ಮನೆ ದೇವಸ್ಥಾನ ಸಜ್ಜನರಾವ್ ವೃತ್ತದ ಸತ್ಯನಾರಾಯಣ ಸ್ವಾಮಿ ಸನ್ನಿಧಿ

ಸಜ್ಜನರಾವ್ ವೃತ್ತದ ಸತ್ಯನಾರಾಯಣ ಸ್ವಾಮಿ ಸನ್ನಿಧಿ

0

ಬೆಂಗಳೂರು ಬಸವನಗುಡಿ ಬಳಿಯ ಸಜ್ಜನರಾವ್ ವೃತ್ತ ವಿಶ್ವೇಶ್ವರಪುರಕ್ಕೆ ಸೇರಿದ ಹಳೆಯ ಪ್ರದೇಶ. ಮಹಾರಾಷ್ಟ್ರದಿಂದ ವಲಸೆ ಬಂದ ವ್ಯಾಪಾರಸ್ಥರ ಕುಟುಂಬಕ್ಕೆ ಸೇರಿದ ದಾನಿ ಸಜ್ಜನರಾಯರು ಇಲ್ಲಿ 1934ರಲ್ಲಿ ಧರ್ಮಛತ್ರ, ಸುಬ್ರಹ್ಮಣ್ಯ ದೇವಾಲಯ ಹಾಗೂ ಶ್ರೀ. ಸತ್ಯನಾರಾಯಣ ಸ್ವಾಮಿ ದೇವಾಲಯ ನಿರ್ಮಿಸಿದ ಕಾರಣ ಅವರ ಹೆಸರನ್ನೇ ಈ ವೃತ್ತಕ್ಕೆ ಇಡಲಾಗಿದೆ.

Join Our Whatsapp Group

ಈ ವೃತ್ತದ ಸುತ್ತಮುತ್ತ ಹಲವು ದೇವಾಲಯಗಳಿವೆ ಸುಬ್ರಹ್ಮಣ್ಯ ದೇವಾಲಯ, ಶ್ರೀ. ಸತ್ಯನಾರಾಯಣ ದೇವಾಲಯ, ವೆಂಕಟರಮಣ ದೇವಾಲಯ, ಕನ್ಯಕಾ ಪರಮೇಶ್ವರಿ ದೇವಾಲಯ, ಶ್ರೀ ಶನೇಶ್ಚರ ದೇವಾಲಯ, ಗಣಪತಿ ದೇವಾಲಯಗಳೂ ಇವೆ.

ಈ ಪೈಕಿ ಶ್ರೀ. ಸತ್ಯನಾರಾಯಣ ದೇವಾಲಯ ಪುಟ್ಟದಾದರೂ ಇದರ ಖ್ಯಾತಿ ದೊಡ್ಡದು. ಸುಮಾರು ನಾಲ್ಕು ದಶಕಗಳಿಂದ ಪ್ರತಿ ತಿಂಗಳೂ ಪೌರ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸುವ ಮೂಲಕ ಈ ಭಾಗದಲ್ಲಿ ದೇವಾಲಯ ಪ್ರಖ್ಯಾತವಾಗಿದೆ. ಅಷ್ಟೇ ಅಲ್ಲ. ಈ ದೇವಾಲಯದಿಂದ ಪ್ರೇರಣೆ ಪಡೆದು ಹಲವು ದೇವಾಲಯಗಳಲ್ಲಿ ಪೌರ್ಣಿಮೆಯ ದಿನ ಸತ್ಯನಾರಾಯಣ ಪೂಜೆ ಮಾಡುವ ಪದ್ಧತಿ ನಡೆದು ಬಂದಿದೆ.

ವಿಶ್ವೇಶ್ವರ ಪುರದ ಸಜ್ಜನರಾವ್ ವೃತ್ತದ ರಸ್ತೆಯ ಆ ತುದಿಗೆ ಹೊಂದಿಕೊಂಡತೆಯೇ ಇರುವ ಸತ್ಯನಾರಾಯಣ ದೇವಾಲಯ ಅಂತ ದೊಡ್ಡದೇನಲ್ಲ. ಇದೊಂದು ಪುಟ್ಟ ಮಂದಿರ. ಕೆಳ ಭಾಗದಲ್ಲಿ ಕಲ್ಲಿನ ಕಟ್ಟಡವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಗಾರೆಯ ತಾರಸಿ ಇದೆ. ದೇವಾಲಯದ ಛಾವಣಿಯ ಮೇಲೆ ಗಾರಿಗಚ್ಚಿನ ಗೋಪುರ ಗೂಡಿದ್ದು, ಅದರಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಗಾರೆಯ ಶಿಲ್ಪಗಳಿವೆ. ಛಾವಣಿಯ ಎರಡೂ ತುದಿಗಳಲ್ಲಿ ಗರುಡನ ಗಾರೆಯ ಶಿಲ್ಪಗಳಿವೆ. ಜೊತೆಗೆ ಚಾಮರವನ್ನೂ ಪೂಜಾ ಸಾಮಗ್ರಿಗಳನ್ನೂ ಹಿಡಿದ ಸ್ತ್ರೀ ವಿಗ್ರಹಗಳಿವೆ. ಗೋಪುರದ ಮೇಲೆ ಮೂರು ಕಳಶಗಳಿದ್ದು, ಎಡ ಬಲದಲ್ಲಿ ಆನೆಯ ಮುಖದ ಅಲಂಕರಣವಿದೆ.

ಇನ್ನು ದೇವಾಲಯದಲ್ಲಿ ಮುಂಭಾಗದಲ್ಲಿ ಮಂಪಟವಿದ್ದು, ಗರ್ಭಗೃಹದಲ್ಲಿ ಅಮೃತಶಿಲೆಯ ಸುಂದರವಾದ ಸತ್ಯನಾರಾಯಣ ಸ್ವಾಮಿಯ ವಿಗ್ರಹವಿದೆ. 

ಪ್ರತಿ ನಿತ್ಯ ಈ ಸತ್ಯನಾರಾಯಣನಿಗೆ ಅಭಿಷೇಕ, ಪೂಜೆ ನಡೆಯುತ್ತದೆ. ಪ್ರತಿ ಶನಿವಾರ, ಶ್ರಾವಣ ಮಾಸದಲ್ಲಿ ಹಾಗೂ ವೈಕುಂಠ ಏಕಾದಶಿಯಂದು ವಿಶೇಷ ಅಲಂಕಾರ ಮಾಡಲಾಗುತ್ತದೆ. ಪ್ರತಿ ತಿಂಗಳ ಪೌರ್ಣಿಮೆಯಂದು ಇಲ್ಲಿ ಜನಜಾತ್ರೆಯೇ ಸೇರುತ್ತದೆ.

ಸ್ವಾಮಿ ದೇವಾಲಯದ ಪಕ್ಕದಲ್ಲಿ ಸಜ್ಜನರಾವ್ ವಿದ್ಯಾಸಂಸ್ಥೆ ಇದೆ. ಇಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ದಿವ್ಯಾಂಗರ ಶಾಲೆಯನ್ನೂ ನಡೆಸಲಾಗುತ್ತಿದೆ.

ಅಂದ ಹಾಗೆ ಸಜ್ಜನರಾವ್ ವೃತ್ತದಲ್ಲಿ ಆಹಾರ ಪದಾರ್ಥಗಳೇ ದೊರಕುವ ಒಂದು ರಸ್ತೆ ಇದೆ. ಇಲ್ಲಿ ಪೇಣಿ, ಚಿರೋಟಿ, ಒಬ್ಬಟ್ಟು, ದೋಸೆ, ಇಡ್ಲಿ, ಸೇರಿದಂತೆ ನಾನಾ ಬಗೆಯ ತಿಂಡಿ ತಿನಿಸು ದೊರಕುತ್ತದೆ. ಅವರೆ ಕಾಯಿಯ ಕಾಲದಲ್ಲಿ ಇಲ್ಲಿ ಅವರೇ ಮೇಳವೇ ನಡೆಯುತ್ತದೆ.