ಮೈಸೂರು: ಅನಧಿಕೃತವಾಗಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಸಂಸ್ಥೆಯಲ್ಲಿ ಯುವತಿ ಸಾವಿಗೆ ಕಾರಣವಾದ ತಾಮರ ಹೆಲ್ತ್ ಕೇರ್ ಸೆಂಟರ್ ಗೆ ಬೀಗ ಮುದ್ರೆಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಆದರೆ ಸದರಿ ಪ್ರಕರಣದಲ್ಲಿ ದೂರುದಾರರಾದ ಪ್ರದೀಪ್ ರವರಿಗೆ ಜಯವಾಗಿದ್ದು, ತಾಮರ್ ಹೆಲ್ತ್ ಕೇರ್ ಗೆ ಭಾರಿ ಹಿನ್ನಡೆಯುಂಟಾಗಿದೆ.
‘ಸವಾಲ್’ ವಾಹಿನಿಯ ವರದಿ ಮೇರೆಗೆ ಯುವತಿಯ ಸಾವಿಗೆ ಕಾರಣವಾದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿನ ತಾಮರ ಹೆಲ್ತ್ ಕೇರ್ ಸೆಂಟರ್ ಅನ್ನು ಬೀಗ ಮುದ್ರೆಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಆದೇಶಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ತಾಮರ ಹೆಲ್ತ್ ಕೇರ್ ಸೆಂಟರ್ ಸಂಸ್ಥೆಯವರು ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು (WP 6435/2024) ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರರಾದ ಪ್ರದೀಪ್ ಕುಮಾರ್ ಕೂಡ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದ ಆದೇಶವನ್ನು ಖಾಯಂ ಆದೇಶವಾಗಿ ಜಾರಿಗೊಳಿಸಲು ನಿರಾಕರಿಸಿ ಬೀಗ ಮುದ್ರೆ ತೆರವುಗೊಳಿಸಲು ಸಮ್ಮತಿಸದೆ, ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸೂಚಿಸಿತ್ತು.
ಈ ಹಿನ್ನಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ಕುಂದುಕೊರತಾ ನಿವಾರಣ ಪ್ರಾಧಿಕಾರದ ಸಭೆಯಲ್ಲಿ ತಾಮರ ಹೆಲ್ತ್ ಕೇರ್ ಗೆ ಪ್ರಕರಣ ಸಂಬಂಧ ಸುದೀರ್ಘವಾಗಿ ಚರ್ಚಿಸಿದ್ದು, ದೂರುದಾರರಾದ ಪ್ರದೀಪ್ ಕುಮಾರ್ ರವರು ಮಾಡಿದ್ದ ಆರೋಪಗಳೆಲ್ಲವು ಸತ್ಯವೆಂದು ಸಾಬೀತಾದ ಪರಿಣಾಮ ತಾಮರ ಹೆಲ್ತ್ ಸೆಂಟರ್ ನ್ನು ನಡೆಸಲು ಪರವಾಣಿಗೆಯನ್ನು ನೀಡದೆ, ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಮುಂದುವರಿದು ಹೈಕೋರ್ಟ್ ಆದೇಶದನ್ವಯ ವಿಚಾರಣೆ ಮಾಡಿ, ತಾಮರ ಹೆಲ್ತ್ ಸೆಂಟರ್ ಬೀಗ ಮುದ್ರೆಗೊಳಿಸಿರುವ ಆದೇಶವನ್ನು ಎತ್ತಿ ಹಿಡಿದಿದ್ದಾರೆ.
ಇದರಿಂದಾಗಿ ದೂರುದಾರರಾದ ಪ್ರದೀಪ್ ಕುಮಾರ್ ರವರಿಗೆ ಮತ್ತು ‘ಸವಾಲ್’ ವಾಹಿನಿಗೆ ಮತ್ತೊಮ್ಮೆ ಜಯ ಸಿಕ್ಕಂತಾಗಿದೆ.
ಏನಿದು ಪ್ರಕರಣ ?
ತಾಮರ ಹೆಲ್ತ್ ಕೇರ್ ನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಹಾಗೂ ಇದೇ ತಿಂಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಅನುಮಾನಸ್ಪದವಾಗಿ ಸಾವಿನ ಕುರಿತು ಸವಿವರವಾಗಿ ಸವಾಲ್ ವಾಹಿನಿ ಸುದ್ದಿಯನ್ನು ಪ್ರಕಟಿಸಿತ್ತು.
ತಾಮರ್ ಹೆಲ್ತ್ ಕೇರ್’ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಮತಾ (25) ಬಾತ್ ರೂಂ’ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಸಂಸ್ಥೆಯವರು ಹೇಳಿದ್ದು, ಆಕೆಯ ದೇಹದ ಮೇಲಾಗಿದ್ದ ಗಾಯಗಳಿಂದಾಗಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಸಂಬಂಧ ಮೃತರ ಪೋಷಕರು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕೊಳ್ಳೇಗಾಲ ಸಹಾಯಕ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದೇಹವನ್ನು ಸಮಾಧಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಈ ಬೆನ್ನಲ್ಲೆ ಮಮತಾಳ ಸಾವಿನ ಬಳಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಭಿ ತಲೆ ಮರೆಸಿಕೊಂಡಿದ್ದು, ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆತ ಮಮತಾಳ ಮನೆಯವರೊಂದಿಗೆ ಸಾವಿಗೆ ಮುಂಚೆ ಸಂಪರ್ಕದಲ್ಲಿದ್ದ, ಆದರೆ ಮಮತಾಳ ಸಾವಿನ ಬಳಿಕ ಫೋನ್ ಆಫ್ ಮಾಡಿ ಧಿಡೀರ್ ನಾಪತ್ತೆಯಾಗಿದ್ದ.
ಮಗಳ ಸಾವಿನ ದುಃಖದಿಂದ ಹೊರಬಂದ ನಂತರ ಕೆಲವು ಸಾಮಾಜಿಕ ಹೋರಾಟಗಾರರ ಸಹಕಾರದಿಂದ ಡಿಹೆಚ್’ಓ ಕಚೇರಿಗೆ ತೆರಳಿ ಮಗಳ ಕೆಲಸದ ಬಗ್ಗೆ ವಿವರವನ್ನು ಕಲೆ ಹಾಕಲು ಹೋದಾಗ ಅಲ್ಲಿ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾಮರ ಹೆಲ್ತ್ ಸೆಂಟರ ಸರ್ಕಾರದಿಂದ ನೊಂದಾವಣೆಯಾಗಿರುವುದಿಲ್ಲ. ಬಳಿಕ ಕಾರ್ಮಿಕ ಇಲಾಖೆಗೆ ತೆರಳಿ ಮಮತಾಳ ಕೆಲಸದ ದಾಖಲೆಯ ಮಾಹಿತಿ ಕೇಳಿದಾಗ ಅಲ್ಲಿಯೂ ಆಕೆಯ ಮಾಹಿತಿ ದೊರೆಯುವುದಿಲ್ಲ.
ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಲ್ಲಿ ನಡೆದ ಘಟನೆಗಳ ನಂತರ ಅನುಮಾನಗೊಂಡು ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ಅನುಮಾನವಿರುವುದಾಗಿ ಪೋಷಕರು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಹೆಬ್ಬಾಳ ಪೊಲೀಸರು ಕೊಳ್ಳೆಗಾಲದ ತಹಶೀಲ್ದಾರ್ ಮತ್ತು ವಿಭಾಗಾಧಿಕಾರಿಗಳಿಗೆ ಪತ್ರ ಮುಖೇನ ಶವ ಪರೀಕ್ಷೆಗೆ ಪತ್ರವನ್ನು ಬರೆದಿದ್ದರು.
ಈ ಹಿನ್ನಲೆ ಮಮತಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಕೂಡಲೇ ತಾಮರ ಹೆಲ್ತ್ ಸೆಂಟರ್’ಗೆ ಬೀಗ ಜಡಿದು ಇನ್ನಷ್ಟು ಅಸ್ವಾಭಾವಿಕ ಸಾವುಗಳನ್ನು ಮತ್ತು ಅಮಾಯಕ ಹೆಣ್ಣು ಮಕ್ಕಳ ಜೀವವನ್ನು ಕಾಪಾಡಬೇಕು ಎಂಬುದು ‘ಸವಾಲ್ ವಾಹಿನಿ’ ವರದಿ ಪ್ರಕಟಿಸಿತ್ತು.
ಮೃತ ಮಮತಾ ತಾಯಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ತಾವು ಮೃತಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿರುವ ಬಗ್ಗೆ ಮಾಹಿತಿಯನ್ನು ಕೋರಿದ್ದು, ತಾವು ಮೃತಳಿಗೆ ಸಂಬಂಧಿಸಿದಂತೆ ಯಾವ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಹಾಜರುಪಡಿಸದೇ ಇರುವ ಸಂಬಂಧ ತಮ್ಮ ಮೇಲಿರುವ ಈ ಎಲ್ಲಾ ಆರೋಪಗಳನ್ನು ಪರಿಗಣಿಸಿ ತಮ್ಮ ಸಂಸ್ಥೆಯನ್ನು ತಾತ್ಕಾಲಿಕವಾಗಿ ಬೀಗ ಮುದ್ರೆಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ತಾಮರ ಹೆಲ್ತ್ ಕೇರ್ ನಲ್ಲಿ ದಾಖಲಾಗಿರುವ ವಯೋವೃದ್ಧರನ್ನು ಹಾಗೂ ಇತರೆ ಸಿಬ್ಬಂದಿ ವರ್ಗದವರನ್ನು ಅವರವರ ಪೋಷಕರ ಸುಪರ್ದಿಗೆ 10 ದಿನದೊಳಗೆ ಹಸ್ತಾಂತರಿಸಿ ತಮ್ಮ ಸಂಸ್ಥೆಯನ್ನು ಖಾಲಿ ಮಾಡಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಆದೇಶಿಸಿದ್ದರು.
ಈ ಅವಧಿಯಲ್ಲಿ ಯಾವುದಾದರೂ ಅವಘಡ ಸಂಭವಿಸಿದಲ್ಲಿ ಸಂಸ್ಥೆಯವರೇ ಹೊಣೆಗಾರರೆಂದು ಎಚ್ಚರಿಕೆ ನೀಡಿದ್ದು, ಕ್ರಮ ವಹಿಸಿದ ನಂತರ ತಾಮರ ಸಂಸ್ಥೆಯನ್ನು ಬೀಗ ಮುದ್ರೆಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು.
ಕೊನೆಗೂ ನ್ಯಾಯಕ್ಕೆ ಮತ್ತು ಸತ್ಯದ ಹೋರಾಟಕ್ಕೆ ಗೆಲುವಾಗಿದ್ದು ಸರ್ಕಾರ ಕೂಡಲೇ ತಾಮರ ಹೆಲ್ತ್ ಸೆಂಟರ್ ಮುಚ್ಚಲು ಕ್ರಮವಹಿಸಬೇಕು.