ಸುರತ್ಕಲ್ (Suratkal): ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಮಹಮ್ಮದ್ ಫಾಸಿಲ್ (23) ಯುವಕನ ಹತ್ಯೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಮುಂಜಾಗ್ರತ ಕ್ರಮವಾಗಿ ನಗರ ಪೊಲೀಸ್ ಕಮಿಷನರ್ ಮನವಿಯ ಮೇರೆಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್ (23) ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಫಾಝಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಸುರತ್ಕಲ್ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸನಿಹದ ಸಂಕೀರ್ಣದಲ್ಲಿರುವ ಬಟ್ಟೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಫಾಝಿಲ್ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು.
ಘಟನೆ ಬಳಿಕ ಸುರತ್ಕಲ್ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.