ಮನೆ ಸುದ್ದಿ ಜಾಲ ದೋಷ ಮುಕ್ತರಾದ ಕಾರ್ಮಿಕರ ಸೇವೆ ಪರಿಗಣಿಸಲು ಹೈಕೋರ್ಟ್‌ ಆದೇಶ : ಕೊಲೆ ಆರೋಪದಲ್ಲಿ ಜೈಲು ಸುದೀರ್ಘ ಗೈರು

ದೋಷ ಮುಕ್ತರಾದ ಕಾರ್ಮಿಕರ ಸೇವೆ ಪರಿಗಣಿಸಲು ಹೈಕೋರ್ಟ್‌ ಆದೇಶ : ಕೊಲೆ ಆರೋಪದಲ್ಲಿ ಜೈಲು ಸುದೀರ್ಘ ಗೈರು

0

ಬೆಂಗಳೂರು ಕೊಲೆ ಆರೋಪದಲ್ಲಿ ವಿಚಾರಣಾ  ಕೈದಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಕೆಲಸಕ್ಕೆ ಸುದೀರ್ಘ ಗೈರು ಹಾಜರಾದ ಇಬ್ಬರು ಕಾರ್ಮಿಕರನ್ನು ಅಧಿಕೃತ ವಿಚಾರಣೆ ನಡೆಸದೆ, ಸೇವೆಯಿಂದ ವಜಾಗೊಳಿಸಿದ್ದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಆದೇಶ ರದ್ದುಗೊಳಿಸಿರುವ ಹೈಕೋರ್ಟ್‌ ಈ ಬಗ್ಗೆ ಇಬ್ಬರು ಗ್ಯಾಂಗ್ ಮನ್‌ಗಳನ್ನು ಮತ್ತೆ ಸೇವೆಗೆ ಪರಿಗಣಿಸಬೇಕು ಎಂದು ಆದೇಶ ಕೊಟ್ಟಿದೆ ಎನ್ನಲಾಗಿದೆ. ಮೆಸ್ಕಾಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನು ಸಿವರಾಮನ್‌ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ ಎನ್ನಲಾಗಿದೆ.

ಅಲ್ಲದೆ, ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಬೇಕಾದಲ್ಲಿ ಪ್ರೊಬೇಷನರಿ ಮಜ್ದೂರ್ ನಿಯಮಗಳು 1997ರ ಪ್ರಕಾರ ಮೌಖಿಕ ವಿಚಾರಣೆ ಕಡ್ಡಾಯವಾಗಿ ನಡೆಸಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಅಂತಹ ವಿಚಾರಣೆ ನಡೆಸಲಾಗಿಲ್ಲ. ಅಲ್ಲದೆ, ಇಬ್ಬರೂ ಗ್ಯಾಂಗ್‌ಮನ್‌ಗಳು, ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ಕೆಲಸಕ್ಕೆ ಗೈರು ಹಾಜರಾಗಿದ್ದರು. ಇದು ಅವರ ನಿಯಂತ್ರಣ ಮೀರಿದ ಅನಿವಾರ್ಯ ಪರಿಸ್ಥಿತಿಯಾಗಿದ್ದರಿಂದ, ಇದನ್ನು ಸ್ವಯಂಪ್ರೇರಿತವಾಗಿ ಕೆಲಸ ಬಿಟ್ಟು ಹೋದ ಪ್ರಕರಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ.

ಇದ್ದರಿಂದ ಗೈರು ಹಾಜರಿಯು ಉದ್ದೇಶಪೂರ್ವಕವಾಗಿದೆಯೇ ಅಥವಾ ಅನಿವಾರ್ಯ ಕಾರಣಗಳಿಂದಾಗಿದೆಯೇ ಎಂಬುದನ್ನು ಇಲಾಖಾ ತನಿಖೆಯ ಮೂಲಕ ಸಾಬೀತುಪಡಿಸದೆ ನೇರ ವಜಾ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಇಬ್ಬರೂ ನೌಕರರು ಜಾಮೀನಿನ ಮೇಲೆ ಬಿಡುಗಡೆಯಾದ ದಿನಾಂಕದಿಂದ ಮರು ನೇಮಕವಾಗುವವರೆಗಿನ ಅವಧಿಗೆ ಶೇ.50ರಷ್ಟು ಹಿಂಬಾಕಿ ವೇತನ ಮತ್ತು ಸೇವಾ ನಿರಂತರತೆ ನೀಡಬೇಕು ಎಂದು ಮೆಸ್ಕಾಂಗೆ ನಿರ್ದೇಶನ ನೀಡಿ ಆದೇಶಿಸಿದೆ. ಅರ್ಜಿದಾರರು 2005ರಲ್ಲಿ ಸೇವೆಯಿಂದ ವಜಾಗೊಂಡಿದ್ದರೂ 2013ರಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದ್ದರಿಂದ ಅವರ ಮನವಿ ಪರಿಗಣಿಸಬಾರದು ಎಂಬ ಎಂಬ ಮೆಸ್ಕಾಂ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಇಬ್ಬರೂ ಕಾರ್ಮಿಕರು ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಳ್ಳುವವರೆಗೆ ಕಾಯಬೇಕಾಗಿತ್ತು ಮತ್ತು ಖುಲಾಸೆಗೊಂಡ ಕೂಡಲೇ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ವಿಳಂಬದ ವಾದವನ್ನು ಒಪ್ಪಲಾಗದು ಎಂದು ಪೀಠ ತಿಳಿಸಿದೆ.