ಮನೆ ರಾಜ್ಯ ನ್ಯಾಯಾಲಯದ ಆದೇಶ ಧಿಕ್ಕರಿಸಿದ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಭಾಗ ನವೆಂಬರ್ 16 ರಿಂದ ಅಮರಣಾಂತ...

ನ್ಯಾಯಾಲಯದ ಆದೇಶ ಧಿಕ್ಕರಿಸಿದ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಭಾಗ ನವೆಂಬರ್ 16 ರಿಂದ ಅಮರಣಾಂತ ಉಪವಾಸ

0

ಮೈಸೂರು(Mysuru): ನ್ಯಾಯಾಲಯದ ಆದೇಶ ಧಿಕ್ಕರಿಸಿ ಅಮಾಯಕರ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಹಾಕಿ ಗೃಹೋಪಯೋಗಿ ವಸ್ತುಗಳನ್ನು ಬೀದಿಗೆಸೆದು ಅಪಾರ ನಷ್ಟವನ್ನುಂಟು ಮಾಡಿರುವ ಬ್ಯಾಂಕ್ ನವರ ವಿರುದ್ಧ ನವೆಂಬರ್ ೧೬ ರ ಬುಧವಾರದಂದು ಸರಸ್ವತಿಪುರಂನಲ್ಲಿರುವ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಂಭಾಗ ಅಮರಣಾಂತ ಉಪವಾಸ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ರಾಜ್ಯ ಉಪಾಧ್ಯಕ್ಷೆ ಭಾಗ್ಯಮ್ಮ, ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ನೇತೃತ್ವದಲ್ಲಿ ಅಮರಣಾಂತ ಉಪವಾಸ ಹಮ್ಮಿಕೊಳ್ಳಲಾಗಿದೆ ಎಂದ ಅವರು ಕರ್ನಾಟಕ ರಾಜ್ಯ ರೈತ ಸಂಘ – ರೈತ ಪರ್ವ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ,  ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿ ಸಹಯೋಗ ನೀಡಲಿವೆ ಎಂದು ತಿಳಿಸಿದರು.

ನಗರ ಸರಸ್ವತಿಪುರಂನ ಮುಖ್ಯ ರಸ್ತೆಯಲ್ಲಿರುವ ಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌’ನಲ್ಲಿ ಗೃಹ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಕೊರೊನಾ ಹೊಡೆತ ಮತ್ತು ಆರ್ಥಿಕ ತೊಂದರೆಯಿಂದಾಗಿ ಕೆಲವು ತಿಂಗಳುಗಳ ಕಂತನ್ನು ಪಾವತಿ ಮಾಡದೇ ಇದ್ದುದರಿಂದ ಅಸಲು ಮತ್ತು ಬಡ್ಡಿ ಸಾಲವೂ ಸೇರಿ ಸುಮಾರು ನಲವತ್ತು ಲಕ್ಷ ರೂಪಾಯಿ ಹಣವನ್ನು ನೀಡಬೇಕಿದೆ ಎಂದು ಬ್ಯಾಂಕ್‌’ನವರು ಕುಟುಂಬದರಿಗೆ ನೋಟಿಸ್ ನೀಡಿದ್ದರು.

ಆರ್ಥಿಕ ತೊಂದರೆ ಇರುವುದರಿಂದ ಸಾಲದ ಮೊತ್ತವನ್ನು ಪಾವತಿಸಲು ಕೆಲವು ತಿಂಗಳುಗಳ ಕಾಲಾವಕಾಶವನ್ನು ನೀಡಬೇಕೆಂದು ಸದರಿ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್ ಎನ್ ಜಮಾದಾರ್‌ ಅವರಿಗೆ ಮನವಿಯನ್ನು ಕುಟುಂಬದವರು ಮಾಡಿದ್ದರು. ನಂತರ ೬ ಲಕ್ಷ ರೂಪಾಯಿಗಳನ್ನು ಬ್ಯಾಂಕಿನವರು ಕೇಳಿದಂತೆ ರೈತ ಕುಟುಂಬದರು ಪಾವತಿ ಮಾಡಿರುತ್ತಾರೆ.

ಪಿತ್ರಾರ್ಜಿತ ಆಸ್ತಿಯನ್ನು ೧೩ಲಕ್ಷ ರೂಪಾಯಿಗಳಿಗೆ ಮಾರಿ, ಸದರಿ ಹಣದಲ್ಲಿ ಒಂದಿಷ್ಟು ಹಣವನ್ನು ಮನೆಯ ಕಾಮಗಾರಿಗೆ ಬಳಸಿ, ಮನೆಯ ಒಂದು ಭಾಗವನ್ನು ಭೋಗ್ಯಕ್ಕೆ ನೀಡಿ, ಭೋಗ್ಯದ ಹಣ ಮತ್ತು ಆಸ್ತಿ ಮಾರಿದ್ದರಿಂದ ಬಂದಿದ್ದ ಹಣದಲ್ಲಿನ ಉಳಿದ ಹಣವನ್ನು ಬ್ಯಾಂಕಿಗೆ ಪಾವತಿಸಲು ನಿರ್ಧರಿಸಿ ಮನೆಯ ಕಾಮಗಾರಿಯನ್ನು ಮಾಡಿಸುತ್ತಿದ್ದರು.

ಈ ಸಂದರ್ಭದಲ್ಲಿ ಅಂದರೆ ೨೦೨೨ರ ಅಕ್ಟೋಬರ್ ೧೩ ರಂದು ಸಂಜೆ ಸಮಯದಲ್ಲಿ ಬ್ಯಾಂಕ್ ವ್ಯವಸ್ಥಾಪಕ  ಗಂಗಾಧರ್ ಅವರು, ಮನೆಯ ಲ್ಲಿ ರಶ್ಮಿ ಹಾಗೂ ಆಕೆಯ ಕುಟುಂಬದವರು ಇಲ್ಲದ ಸಮಯದಲ್ಲಿ ಬಂದು, ಆಕೆಯ ತಂದೆ ಅನಕ್ಷರಸ್ತರಾದ ರಾಜಶೇಖರ್ ಅವರಿಗೆ ಕೋರ್ಟ್’ನಿಂದ ಆದೇಶವಾಗಿದೆ ನಾಳೆಯೇ ಮನೆ ಖಾಲಿ ಮಾಡಬೇಕೆಂದು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ನೀಡದೇ, ವಕೀಲರೊಂದಿಗೆ ಮಾತನಾಡದೇ ಉದ್ದಟತನ ತೋರಿದ್ದಾರೆ. ಅಲ್ಲದೇ ಮನೆಯವರೊಂದಿಗೆ ಮಾತನಾಡಲು ಮನವಿ ಮಾಡಿದರೂ ಒಪ್ಪಿಕೊಳ್ಳದೇ ಮನೆ ಖಾಲಿ ಮಾಡದೇ ಇದ್ದರೆ ಮನೆಯವರೆಲ್ಲರನ್ನೂ ಜೈಲಿಗೆ ಕಳುಹಿಸುವ ಬೆದರಿಕೆಯನ್ನೂ ಹಾಕಿದ್ದಾರೆ.

ಕುಟುಂಬದವರು  ಬರುವ ಮುನ್ನ ೨೦೨೨ರ ಅಕ್ಟೋಬರ್ ೧೪ ರ ಬೆಳಿಗ್ಗೆ ೧೦ ಗಂಟೆಗೆ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್, ತಮ್ಮ ಸಿಬ್ಬಂದಿಗಳು, ವಕೀಲರು ಹಾಗಳು ಏಳೆಂಟು ಮಂದಿ ಪೊಲೀಸರೊಂದಿಗೆ ಮನೆಗೆ ಆಗಮಿಸಿ ಗೃಹಪಯೋಗಿ ವಸ್ತುಗಳನ್ನು  ಬೀದಿಗೆ ಎಸೆದಿದ್ದಾರೆ ಎಂದು ತಿಳಿಸಿದರು.

ಮನೆಯಲ್ಲಿ ೧೧ ಲಕ್ಷಕ್ಕಿಂತ ಹೆಚ್ಚಾದ ಹಣ ಮತ್ತು ೧೩೦ ಗ್ರಾಂ ಚಿನ್ನದ ಒಡವೆಗಳಿದ್ದು, ೧೧ ಲಕ್ಷ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡು ಮನೆ ಜಪ್ತಿ  ಮಾಡದಂತೆ ಮನವಿ ಮಾಡಿದರೂ ಗಂಗಾಧರ್ ಹಾಗೂ ವಕೀಲ ಕುಮಾರ್ ಆರಾಧ್ಯ ಒಪ್ಪಿಕೊಂಡಿಲ್ಲ.  ಮನೆಯ ಎಲ್ಲಾ ವಸ್ತುಗಳನ್ನು  ಬೀದಿಗೆ ಎಸೆದ ಬಳಿಕ ಮನೆಯ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕಿ, ಮೊಹರು ಮಾಡಿಕೊಂಡು ಹೋಗಿದ್ದು, ಮನೆಯ ಕಾವಲಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಆದರೆ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳು ಏನಾಗಿವೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.

ಉಚ್ಛ ನ್ಯಾಯಾಲಯದ ಆದೇಶವಿದ್ದರೂ ಸಿಗದ ಮನೆಯ ಸ್ವಾಧೀನ

ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ೨೧೨೬೨/೨೦೨೨ ಸಂಖ್ಯೆಯ ದಾವೆ ಹೂಡಿದ್ದು, ನಮ್ಮ ಮನವಿಯನ್ನು ಆಲಿಸಿದ ನ್ಯಾಯಾಲಯವು ನವೆಂಬರ್ ೧೧ರೊಳಗೆ ೧೦ ಲಕ್ಷ ರೂ ನೀಡಿ ಉಳಿದ ಹಣ ಸಾಲದ ಖಾತೆಗೆ ಕಂತಿನ ಮೂಲಕ ಪಾವತಿಸಲು ಮತ್ತು ಕೂಡಲೇ ಸ್ವಾಧೀನ ಪಡೆಯಲು ಆದೇಶ ನೀಡಿರುತ್ತದೆ.

ಅದರಂತೆ ೨೦೨೨ರ ನವೆಂಬರ್ ೭ ರಂದು  ನಾಡನಹಳ್ಳಿ ಶಾಖೆಯ ಕೆನರಾ ಬ್ಯಾಂಕಿನಿಂದ ಪಡೆದ ಹತ್ತು ಲಕ್ಷ ರೂಪಾಯಿಗಳ ಮೌಲ್ಯದ ೨೭೯೯೯೩ ಸಂಖ್ಯೆಯ ಡಿ.ಡಿಯನ್ನು ಅದೇ ದಿನ ಮನವಿ ಪತ್ರದೊಂದಿಗೆ ರೈತ ಕುಟುಂಬದ ವಕೀಲರು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಿಗೆ ನೀಡಿ ನ್ಯಾಯಾಲಯದ ಆದೇಶದ ಪ್ರಕಾರ ಮನೆಯ ಸ್ವಾಧೀನವನ್ನು ಕೊಡುವಂತೆ ಮನವಿ ಮಾಡಿಕೊಂಡರು. ಆ ಸಮಯದಲ್ಲೇ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರು ತಮ್ಮ ವ್ಯವಸ್ಥಾಪಕರಾದ ಗಂಗಾದರ್ ಅವರೊಂದಿಗೆ ಮಾತನಾಡುವಂತೆ ತಮ್ಮ ದೂರವಾಣಿಯಿಂದ ಕರೆ ಮಾಡಿ ಕೊಟ್ಟರು. ರೈತ ಕುಟುಂಬದ ವಕೀಲರು ಡಿ.ಡಿ ನೀಡಿರುವ ವಿಷಯವನ್ನು ತಿಳಿಸಿ ಮನೆಯ ಸ್ವಾಧೀನವನ್ನು ಕೊಡುವಂತೆ ಮನವಿ ಮಾಡಿಕೊಂಡಾಗ, ನಾವು ನೀಡಿದ ಡಿ.ಡಿ ಬ್ಯಾಂಕಿನ ಖಾತೆಗೆ ಜಮಾ ಆದ ನಂತರ ಮನೆಯ ಸ್ವಾಧೀನ ನೀಡುವುದಾಗಿ ತಿಳಿಸಿದ್ದರೂ ಆದರೆ ಇದುವರೆಗೂ ಮನೆಯ ಸ್ವಾಧೀನವನ್ನು ನೀಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.

ಅರ್ಜಿದಾರರ ಆರೋಪವೇನು ?

ರೈತ ಕುಟುಂಬದವರು ಪಾವತಿಸಿರುವ ೬ಲಕ್ಷ ರೂಪಾಯಿಗಳನ್ನು ಸಾಲದ ಮೊತ್ತಕ್ಕೆ ಜಮಾ ಮಾಡಿಕೊಂಡಿರುವುದರಿಂದ ಸದರಿ ನೋಟಿಸ್ ಊರ್ಜಿತವಾಗುವುದಿಲ್ಲ ಮತ್ತು ಸದರಿ ನೋಟಿಸ್’ನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಬ್ಯಾಂಕಿನವರಿಗೆ ಇರುವುದಿಲ್ಲ ಎಂದಿದ್ದಾರೆ.

ಹಣ ಪಾವತಿಸಿದ ವಿಚಾರವನ್ನು ಪಿ.ಸಿ.ಜೆ ಮತ್ತು ಸಿ.ಜೆ.ಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ (C.mis.No 92/2022)  ಮಾಹಿತಿಯನ್ನು ನೀಡದೆ ವಾಸ್ತವಾಂಶವನ್ನು ಮುಚ್ಚಿಟ್ಟು ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಂಡಿರುವುದು ಅಪರಾಧ ಕೃತ್ಯವಾಗಿರುತ್ತದೆ.

ನೊಟೀಸು ನೀಡದೇ ಮತ್ತು ರೈತ ಕುಟುಂಬದವರಿಂದ ಸ್ವಾಧೀನ ಪಡೆಯುವ ಪ್ರಯತ್ನ ಪಡದೆ ಏಕಾಏಕಿ ರೈತ ಕುಟುಂಬದವರ ಮನೆಯೊಳಗೆ ಪ್ರವೇಶಿಸಿರುವುದು, ಬಲವಂತದಿಂದ ಸ್ವಾಧೀನ ತೆಗೆದುಕೊಂಡಿರುವುದು ರೈತ ಕುಟುಂಬದವರ ಸ್ವತ್ತಿಗೆ ಅತಿಕ್ರಮ ಪ್ರವೇಶ ಮಾಡಿದಂತಾಗಿರುತ್ತದೆ.

ನ್ಯಾಯಾಲಯದ ಆದೇಶದ ಪ್ರಕಾರ ಯಥಾಸ್ಥಿತಿಯಲ್ಲಿ ಸ್ವತ್ತನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತೇ ಹೊರತು ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕುವಂತಿಲ್ಲ. ರೈತ ಕುಟುಂಬದವರ ಸಮ್ಮುಖದಲ್ಲಿ ಮಹಜರ್ ಮೂಲಕ ಮನೆಯಲ್ಲಿನ ಸ್ವತ್ತುಗಳ ಬಗ್ಗೆ ದಾಖಲೆಯನ್ನು ಬರೆಯದೆ ರೈತ ಕುಟುಂಬದವರನ್ನು ಮನೆಯಿಂದ ಹೊರಗೆ ನಿಲ್ಲಿಸಿ ಅವರ ಅನುಪಸ್ಥಿತಿಯಲ್ಲಿ ಅವರುಗಳು ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ವಸ್ತುಗಳನ್ನು ಹೊರಗೆ ಹಾಕುವ ಸಂದರ್ಭದಲ್ಲಿ ರೈತ ಕುಟುಂಬದವರ ಮನೆಯಲ್ಲಿದ್ದ ಒಡವೆ ಮತ್ತು ಹಣದಂತಹ ಬೆಲೆ ಬಾಳುವ ವಸ್ತುಗಳನ್ನು ತೆಗೆದಿಟ್ಟುಕೊಂಡಿರುವುದರಿಂದ ಅದೂ ಕಳ್ಳತನ ಮಾಡಿದಂತಾಗಿರುತ್ತದೆ.

ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಬೀದಿಗೆ ಬಿಸಾಕಿರುವುದರಿಂದ ಮತ್ತು ಅಂದಿನಿಂದ ಇಂದಿನವರೆಗೂ ವಸ್ತುಗಳು ಬೀದಿಯಲ್ಲೇ ಬಿದ್ದಿರುವುದರಿಂದ ರೈತ ಕುಟುಂಬದವರಿಗೆ ಆಗಿರುವ ಲಕ್ಷಾಂತರ ರೂಪಾಯಿಗಳ ನಷ್ಟಕ್ಕೆ ಬ್ಯಾಂಕಿನ ಅಧಿಕಾರಿ ಮತ್ತು ಸ್ಥಳದಲ್ಲಿದ್ದ ಬ್ಯಾಂಕಿನ ಸಿಬಂದಿ ಕಾರಣಕರ್ತರಾಗಿರುತ್ತಾರೆ.

ಉಚ್ಛ ನ್ಯಾಯಾಲಯದ ಆದೇಶದಂತೆ ರೈತ ಕುಟುಂಬದವರು ಹತ್ತು ಲಕ್ಷ ರೂಪಾಯಿ ಹಣವನ್ನು ಪಾವತಿ ಮಾಡಿದರೂ, ನ್ಯಾಯಾಲಯದ ಆದೇಶದ ಪ್ರಕಾರ ಸ್ವತ್ತಿನ ಸ್ವಾಧೀನವನ್ನು ರೈತ ಕುಟುಂಬದವರಿಗೆ ಕೊಡದೇ ಇರುವುದು ಕೂಡ ಅಪರಾಧ ಕೃತ್ಯವಾಗಿರುತ್ತದೆ.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಬ್ಯಾಂಕಿನ ವ್ಯವಸ್ಥಾಪಕ ಗಂಗಾಧರ್ ಮತ್ತು ನ್ಯಾಯಾಲಯದ ಪ್ರತಿನಿಧಿಯಾಗಿ ಸ್ಥಳಕ್ಕೆ ಬಂದಿದ್ದ ವಕೀಲರಾದ ಕುಮಾರ್ ಆರಾಧ್ಯ ಹಾಗೂ ಬ್ಯಾಂಕಿನ ಸಿಬಂದಿಗಳು ಮತ್ತು ಇತರೆ ವ್ಯಕ್ತಿಗಳು ಅಮಾಯಕ ಕುಟುಂಬದವರ ಮೇಲೆ ನಡೆಸಿರುವ ದೌರ್ಜನ್ಯ ಮತ್ತು ಅಕ್ರಮ ಸಾಬೀತಾಗುತ್ತದೆ.

ಆದ್ದರಿಂದ ಸದರಿ ವ್ಯಕ್ತಿಗಳ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿ, ಕೂಡಲೇ ರೈತ ಕುಟುಂಬದವರಿಗೆ ಸ್ವತ್ತಿನ ಸ್ವಾಧೀನವನ್ನು ಕೊಡಿಸಿ, ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ರೈತ ಕುಟುಂಬದವರಿಗೆ ನ್ಯಾಯವನ್ನು ಕೊಡಿಸಲು, ಸಾರ್ವಜನಿಕರನ್ನು ಬ್ಯಾಂಕಿನ ಸಾಲದ ಸುಳಿಗೆ ಬೀಳದಂತೆ ತಿಳಿ ಹೇಳಲು ಹಾಗೂ ದಾಬಾಳಿಕೆ ನಡೆಸುತ್ತಿರುವ ಹಣಕಾಸು ಸಂಸ್ಥೆಗಳ ಕಣ್ಣು ತೆರೆಸಲು ಅಮರಣಾಂತ ಉಪವಾಸ ಹಮ್ಮಿಕೊಂಡಿರುವುದಾಗಿ ಮಾನವ  ಭಾಗ್ಯಮ್ಮ ತಿಳಿಸಿದ್ದಾರೆ.

ಹಿಂದಿನ ಲೇಖನತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಖ್ಯಾತಿಯ ಕೃಷ್ಣ ನಿಧನ
ಮುಂದಿನ ಲೇಖನಮಿಜೋರಾಂ ಕಲ್ಲು ಕ್ವಾರಿ ದುರಂತ: 8 ಕಾರ್ಮಿಕರ ಶವ ಹೊರಕ್ಕೆ