ಮನೆ ರಾಜ್ಯ ಜೀವ ಹಾಗೂ ಜೀವನಕ್ಕಾಗಿ ಹೋರಾಡುತ್ತಿರುವ ಮಕ್ಕಳ ರಕ್ಷಣೆ ಮಾಡಿ: ನಾಗಣ್ಣಗೌಡ

ಜೀವ ಹಾಗೂ ಜೀವನಕ್ಕಾಗಿ ಹೋರಾಡುತ್ತಿರುವ ಮಕ್ಕಳ ರಕ್ಷಣೆ ಮಾಡಿ: ನಾಗಣ್ಣಗೌಡ

0

ಮೈಸೂರು(Mysuru): ಬಡ, ನಿರ್ಗತಿಕ ಮಕ್ಕಳು ತಮ್ಮ ಜೀವ ಉಳಿಸಿಕೊಳ್ಳಲು ಹಾಗೂ ಜೀವನಕ್ಕಾಗಿ ಹೋರಾಡುತ್ತವೆ. ಅಂತಹ ಮಕ್ಳಳ ರಕ್ಷಣೆ ಮಾಡಬೇಕಿರುವುದು ಎಲ್ಲರ ಜವಬ್ದಾರಿ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ ಹೇಳಿದರು.

 ಜಿಲ್ಲಾ ಪಂಚಾಯತ್ ಕಿರು ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಆರ್‌ಟಿಇ, ಪೋಕ್ಸೋ ಹಾಗೂ ಬಾಲ ನ್ಯಾಯ ಕಾಯ್ದೆ ಅನುಷ್ಟಾನ’ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಇಂದು ಮಕ್ಕಳ ವಿಷಯದಲ್ಲಾಗುತ್ತಿರುವ ಕೆಲ ಘಟನೆಗಳು ಮನಸ್ಸಿಗೆ ನೋವಾಗುತ್ತವೆ. ತನ್ನ ತಂದೆ, ತನ್ನ ಶಿಕ್ಷಕರಿಂದಲೇ ಹಲವು ಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹಾಗಾಗಿ ಸಮಾಜ, ಸರ್ಕಾರ, ಅಧಿಕಾರಿಗಳು, ವಿದ್ಯಾರ್ಥಿ ಯುವಕರು ಇಂತಹ ನೀಚ ಬೆಳವಣಿಗೆಗಳ ತಡೆಯಲು ಶ್ರಮವಹಿಸಬೇಕಾಗುತ್ತದೆ ಎಂದರು.

 ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳ ರಕ್ಷಣೆ ಮಾಡುವುದಕ್ಕಿಂತ, ಮೊದಲು ಅಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗುವುದು ನಮ್ಮ ಜವಾಬ್ದಾರಿಯಾಗಬೇಕು. ವಿಕಲಚೇತನರು, ಚಿಂದಿ ಆಯುವವರು, ಹೆಚ್ ಐ ವಿ ಪೀಡಿತರು, ದೇವದಾಸಿ ಪದ್ದತಿಯಲ್ಲಿ ಜನಿಸಿರುವ ಮಕ್ಕಳು, ಜೀತ ಪದ್ದತಿಗೆ ಸಿಲುಕಿರುವವರು ಇಂತಹ ಮಕ್ಕಳು ಕೀಳರಿಮೆಯಲ್ಲಿ ಬಳಲುತ್ತಿದ್ದು ಅಂತಹವರಿಗೆ ಧೈರ್ಯ ತುಂಬುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದರು.

 ರಕ್ತ ಹೀನತೆಯಿಂದ ಬಳಲುವ ತಾಯಂದಿರಿಂದ ಆರೋಗ್ಯವಂತ ಮಕ್ಕಳ ಬಯಸುವುದು ಎಷ್ಟರ ಮಟ್ಟಿಗೆ ಸರಿ? ಮಗು ತಾಯಿ ಗರ್ಭದಲ್ಲಿರುವಾಗಲೇ ಲಿಂಗ ಭ್ರೂಣ ಪತ್ತೆಯಂತಹ ಕ್ರಮಗಳಿಂದ ನಾಲ್ಕು ತಿಂಗಳಿನಿಂದಲೇ ಶೋಷಣೆ ಶುರುವಾಗುತ್ತದೆ. ಇಂತಹ ಅಮಾನವೀಯ ಕೃತ್ಯಗಳ ವಿರುದ್ದ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕಿದೆ ಹಾಗೂ ಗರ್ಭಿಣಿ ತಾಯಂದಿರನ್ನು ಜತನದಿಂದ ನೋಡಿಕೊಳ್ಳಬೇಕಾಗಿದೆ ಎಂದರು.

ಇಂದು ಕರೋನಾ ದೂರವಾಗಿದ್ದರೂ ಮಕ್ಕಳಿಗೆ ಮೊಬೈಲ್ ಗೀಳಿನ ಸಮಸ್ಯೆ ಕಾಣಿಸುತ್ತಿದೆ. ಮೊಬೈಲ್ ಹುಚ್ಚನ್ನು ಬಿಡಿಸುವುದರೊಂದಿಗೆ ಆ ಮಕ್ಕಳಿಗೆ ಸಂಸ್ಕಾರ ಕೊಡುವ ಪದ್ದತಿ ಮನೆಯಿಂದಲೇ ಆರಂಬಿಸಬೇಕು, ಈ ನಿಟ್ಟಿನಲ್ಲಿ ಆಯೋಗ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆ ಉತ್ತಮಗೊಳಿಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಕ್ಕಳನ್ನು ಅಣಿಗೊಳಿಸಬೇಕು ಎಂದರು.

ಡಿ.ಡಿ.ಪಿ.ಐ ರಾಮಚಂದ್ರ ಅರಸ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 4 ಲಕ್ಷದ 24 ಸಾವಿರ ಮಕ್ಕಳು 3360 ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಅರ್.ಟಿ.ಇ ಅಡಿ 928 ಮಕ್ಕಳು ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದು, 414 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಉಳಿದ ಮಕ್ಕಳ ದಾಖಲಾತಿಗಳನ್ನು ಸರಿಪಡಿಸಿಕೊಂಡು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು.

 ರಾಯಲ್ ಕಾನ್‌’ಕಾರ್ಡ್ ಶಾಲೆಯಲ್ಲಿ ಆರ್.ಟಿ.ಐ ಅಡಿ ಮಕ್ಕಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಮಕ್ಕಳನ್ನು ದಾಖಲಿಸಿಕೊಳ್ಳಲು ಆದೇಶ ನೀಡಿದ್ದರಿಂದ 18 ಮಕ್ಕಳನ್ನು ದಾಖಲಿಸಿಕೊಂಡಿರುತ್ತಾರೆ. ಉಳಿದ ಮಕ್ಕಳನ್ನು ಮರ‍್ನಾಲ್ಕು ದಿನದಲ್ಲಿ ದಾಖಲಿಸಲಾಗುವುದು ಎಂದರು.

ಸರ್ಕಾರಿ ಶಾಲೆಗಳ ಶಿಕ್ಷಕರಿಬ್ಬರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತಿದ್ದ ಹಿನ್ನೆಲೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಎಫ್.ಐ.ಆರ್. ದಾಖಲಿಸಲಾಗಿದೆ. ಇಲಾಖೆ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ ಎಂದರು.

 ಅಧ್ಯಕ್ಷರು ಮಾತನಾಡಿ ಇಂತಹವರ ವಿರುದ್ದ ರಾಜಿ ಬೇಡ. ಕೆಲಸದಿಂದ ವಜಾಗೊಳಿಸಿ ಕೆಲಸ ಮಾಡಲು ಸಾಕಷ್ಟು ನಿರುದ್ಯೋಗಿಗಿಳಿದ್ದಾರೆ ಎಂದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪೂರ್ಣಿಮಾ ಅವರು ಮಾತನಾಡಿ ಈಗಾಗಲೇ ಈ ಪ್ರಕರಣ ಘಟಿಸಿ ಎರಡೂವರೆ ವರ್ಷ ಆಗಿದೆ ಬೇಗ ಮುಗಿಸಿ ಎಂದರು. ಈಗಾಗಲೇ ಎಲ್ಲಾ ಶಾಲೆಗಳಲ್ಲಿಯೂ ದೂರುಪೆಟ್ಟಿಗೆ ಇದ್ದು ಪ್ರತಿ ಶನಿವಾರ ಮಕ್ಕಳ ಪ್ರತಿನಿಧಿಯ ಸಮ್ಮುಖದಲ್ಲಿ ದೂರು ಪೆಟ್ಟಿಗೆ ತೆರೆಯಲಾಗುತ್ತದೆ.ಯಾವುದಾದರೂ ದೂರುಗಳಿದ್ದರೆ ತಕ್ಷಣ ಕ್ರಮವಹಿಸಲಾಗುತ್ತದೆಂದರು. ಈ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 91.2 ರಷ್ಟು ಫಲಿತಾಂಶ ಇದ್ದು ಮತ್ತಷ್ಟು ಸುಧಾರಣೆಗಾಗಿ ಕ್ರಮವಹಿಸಲಾಗುವುದು ಎಂದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪ್ರಸಾದ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಶಿಶು ಮರಣ ದರ 15 ಇದ್ದು, ರಾಜ್ಯದ ಸರಾಸರಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ವರ್ಷಕ್ಕೆ 38 ಸಾವಿರದಷ್ಟು ಶಿಶುಗಳು ಜನಿಸುತ್ತಿದ್ದು, ಎಲ್ಲಾ ರೀತಿಯ ಲಸಿಕೆಗಳನ್ನು ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳನ್ನು ವರ್ಷಕ್ಕೆ 2 ಬಾರಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 1.39 ಲಕ್ಷ ಮಕ್ಕಳ ತಪಾಸಣೆ ಆಗಿ 2 ಸಾವಿರ ಮಕ್ಕಳಲ್ಲಿ ನ್ಯೂನತೆಗಳು ಕಂಡುಬಂದಿವೆ ಎಂದರು.

ಇದಕ್ಕೆ ಸಿ.ಇ.ಒ ಪೂರ್ಣಿಮಾ ಅವರು ಪ್ರತಿಕ್ರಿಯಿಸಿ ನಮ್ಮ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಮಕ್ಕಳಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ ಎಂದರು.

ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಮಕ್ಕಳಿಗೆ ಸೌಲಭ್ಯಗಳು ಮಕ್ಕಳಿಗೆ ಸರಿಯಾಗಿ ದೊರೆಯುತ್ತಿವೆಯೇ ಎಂದ ಅಧ್ಯಕ್ಷರು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರಿಗೆ ಶಿಬಿರಗಳನ್ನು ಆಯೋಜಿಸಿ ಹೆಚ್.ಐ.ವಿ. ಪೀಡಿತ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಬೇಕು ಹಾಗೂ ಪೌಷ್ಟಿಕ ಭರಿತ ಆಹಾರ ಮೊಳಕೆಕಾಳು ಇಂತಹ ಪದಾರ್ಥಗಳು ಅವರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

 ಆಸ್ಪತ್ರೆಗಳಿಗೆ ಹೆರಿಗೆಗಾಗಿ ಮಹಿಳೆಯರು ಬಂದಾಗ ಚೀಟಿಗಾಗಿ ಕಾಯಿಸಬೇಡಿ. ತಕ್ಷಣ ಅವರಿಗೆ ಚಿಕಿತ್ಸೆ ನೀಡಿ. ತುಮಕೂರಿನಂತಹ ಘಟನೆಗಳು ಮರುಕಳಿಸಬಾರದು ಎಂದರು.

 ಕಾರ್ಮಿಕ ಅಧಿಕಾರಿ ರಾಜೇಶ್ ಮಾಹಿತಿ ನೀಡಿ ಈ ವರ್ಷ 295 ಬಾಲ ಕಾರ್ಮಿಕರನ್ನು ಗುರುತಿಸಲಾಗಿದೆ. ಆರು ಜನ ಮಾಲೀಕರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. 7 ಜನರನ್ನು ಸಿ.ಡಬ್ಲೂ.ಸಿ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ ಎಂದರು.

 ಅಧ್ಯಕ್ಷರು ಪ್ರತಿಕ್ರಿಯಿಸಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದಾಗ ಅವರಿಗೆ 20 ಸಾವಿರ ಸಹಾಯಧನ ಸರಿಯಾಗಿ ನೀಡಲಾಗುತ್ತಿದೆಯೇ ಎಂದಾಗ ಅಧಿಕಾರಿ 6 ಜನರಿಗೆ ನೀಡಲಾಗಿದೆ ಉಳಿದವರಿಗೆ ಶೀಘ್ರ ವಿತರಿಸಲಾಗುವುದು ಎಂದರು.

 ಸಮಾಜ ಕಲ್ಯಾಣಾಧಿಕಾರಿ ಮಾಹಿತಿ ನೀಡಿ ಹಾಸ್ಟೆಲ್‌ಗಳಲ್ಲಿ ಉತ್ತಮ ಊಟ ವಸತಿ ವ್ಯವಸ್ಥೆ ಇದೆ ಅಂದಾಗ ಅಧ್ಯಕ್ಷರು ಹೆಣ್ಣು ಮಕ್ಕಳ ಹಾಸ್ಟೆಲ್‌’ನಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಯೇ ಇದ್ದಾರಾ, ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯೇ ಇರಬೇಕು ಎಂದರು

 ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ಇದ್ದು, ಮಕ್ಕಳಿಗೆ ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು, ಯೂನಿಪಾರ್ಮ್ ಇಲ್ಲದ ಸಿಬ್ಬಂದಿಯನ್ನು ನೇಮಿಸಿದ್ದು, ಮಕ್ಕಳನ್ನು ಪ್ರತ್ಯೇಕ ಕೂರಿಸಿ ಅವರ ಅಹವಾಲು ಆಲಿಸಲಾಗುತ್ತಿದೆ ಎಂದರು.

 ಅಧ್ಯಕ್ಷರು ಪ್ರತಿಕ್ರಿಯಿಸಿ ಪಂಚಾಯತ್ ಹಂತದಲ್ಲಿ ಜಾಗೃತಿ ಕಾರ್ಯಕ್ರಮಗಳಾಗಬೇಕು. ಅಕರ್ಷಕ ಗೋಡೆ ಬರಹಗಳಿರಬೇಕು. ಮಕ್ಕಳನ್ನು ಮುಟ್ಟಿದರೆ ಉಳಿಯುವುದಿಲ್ಲ. ಮಕ್ಕಳ ಶೋಷಣೆಗೆ 20 ಸಾವಿರ ದಂಡ, ಮಕ್ಕಳನ್ನು ಮುಟ್ಟಿದ್ರೆ ಸುಟ್ಟು ಹೋಗ್ತಿರಾ ಎಂಬಂತಹ ಘೋಷಣೆಗಳಿರಬೇಕು ಎಂದರು.

ಭಿಕ್ಷೆ ಬೇಡುವ ತಾಯಿ ಮಕ್ಕಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಭಿಕ್ಷಾಟನೆಯಿಂದ ಹೊರಬರುವಂತೆ ನೋಡಿಕೊಳ್ಳಿ ಎಂದರು.

 ಕಬ್ಬು ಕಡಿಯಲು ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಬರುವವರ ಮಕ್ಕಳಿಗೆ ಸ್ಥಳೀಯ ಶಾಲೆಗಳಲ್ಲಿ ಸೇರಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ, ಬಸವರಾಜು, ಸಿಡಬ್ಲ್ಯೂಸಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.