ಬೆಂಗಳೂರು (Bengaluru): ‘ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಇದನ್ನೇ ನಾನು ಮೊದಲಿಂದಲೂ ಪ್ರತಿಪಾದಿಸುತ್ತಿದ್ದೇನೆ. ಪಕ್ಷದ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತಿದ್ದೇನೆ ಎಂದು ʻಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಕಾಂಗ್ರೆಸ್ ಖಾಲಿ ಆಗಲಿದೆ’ ಎಂಬ ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯಿಸಿದರು.
ಬೇರೆಯವರು ಏನಾದರೂ ಹೇಳಲಿ. ನಮ್ಮ ಪಕ್ಷದ ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ನಾನು ಕೇದಾರನಾಥಕ್ಕೆ ಕುಟುಂಬ ಸಮೇತ ಹೋಗಿ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸಲು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಇದು ಶಕ್ತಿ ಪ್ರದರ್ಶನ ಅಲ್ಲವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಇನ್ನು ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ. ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಏನೇ ಸಂಘಟನೆ ಆದರೂ ಅದರಿಂದ ಪಕ್ಷಕ್ಕೆ ಒಳ್ಳೆಯದಾದರೆ ಸಾಕು ಎಂದರು.
ಈ ವೇಳೆ ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದರು.