೆ, ರಾಜ್ಯಪಾಲರು ತಾವೇ ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ” ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಆಕ್ಷೇಪಿಸಿದ್ದಾರೆ.

Join Our Whatsapp Group

ರಾಜ್ಯಪಾಲರು ತಮ್ಮ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಕಾನೂನಿನ ವಿಚಾರಗಳ ಕುರಿತು ವಾದಿಸಿದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು “ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು” ಎಂದರು.

ಆಗ ಪೀಠವು “ಸೆಕ್ಷನ್‌ 17ಎ ಅಡಿ ಅನುಮತಿಗೂ ಮುನ್ನ ತನಿಖೆ ನಡೆಯಬೇಕು ಎಂದು ನೀವು ಸಲಹೆ ನೀಡುತ್ತಿದ್ದೀರಾ? ಹೀಗಾದರೆ ಅದು ಎಫ್‌ಐಆರ್‌ಗೆ ಸಮನಾದ ಆದೇಶವಾಗಲಿದೆ” ಎಂದಿತು.

ಇದಕ್ಕೆ ಎಜಿ ಅವರು “ಸೆಕ್ಷನ್‌ 17ಎ ಅನುಮತಿಗೂ ಮುನ್ನ ತನಿಖೆ ಅಗತ್ಯವಾಗಿದೆ. ದೂರುದಾರರ ಪ್ರಕಾರ 1998ರಲ್ಲಿ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯು ಡಿನೋಟಿಫಿಕೇಶನ್‌ ಆಗಿದೆ. ಪ್ರಕರಣ ದಾಖಲಿಸುವಾಗ ಅಪಾರವಾದ ವಿಳಂಬವಾಗಿದೆ” ಎಂದರು.

 “ಖಾಸಗಿ ವ್ಯಕ್ತಿಗಳು ನೀಡಿದ ದೂರನ್ನು ರಾಜ್ಯಪಾಲರು ಆಧರಿಸಿದ್ದಾರೆ. ಆದರೆ, ಖಾಸಗಿ ವ್ಯಕ್ತಿಗಳನ್ನು ಪೊಲೀಸ್‌ ಅಧಿಕಾರಿಗಿಂತ ಉನ್ನತ ಸ್ಥಾನದಲ್ಲಿ ಇಡಲಾಗದು. ಹೀಗಾಗಿ, ಪ್ರಾಥಮಿಕ ತನಿಖೆ ಅಗತ್ಯ. ಈ ಪ್ರಕರಣದಲ್ಲಿ ತನಿಖೆ ನಡೆದಿಲ್ಲ. ಲೋಕಾಯುಕ್ತ ಪೊಲೀಸ್‌ ಅಧಿಕಾರಿಗೆ ದೂರು ನೀಡಲಾಗಿದೆ. ಆದರೆ, ತನಿಖೆ ನಡೆಸಲು ಅವರಿಗೆ ಸೂಕ್ತ ಸಮಯ ನೀಡಲಾಗಿಲ್ಲ. ತಕ್ಷಣ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಕೋರಲಾಗಿದೆ. ರಾಜ್ಯಪಾಲರು ಪ್ರಾಥಮಿಕ ತನಿಖೆ ನಡೆಸುವುದಿಲ್ಲ. ಈ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಥಮಿಕ ತನಿಖೆ ನಡೆಸಿದ್ದಾರೆ.  ಪೊಲೀಸ್‌ ಅಧಿಕಾರಿ ಮಾತ್ರ ಅಭಿಪ್ರಾಯ ರೂಪಿಸಬೇಕು. ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ತನಿಖಾಧಿಕಾರಿಯಿಂದ ಮಾಹಿತಿ ಪಡೆಯಬಹುದಿತ್ತು. ಅವರು ತನಿಖಾಧಿಕಾರಿಯ ರೀತಿ ನಡೆದುಕೊಳ್ಳಬಾರದಿತ್ತು” ಎಂದು ಆಕ್ಷೇಪಿಸಿದರು.

“ಸೆಕ್ಷನ್‌ 17 ಮತ್ತು ಕೇಂದ್ರ ಸರ್ಕಾರದ ಎಸ್‌ಒಪಿ ಅಡಿ ತನಿಖಾಧಿಕಾರಿಯಿಂದ ಸಕ್ಷಮ ಪ್ರಾಧಿಕಾರ ಮಾಹಿತಿ ಪಡೆದಿದ್ದರೆ ರಾಜ್ಯಪಾಲರು ಆರೋಪಗಳ ದೂರನ್ನು ತಿರಸ್ಕರಿಸುತ್ತಿದ್ದರು. ರಾಜ್ಯಪಾಲರು ಖಾಸಗಿ ವ್ಯಕ್ತಿಗಳ ದೂರನ್ನು ಪರಿಗಣಿಸಬಾರದಿತ್ತು. ತನಿಖಾಧಿಕಾರಿ ನೀಡಿದ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ ಅಭಿಯೋಜನಾ ಮಂಜೂರಾತಿ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಬೇಕು” ಎಂದರು.

 “ಹಾಲಿ ಪ್ರಕರಣದಲ್ಲಿ ವಿವೇಚನೆ ಬಳಸಲಾಗಿಲ್ಲ, ಪ್ರಾಥಮಿಕ ತನಿಖೆ ನಡೆಸಲಾಗಿಲ್ಲ. ದೂರುದಾರರು ಜುಲೈ 18 ಮತ್ತು 25ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಆನಂತರ ಪೂರ್ವಾನುಮತಿ ಕೋರಿದ್ದಾರೆ. ಪೊಲೀಸರಿಗೆ ತನಿಖೆ ನಡೆಸಲು ಅವಕಾಶವನ್ನೇ ನೀಡಿಲ್ಲ. ಇಲ್ಲಿ ಸಕ್ಷಮ ಪ್ರಾಧಿಕಾರವೇ ಪ್ರಾಥಮಿಕ ತನಿಖೆ ನಡೆಸಿದೆ. ಸಕ್ಷಮ ಪ್ರಾಧಿಕಾರ ಅಭಿಯೋಜನಾ ಮಂಜೂರಾತಿ ನೀಡುವುದಕ್ಕೂ ಮುನ್ನ ಸಿಆರ್‌ಪಿಸಿ ಸೆಕ್ಷನ್‌ 154 ಅನುಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು” ಎಂದು ಪ್ರತಿಪಾದಿಸಿದರು.

“ರಾಜ್ಯಪಾಲರ ವಿವೇಚನೆ ಬಳಕೆಯು ಪರಿಪೂರ್ಣವಲ್ಲ (ಅಬ್ಸಲ್ಯೂಟ್‌). ಆಕ್ಷೇಪಾರ್ಹವಾದ ಆದೇಶದಲ್ಲೇ ರಾಜ್ಯಪಾಲರು ಸಕಾರಣಗಳನ್ನು ಉಲ್ಲೇಖಿಸಬೇಕಿತ್ತೇ ವಿನಾ ರಾಜ್ಯಪಾಲರ ಕಡತದಲ್ಲಲ್ಲ” ಎಂದರು.

ನಾಲ್ಕನೇ ಪ್ರತಿವಾದಿಯಾಗಿರುವ ಕೇವಿಯಟರ್‌ ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಸಿದ್ದರಾಮಯ್ಯ ಅವರು 1996-99ರ ನಡುವೆ ಉಪಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯ ಡಿನೋಟಿಫಿಕೇಶನ್‌ ಆಗಿದೆ. 2004-07ರ ನಡುವೆ ಸಂಕೀರ್ಣ (ಕನ್ವರ್ಜೆನ್ಸ್‌) ಪ್ರಕ್ರಿಯೆ ನಡೆದಿದೆ. 2008-13ರ ನಡುವೆ ಭೂಮಿ ವರ್ಗಾವಣೆಯಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪರಿಹಾರ ಕೋರಿದ್ದಾರೆ. 2018-22ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದು, ಅಧಿಕಾರದ ಹುದ್ದೆಯಲ್ಲಿದ್ದರು. ಪ್ರತಿಯೊಂದು ನಡೆ, ಪ್ರತಿಯೊಂದು ಕೆಲಸವೂ ಅರ್ಜಿದಾರರ ಪರವಾಗಿ ನಡೆದಿದೆ. 2023ರಲ್ಲಿ ಎಲ್ಲವೂ ಆದ ಮೇಲೆ 14 ನಿವೇಶನ ವಾಪಸ್‌ ಪಡೆಯಿರಿ, ರೂ. 64 ಕೋಟಿ ಪರಿಹಾರ ಕೊಡಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ” ಎಂದು ಪ್ರಕರಣ ಸಾಗಿ ಬಂದ ಹಾದಿಯನ್ನು ಸಿದ್ದರಾಮಯ್ಯನವರ ಅಧಿಕಾರದ ಅವಧಿಯೊಂದಿಗೆ ತಳಕು ಹಾಕಿ ವಾದಿಸಿದರು.

ವಿಚಾರಣೆಯ ಮುಂದುವರಿದ ಹಂತದಲ್ಲಿ ಪೀಠವು ಭ್ರಷ್ಟಾಚಾರ ನಿರೋಧ ಕಾಯಿದೆಯಲ್ಲಿನ ಅಧಿಕಾರದಲ್ಲಿದ್ದಾಗ ಮಾಡಲಾಗದ ಗಳಿಕೆಯ ಕುರಿತಾದ ನಿಯಮವು ಇಲ್ಲಿ ಹೇಗೆ ಅನ್ವಯವಾಗುತ್ತದೆ ಎಂದು ಕೇಳಿತು, “ನಿರ್ದಿಷ್ಟ ಅವಧಿಯು (ಚೆಕ್‌ ಪಿರೀಯಡ್‌) ಈ ಪ್ರಕರಣಕ್ಕೆ ಹೇಗೆ ಅನ್ವಯಿಸುತ್ತದೆ?” ಎಂದು ಪ್ರಶ್ನಿಸಿತು. ಅದಕ್ಕೆ ಲಕ್ಷ್ಮಿ ಅವರು “ಹಣದ ಗಳಿಕೆಯನ್ನು ನಿರ್ದಿಷ್ಟ ಅವಧಿಗೆ ಈ ಪ್ರಕರಣದಲ್ಲಿ ಅನ್ವಯ ಮಾಡಲಾಗದೇ ಹೋದರೂ, ನಿರ್ದಿಷ್ಟ ಅವಧಿಯಲ್ಲಿಯೇ ಘಟನಾಕ್ರಮಗಳು ನಡೆದಿರುವುದನ್ನು ಅನ್ವಯಿಸಬಹುದಾಗಿದೆ” ಎಂದರು.

ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಡಾ. ಅಭಿಷೇಕ್‌ ಮನು ಸಿಂಘ್ವಿ ಮತ್ತು ಪ್ರೊ. ರವಿವರ್ಮ ಕುಮಾರ್‌ ಅವರು ಗುರುವಾರ (ಸೆ.12) ವಾದ ಮಂಡಿಸಲಿದ್ದಾರೆ.