ಮೈಸೂರು: ಕಾಂಗ್ರೆಸ್ ಭ್ರಷ್ಟಾಚಾರದ ಕಡತ ತೆಗೆಯುತ್ತೇವೆ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯ್ತು. ಇಲ್ಲಿವರೆಗೆ ಕಡ್ಲೆಪುರಿ ತಿನ್ನುತ್ತಿದ್ರಾ? ಎಂದು ಲೇವಡಿ ಮಾಡಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಈ ಹಿಂದೆ 5 ವರ್ಷ ವಿರೋಧ ಪಕ್ಷದಲ್ಲಿ ಇರಲಿಲ್ಲವಾ. ಆಗ ಯಾಕೆ ಈ ಭ್ರಷ್ಟಾಚಾರದ ಮಾತು ಹೇಳಲಿಲ್ಲ. ಈಗ ನಾವು ನಿಮ್ಮ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಮಾತು ಹೇಳಿದರೆ ಜನ ನಂಬುತ್ತಾರಾ..? ಭ್ರಷ್ಟಾಚಾರ ವಿಚಾರ ಗೊತ್ತಿದ್ದರೂ ಅದನ್ನ ಮುಚ್ಚಿಡುವುದೂ ಕೂಡ ಅಫೆನ್ಸ್. ಇದು ಸರ್ಕಾರಕ್ಕೆ ಗೊತ್ತಿಲ್ಲವಾ. ಜನರಿಗೆ ಇದೆಲ್ಲವೂ ಅರ್ಥವಾಗುತ್ತಿದೆ ಎಂದರು.
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ‍್ಧರಾಮಯ್ಯ, ಅಕ್ರಮ ನಡೆದಿದೆ ಎಂದು ನನ್ನ ಬಳಿ ಕೂಡ ಬಂದು ಹೇಳಿದ್ರು. ನಾನು ಸಂಬಂಧಪಟ್ಟವರಿಗೆ ತನಿಖೆಗೆ ಹೇಳಿದ್ದೆ. ತನಿಖೆ ನಡೆಯುತ್ತಿದೆ, ಯಾರು ತಪತಸ್ಥರಿದ್ದಾರೆ ಶಿಕ್ಷೆಯಾಗಲಿ ಎಂದರು.
ಮಠಕ್ಕೆ ನೀಡುವ ಅನುದಾನ ಪಡೆಯಲು ಕಮಿಷನ್ ಕೊಡಬೇಕು ಎನ್ನುವ ವಿಚಾರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಅದರ ಬಗ್ಗೆ ನನಗೇನು ಗೊತ್ತಿಲ್ಲ ಎಂದರು.