ಶಿಕ್ಷಣರಂಗವನ್ನು ಕಾರ್ಪೋರೇಟೀಕರಣ , ಕೋಮುವಾದಿಕರಣಗೊಳಿಸುತ್ತಿರುವ ಎನ್ ಡಿ ಎ ಒಕ್ಕೂಟವನ್ನು ಲೋಕಸಭಾ ಚುಣಾವಣೆಯಲ್ಲಿ ಸೋಲಿಸಲು ಎಸ್ ಎಫ್ ಐ ಕರೆ ನೀಡಿದೆ.
2014 ರಿಂದ 2024 ರಲ್ಲಿನ ಮೋದಿ ಆಡಳಿತದ ಒಂದು ದಶಕದಲ್ಲಿ ಕೇಂದ್ರ ಸರ್ಕಾರವು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿರುವ ವಾರ್ಷಿಕ ಸರಾಸರಿಯು ಜಿಡಿಪಿಯ ಕೇವಲ ಶೇಕಡಾ ೦.೪೧ ಮಾತ್ರವೇ ಆಗಿದೆ; ಇದು ಹಿಂದಿನ 2004-2014 ಯುಪಿಎ ಸರ್ಕಾರವು ಒಂದು ದಶಕದಲ್ಲಿ ಶಿಕ್ಷಣಕ್ಕೆ ವೆಚ್ಚ ಮಾಡಿದ ಶೇಕಡಾ ೦.66 ಕ್ಕಿಂತಲೂ ಬಹಳ ಕಡಿಮೆ ಇದೆ. ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದ ರಾಜ್ಯಗಳಿಗೆ ಅನುದಾನವನ್ನು ನಿಲ್ಲಿಸಲಾಗುವುದು ಎಂದು ಮೋದಿ ಸರ್ಕಾರವು ಬೆದರಿಕೆ ಹಾಕಿದೆ.
ಇತ್ತೀಚೆಗೆ, ಅಂತಹ ಎಂಟು ರಾಜ್ಯಗಳಿಗೆ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿನ ಅನುದಾನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ ಎಂಬ ವರದಿಗಳಿವೆ.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ಇತರ ಶಾಲೆಗಳೊಂದಿಗೆ ವಿಲೀನಗೊಳಿಸುವ ಮೂಲಕ, ವಿದ್ಯಾರ್ಥಿಗಳು ಬಲವಂತವಾಗಿ ಖಾಸಗೀ ಶಾಲೆಗಳನ್ನು ಸೇರಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ‘ಚಿರಾಗ್’ ಕಾರ‍್ಯಕ್ರಮದ ಅಡಿಯಲ್ಲಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ, ಆದರೆ ಅದೇ ರಾಜ್ಯಗಳಲ್ಲಿನ ಖಾಸಗಿ ಶಾಲೆಗಳಗೆ ಸಹಾಯಧನ (ಸಬ್ಸಿಡಿ) ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹೀಗೆ ಸ್ಥಳಾಂತರವಾದಾಗ ಬಡ ವಿದ್ಯಾರ್ಥಿಗಳು ಶಾಲೆ ಬಿಡುತ್ತಾರೆ, ಆಗ ಈ ಸಬ್ಸಿಡಿ ನಿಲ್ಲಿಸುವ ಹುನ್ನಾರವಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಪ್ರತೀ ವರ್ಷ ಹೆಚ್ಚಾಗುತ್ತಲೇ ಬಂದಿವೆ ಮತ್ತು ಹೊಸ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಖಾಸಗಿಯವರಿಂದಲೇ ನಿರ್ವಹಿಸಲ್ಪಡುತ್ತಿವೆ. ಸಾರ್ವಜನಿಕ ಅನುದಾನಿತ ವಿಶ್ವವಿದ್ಯಾಲಯಗಳಲ್ಲಿ ಶುಲ್ಕವನ್ನು ವಿಪರೀತವಾಗಿ ಏರಿಸಿರುವುದು ಹಾಗೂ ಮೂಲ ಸೌಲಭ್ಯಗಳು ಮರೀಚಿಕೆಯಾಗಿರುವ ಕಾರಣ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳತ್ತ ಅನಿವಾರ್ಯವಾಗಿ ಹೋಗುವಂತಾಗಿದೆ.
ಶಾಲೆ ಹಾಗೂ ಉನ್ನತ ಶಿಕ್ಷಣ ಮಟ್ಟದಲ್ಲಿ ಎರಡೂ ಕಡೆಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈಗ ಆನ್‌ಲೈನಲ್ಲಿ ಶಿಕ್ಷಣ ಮತ್ತು ತರಬೇತಿ ಹಾಗೂ ಡಿಜಿಟಲೈಜೇಶನ್ ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಸಮಾಜದ ವಂಚಿತರ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ವಂಚಿಸುವ ಪಿತೂರಿಯಲ್ಲದೇ ಬೇರೇನೂ ಅಲ್ಲ.
ಬಹುಪಾಲು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಎಸ್.ಸಿ./ಎಸ್.ಟಿ.ಯವರಿಗೆ ಹಾಗೂ ಇತರ ಮೀಸಲಾತಿ ಹೊಂದಿರುವ ವಿಭಾಗದವರಿಗೆ ಸ್ಕಾಲರ್‌ಶಿಪ್‌ಗಳನ್ನು ನಿಲ್ಲಿಸಲಾಗುತ್ತಿದೆ ಅಥವಾ ಕಾರಣವೇ ಇಲ್ಲದೇ ಹಣಸಂದಾಯವನ್ನು ತಡೆ ಹಿಡಿಯಲಾಗುತ್ತಿರುವುದು ಶಿಕ್ಷಣದಿಂದ ದೂರ ಮಾಡುವ ಷಡ್ಯಂತರವಾಗಿದೆ.
ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳು ನಡೆಸುತ್ತಿರುವ ಮದರಸಾಗಳಲ್ಲಿ ನಿರಂತರ ಹಸ್ತಕ್ಷೇಪಗಳ ಮೂಲಕ ಅವುಗಳನ್ನು ಹಾಳುಗೆಡವಲಾಗುತ್ತಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಮಾನ್ಯತೆಯನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ನೀಡಲಾಗುತ್ತಿರುವ ಫೆಲೋಶಿಪ್ ಹಣವನ್ನು ಕಡಿತ ಮಾಡುವ ಹುನ್ನಾರ ನಡೆಯುತ್ತಿದೆ.
‘ವೃತ್ತಿಜೀವನ ನಿರ್ಮಾಣ’ (ಕೆರಿಯರ್ ಬಿಲ್ಡಿಂಗ್) ದ ಹೆಸರಿನಲ್ಲಿ ದುಬಾರಿ ಖಾಸಗಿ ಕೇಂದ್ರಗಳು ಹುಲುಸಾಗಿ ಬೆಳೆಯುತ್ತಿವೆ ಮತ್ತು ಅವು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ. ಅದರ ಪರಿಣಾಮವಾಗಿ ಮಾನಸಿಕ ಒತ್ತಡಕ್ಕೊಳಗಾದ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಸಾಕಷ್ಟು ಸಂಪನ್ಮೂಲಗಳನ್ನು ನೀಡದಿರುವ ಕಾರಣ ಉನ್ನತ ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ‘ಸ್ವಯಂ-ವರಮಾನ ಸೃಷ್ಟಿ’ (ಸೆಲ್ಫ್ ಫೈನಾನ್ಸಿಂಗ್) ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಇದರಿಂದಾಗಿ ವೈದ್ಯಕೀಯ (ಮೆಡಿಕಲ್), ವಾಣಿಜ್ಯ (ಕಾಮರ್ಸ್), ಇಂಜನೀಯರಿಂಗ್ ಮುಂತಾದ ಕ್ಷೇತ್ರಗಳಲ್ಲಿನ ತಾಂತ್ರಿಕ ಶಿಕ್ಷಣವನ್ನು ಹುಡುಕಿಕೊಂಡು ಶಿಕ್ಷಣ ತುಲನಾತ್ಮಕವಾಗಿ ಅಗ್ಗವಾಗಿರುವ ವಿದೇಶಿ ಸಂಸ್ಥೆಗಳತ್ತ ದೇಶಾಂತರ ಹೋಗುವಂತಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕಳಪೆ ಗುಣಮಟ್ಟದ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಹ್ವಾನ ನೀಡುತ್ತಿರುವುದರಿಂದ ಪರಿಸ್ಥಿತಿಯು ಇನ್ನೂ ಹದಗೆಡುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಖಾಸಗೀಕರಣವನ್ನು ಉತ್ತೇಜಿಸುತ್ತದೆ ಮಾತ್ರವಲ್ಲದೇ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಳಚಿಹಾಕುವ ಉದ್ದೇಶ ಹೊಂದಿದೆ. ಪದವಿ ಶಿಕ್ಷಣದ ಮಧ್ಯದಲ್ಲೇ ಬಿಟ್ಟುಹೋಗುವ ಹಾಗೂ ಡಿಪ್ಲೊಮಾ ಪಡೆಯುವ ಅವಕಾಶವು ಬಡಕುಟುಂಬಗಳಿಂದ ಹಣ ಕೀಳುವ ಪ್ರಯತ್ನವಷ್ಟೆ. ಶಿಕ್ಷಣವನ್ನು ಹೆಚ್ಚು ಉದ್ಯೋಗ ಆಧಾರಿತ ಯೋಜನೆಯನ್ನಾಗಿ ಮಾಡುವ ಎಲ್ಲಾ ಭರವಸೆಗಳೂ ಟೊಳ್ಳಾಗಿ ಪರಿಣಮಿಸಿವೆ.
ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳಲ್ಲಿ ಬಿಜೆಪಿಯಿಂದ ನೇಮಕವಾದ ರಾಜ್ಯಪಾಲರುಗಳು ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಬಹಿರಂಗವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದ ಹಾಗೂ ಪುದುಚೇರಿ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕಾತಿಯನ್ನು ತಮಿಳುನಾಡಿನ ರಾಜ್ಯಪಾಲರು ನಿರಾಕರಿಸುತ್ತಿರುವುದು ಅದಕ್ಕೊಂದು ದೊಡ್ಡ ಉದಾಹರಣೆಯಾಗಿದೆ.
ಮೋದಿ ಸರ್ಕಾರವು ದೇಶದ ಶಿಕ್ಷಣ ರಂಗವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ೨೦೦೯ ರ ಶಿಕ್ಷಣ ಹಕ್ಕು ಕಾಯಿದೆಯನ್ನು ಬಹುಮಟ್ಟಿಗೆ ಅನೂರ್ಜಿತಗೊಳಿಸಿದೆ ಮತ್ತು ಶಿಕ್ಷಣ ರಂಗವನ್ನು ಕಾರ್ಪೊರೇಟೀಕರಣ ಕೋಮುವಾದೀಕರಣ ಮತ್ತು ಕೇಂದ್ರೀಕರಣಗೊಳಿಸುವ ಮೂಲಕ ಈ ಶಿಕ್ಷಣ ವ್ಯೆವಸ್ಥೆಯನ್ನು ದುರ್ಬಲಗೊಳಿಸಿ ದೇಶದ ಭವಿಷ್ಯವನ್ನು ಹಾಳುಮಾಡಲು ಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟವನ್ನು ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ವಿದ್ಯಾರ್ಥಿ ಯುವಜನರು ಸೋಲಿಸುವ ಮೂಲಕ ತಕ್ಕಪಾಠ ಕಲಿಸಿ ದೇಶದ ಶಿಕ್ಷಣ ವ್ಯೆವಸ್ಥೆಯನ್ನು ಉಳಿಸಿಕೊಳ್ಳಬೇಕೆಂದು ಎಸ್ ಎಫ್ ಐ ಮೈಸೂರು ಜಿಲ್ಲಾ ಸಮಿತಿ ಈ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯದ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಳ್ಳುತ್ತದೆ.