ಮೈಸೂರು: ವಿಷಯ ಜ್ಞಾನದ ಜೊತೆಗೆ ಕೌಶಲ್ಯವನ್ನೂ ವೃದ್ಧಿಸಿಕೊಂಡರೆ ಮಾತ್ರ ವಿಜ್ಞಾನ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ನಗರದ ಮಾನಸ ಗಂಗೋತ್ರಿಯ ರಸಾಯನಶಾಸ್ತ್ರ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ನಡೆದ ‘ಸ್ಟುಡೆಂಟ್ ಕೆರಿಯರ್ ಡೆವಲಪ್‌ಮೆಂಟ್ ಪ್ರೋಗ್ರಾಮ್’ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಸಬ್ಜೆಟ್ ನಾಲೆಡ್ಜ್ ಇರುತ್ತದೆ. ಆದರೆ, ಕಮ್ಯೂನಿಕೇಶನ್ ಸ್ಕಿಲ್, ಸ್ವಯಂ ಆತ್ಮಸ್ಥೆರ್ಯ ಇರುವುದಿಲ್ಲ. ಇದನ್ನು ಮನಗಂಡು ಇಂದು ರಸಾಯನಶಾಸ್ತ್ರ ವಿಭಾಗದ ವತಿಯಿಂದ ಕೆರಿಯರ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಗಿದೆ. ನಾವೆಲ್ಲ ಓದುವಾಗ ವಿಜ್ಞಾನ ವಿಷಯ ಓದುವವರ ಸಂಖ್ಯೆ ಕಡಿಮೆ ಇತ್ತು. ಆದರೆ, ಇಂದು ವಿಜ್ಞಾನ ಓದುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆಯು ಹೆಚ್ಚಾಗಿದ್ದು, ಅವಕಾಶಗಳು ಕಡಿಮೆ ಆಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬೇಕಾದ ಎಲ್ಲಾ ರೀತಿಯ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕಲಿತರೆ ಉದ್ಯೋಗ ಭದ್ರತೆ ಸಿಗುತ್ತದೆ ಎಂದು ಹೇಳಿದರು.
1916ರಲ್ಲಿ ಮೈಸೂರು ವಿವಿಯನ್ನು ಸಂಘಟಿಸುವ ಮೊದಲೇ ರಸಾಯನಶಾಸ್ತ್ರ ವಿಭಾಗವನ್ನು ತೆರೆಯಲಾಗಿತ್ತು. 1910ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಕಾರ್ಯಾರಂಭ ಮಾಡಿತ್ತು. 1917ರಲ್ಲಿ ಸಾವಯವ ರಸಾಯನಶಾಸ್ತ್ರವೂ ಆರಂಭವಾಯಿತು. ಎಂ.ಜಿ.ಶ್ರೀನಿವಾಸ್ ರಾವ್ ಈ ವಿಷಯದಲ್ಲಿ ಪರಿಣಿತಿ ಸಾಧಿಸಿದ್ದರು. ಅಂತೆಯೇ ಸಾಮಾನ್ಯ ರಸಾಯನಶಾಸ್ತ್ರದಲ್ಲಿ ಡಾ.ಬಿ.ಸಂಜೀವ್ ರಾವ್ ಪ್ರಾಧ್ಯಾಪಕರಾಗಿದ್ದರು ಎಂದು ಮೆಲುಕು ಹಾಕಿದರು.
1960ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ರಸಾಯನಶಾಸ ವಿಭಾಗ ಇತ್ತು. ಪ್ರೊ.ಎನ್.ಎ. ನಿಕಮ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಸಮಯದಲ್ಲಿ ಅಂದರೆ 1962ರಲ್ಲಿ ಈ ವಿಭಾಗವನ್ನು ಯುವರಾಜ ಕಾಲೇಜಿನಿಂದ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಜಯಲಕ್ಷ್ಮಿ ಅರಮನೆಯ ಒಂದು ಭಾಗಕ್ಕೆ ಸ್ಥಳಾಂತರಿಸಲಾಯಿತು. ಡಾ.ಜಿ. ನಾರಾಯಣ್ ಅವರು ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾದರು. 1964ರಲ್ಲಿ ವಿಭಾಗವನ್ನು ಈಗಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಪ್ರೊ. ಜಿ. ನಾರಾಯಣ್ ಅವರು ಉತ್ಸಾಹದಿಂದ ಕೆಲಸ ಮಾಡಿದರು ಮತ್ತು ವಿಭಾಗವನ್ನು ಸುಭದ್ರವಾಗಿ ಸಂಘಟಿಸಿದರು ಎಂದು ತಿಳಿಸಿದರು.
ವರ್ಷಗಳು ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ 24ರಿಂದ 74ಕ್ಕೆ ಜಿಗಿಯಿತು. ಒಂಭತ್ತು ಮಂದಿ ಇದ್ದ ಪ್ರಾಧ್ಯಾಪಕರು 21 ಆದರು. ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ 50ಕ್ಕೆ ಹೆಚ್ಚಿಸಲಾಯಿತು. ವಿಭಾಗವು ಸ್ನಾತಕೋತ್ತರ ತರಗತಿಗಳನ್ನು ಕಲಿಸುವುದರ ಜೊತೆಗೆ ಸಂಶೋಧನಾ ಚಟುವಟಿಕೆಗಳಿಂದ ತುಂಬಿತ್ತು ಎಂದು ಹಳೆ ದಿನಗಳ ಕುರಿತು ನೆನಪು ಹಂಚಿಕೊಂಡರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ಎಂಡಿ, ಐಎಎಸ್ ಅಧಿಕಾರಿ ಬಸವರಾಜು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಪಿ.ಸದಾಶಿವ, ರಸಾಯನ ಶಾಸ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ ನಾಯ್ಕ್ ಸೇರಿದಂತೆ ಇತರರು ಇದ್ದರು.