ಮನೆ ಕ್ರೀಡೆ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯ: ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯ: ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್

0

ಪರ್ಲ್, ದಕ್ಷಿಣ ಆಫ್ರಿಕಾ: ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಬೇಕಾದ ಒತ್ತಡದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಮೂರು ಪಂದ್ಯಗಳ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಶುಕ್ರವಾರ ನಡೆಯುವ ಎರಡನೇ ಪಂದ್ಯದಲ್ಲಿ ತಂಡವು ಜಯಿಸಲೇಬೇಕಾದ ಒತ್ತಡದಲ್ಲಿದೆ.ರಾಹುಲ್ ನಾಯಕತ್ವದ ಮೊದಲ ಸರಣಿ ಇದಾಗಿದೆ. ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟ ನಂತರ ಬ್ಯಾಟಿಂಗ್‌ನಲ್ಲಿ ಹೇಗೆ ಮಿಂಚುತ್ತಾರೆ ಎಂಬ ಕುತೂಹಲಕ್ಕೆ ಬುಧವಾರದ ಪಂದ್ಯದಲ್ಲಿ ಉತ್ತರ ಸಿಕ್ಕಿದೆ. ಅವರು ತಮ್ಮ ಅರ್ಧಶತಕದ ಮೂಲಕ ತಮ್ಮ ರನ್‌ಗಳ ಹಸಿವು ಇನ್ನೂ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಶಿಖರ್ ಧವನ್ ಕೂಡ ಮಿಂಚಿದ್ದರು. ಕೊನೆಯ ಹಂತದಲ್ಲಿ ಶಾರ್ದೂಲ್ ಠಾಕೂರ್ ಗಳಿಸಿದ್ದ ಮಿಂಚಿನ ಅರ್ಧಶತಕವು ಮುದ ನೀಡಿತ್ತು. ಆದರೆ ತಂಡಕ್ಕೆ ಗೆಲುವಿನ ದಡ ಮುಟ್ಟಿಸುವಲ್ಲಿ ಸಫಲವಾಗಿರಲಿಲ್ಲ.ಆದರೆ, ನಾಯಕ ರಾಹುಲ್ ಸೇರಿದಂತೆ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಆಟವಾಡಲಿಲ್ಲ. ಆದ್ದರಿಂದ ಆತಿಥೇಯರು ನೀಡಿದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅದೇ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಮತ್ತು ರಸಿ ವ್ಯಾನ್ ಡರ್ ಡಸೆನ್ ಶತಕ ಬಾರಿಸಿದ್ದರು. ಭಾರತದ ಬಲಿಷ್ಠ ಬೌಲಿಂಗ್ ಪಡೆಗೆ ಬಿಸಿ ಮುಟ್ಟಿಸಿದರು.

ಬೂಮ್ರಾ ಎರಡು ವಿಕೆಟ್ ತೆಗೆದುಕೊಂಡಿದ್ದರು. ಉಳಿದವರು ದುಬಾರಿಯಾಗಿದ್ದರು. ಈ ಲೋಪಗಳನ್ನು ತಿದ್ದಿಕೊಂಡು ತಂಡವನ್ನು ಮುನ್ನಡೆಸುವತ್ತ ರಾಹುಲ್ ಮೆರೆಯುವ ಚಾಣಾಕ್ಷತೆಯ ಮೇಲೆ ಈಗ ಕುತೂಹಲದ ಕಣ್ಣುಗಳು ನೆಟ್ಟಿವೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಇದು ಪ್ರಮುಖ ಸವಾಲಾಗಲಿದೆ.

ತಂಡಗಳುಭಾರತ: ಕೆ.ಎಲ್. ರಾಹುಲ್ (ನಾಯಕ), ಜಸ್‌ಪ್ರೀತ್ ಬೂಮ್ರಾ, ಶಿಖರ್ ಧವನ್, ಋತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಜುಬೈರ್ ಹಮ್ಜಾ, ಮಾರ್ಕೊ ಜ್ಯಾನ್ಸೆನ್, ಜೆನ್‌ಮನ್ ಮಲಾನ್, ಸಿಸಾಂದ ಮಗಾಲ, ಏಡನ್ ಮರ್ಕರಂ, ಡೇವಿಡ್‌ ಮಿಲ್ಲರ್, ಲುಂಗಿ ಗಿಡಿ, ವೇಯ್ನ್ ಪಾರ್ನೆಲ್, ಆ್ಯಂಡಿಲ್ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ.ಪಂದ್ಯ ಆರಂಭ: ಮಧ್ಯಾಹ್ನ 2ರಿಂದ

ಹಿಂದಿನ ಲೇಖನಟಿ – 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ
ಮುಂದಿನ ಲೇಖನವಾದದಲ್ಲಿ ಈ ಐದು ರಾಶಿಯವರನ್ನು ಮೀರಿಸುವುದು ಕಷ್ಟ