ಮನೆ ರಾಜ್ಯ ಮುಂಡರಗಿಯ ಶಿಲ್ಪಿಗೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ

ಮುಂಡರಗಿಯ ಶಿಲ್ಪಿಗೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ

0

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ ಬಂದಿದೆ.

ನಾಗಮೂರ್ತಿ ಅವರು ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಮುಂಡರಗಿಯಲ್ಲಿ ಶಿಲ್ಪ ಕಲೆ ಮಾಡುತ್ತಿದ್ದಾರೆ. ನಾಗಮೂರ್ತಿ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯಲ್ಲಿ ದೊರೆಯುವ ಕರಿಕಲ್ಲುಗಳನ್ನ (ಕೃಷ್ಣ ಶಿಲೆ) ಬಳಸಿ ಮೂರ್ತಿ ತಯಾರಿ ಮಾಡ್ತಾರೆ.

ನಾಗಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಹಲವು ವರ್ಷ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ ಸುತಾರ ಎಂಬುವವರ ಹತ್ತಿರ ತರಬೇತಿ ಪಡೆದು, ತಾನೇ ಸ್ವತಂತ್ರವಾಗಿ ಮೂರ್ತಿ ಕೆತ್ತನೆ ಆರಂಭಿಸಿದ್ದಾರೆ.

ಈಗ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಾಗಮೂರ್ತಿ ಅವರಿಗೆ ಆಮಂತ್ರಣ ಬಂದಿದೆ. ಅಯೋಧ್ಯೆಗೆ ಆಹ್ವಾನ ಬಂದಿರುವ ಹಿನ್ನೆಲೆ ನಾಗಮೂರ್ತಿ ಅವರನ್ನು ಸ್ಥಳೀಯರು ಅಭಿಮಾನದಿಂದ ಸನ್ಮಾನಿಸಿದ್ದಾರೆ. ಗೌರವಿಸಿ ಅವರನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದಾರೆ.

ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ಜನ್ಮ ಪಾವನ ಮಾಡಿಕೊಳ್ಳುತ್ತೇನೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ನಾಗಮೂರ್ತಿ ಸಂತಸಪಟ್ಟಿದ್ದಾರೆ.