ಮನೆ ರಾಜಕೀಯ ಕಾಂಗ್ರೆಸ್ ತೊರೆಯಲು ಸಿದ್ದರಾದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ

ಕಾಂಗ್ರೆಸ್ ತೊರೆಯಲು ಸಿದ್ದರಾದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ

0

ಬೆಂಗಳೂರು: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನ ಬಿ.ಕೆ.ಹರಿಪ್ರಸಾದ್ ಪಾಲಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಪಕ್ಷ ತೊರೆಯಲು  ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಿಷತ್ ವಿಪಕ್ಷ ಸ್ಥಾನ ಕೈ ತಪ್ಪಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿ.ಎಂ, ಇಬ್ರಾಹಿಂ, ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರನ್ನು ಬಿಟ್ಟು, ಕಾಂಗ್ರೆಸ್ ಗೆ ಬಂದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಸೋತಾಗ ಬಾದಾಮಿಯಲ್ಲಿ ನಿಲ್ಲಿಸಿ, ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿ, ಗೆಲ್ಲಿಸುವ ಮೂಲಕ ಹೊಸ ರಾಜಕೀಯ ಜೀವನ ಕೊಟ್ಟೆವು, ಆದರೆ, ಇದೀಗ ಅವರ ಹೊಸ ಉಡುಗೊರೆ ನೀಡಿದ್ದಾರೆ ಎಂದರು.

ಸಂಕ್ರಾಂತಿಗೆ ಎಐಸಿಸಿಯ ಹೊಸ ಗಿಫ್ಟ್ ನೋಡಿ ಸಂತೋಷವಾಗಿದೆ. ಸೋನಿಯಾ ಗಾಂಧಿ ನಮ್ಮ ಮೇಲಿದ್ದ ಬಾರ ಕಡಿಮೆ ಮಾಡಿದ್ದಾರೆ. ನಿರ್ಧಾರ ತೆಗೆದುಕೊಳ್ಳಲು ನಾನೀಗ ಸ್ವತಂತ್ರನಾಗಿದ್ದೇನೆ. ಕಾಂಗ್ರೆಸ್ ಗೂ ನಮಗೂ ಮುಗಿದ ಅಧ್ಯಾಯ. ಈ ಸಂಬಂಧ ಶೀಘ್ರದಲ್ಲಿಯೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.

ಕಾಂಗ್ರೆಸ್ ಗೆ ಸಾಬರು ಮತದಾರರು. ಸಾಬರು ಇಲ್ಲ ಅಂದ ಮೇಲೆ ಪರಿಸ್ಥಿತಿ ಏನಾಗಲಿದೆ?ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದಕ್ಕಿಂತಲೂ ಕಡಿಮೆ ಸ್ಥಾನಗಳು ಕಾಂಗ್ರೆಸ್ ಗೆ ಬರಲಿವೆ ಎಂದು ಹೇಳಿದ ಸಿ. ಎಂ. ಇಬ್ರಾಹಿಂ, ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಮಂದಿ ಬೆಳಗ್ಗೆಯಿಂದ ಮಾತನಾಡಿದ್ದು, ಮುಂಬರುವ ದಿನಗಳಲ್ಲಿ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.