ಮನೆ ಸುದ್ದಿ ಜಾಲ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ , ಪೋಷಕರಿಂದ ಧರ್ಮದೇಟು

ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ , ಪೋಷಕರಿಂದ ಧರ್ಮದೇಟು

0

ಚಿಕ್ಕೋಡಿ: ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕನ್ನಡ ಶಿಕ್ಷಕನಿಗೆ ಪೋಷಕರು ಶಾಲೆಗೆ ನುಗ್ಗಿ ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನನ್ನು ತಕ್ಷಣವೇ ಅಮಾನತು ಮಾಡುವಂತೆ ಡಿಡಿಪಿಐ ಆದೇಶಿಸಿದ್ದು ಚಿಕ್ಕೋಡಿಯ ಪ್ರೌಢಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಕನ್ನಡ ಶಿಕ್ಷಕ ಗಂಡು ಮಕ್ಕಳಿಗೆ ಕಿರುಕುಳ ನೀಡಿದ ಆರೋಪಿ. 10ನೇ ತರಗತಿಯ ಕನ್ನಡ ವಿಷಯದಲ್ಲಿ ಪಾಸ್ ಮಾಡುವುದಾಗಿ ಆಮಿಷವೊಡ್ಡಿ, ಶಾಲೆಯ ಕೊಠಡಿ ಹಾಗೂ ಶೌಚಾಲಯಕ್ಕೆ ಕರೆದೊಯ್ದು 5ಕ್ಕೂ ಹೆಚ್ಚು ಗಂಡು ವಿದ್ಯಾರ್ಥಿಗಳಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಇದರ ಕುರಿತ್ತಾಗಿ ಶಿಕ್ಷಕನ ಕೃತ್ಯದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ನುಗ್ಗಿ, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಾಲೆಯಲ್ಲಿ ಗಲಾಟೆ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಠಾಣೆ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸೀತಾರಾಮು ಅವರು ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂತ್ರಸ್ತ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆಯ ಮುಖ್ಯಶಿಕ್ಷಕರಿಂದ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದರು. ಬಳಿಕ ಪ್ರತಿಕ್ರಿಯಿಸಿದ ಡಿಡಿಪಿಐ ಸೀತಾರಾಮು, ಪೋಷಕರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇವೆ. ಇಂತಹ ಘಟನೆಗಳು ಆಗಬಾರದು ಮತ್ತು ಮುಂದೆಯೂ ಮರುಕಳಿಸಬಾರದು. ಆರೋಪಿ ಶಿಕ್ಷಕನನ್ನು ಕೂಡಲೇ ಅಮಾನತು ಮಾಡಲಾಗುವುದು. ಅಲ್ಲದೆ, ಪ್ರಕರಣದ ಕುರಿತು ಚಿಕ್ಕೋಡಿ ಬಿಇಒ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು ಎನ್ನಲಾಗಿದೆ.