ಮಂಗಳೂರು: ಕರ್ನಾಟಕ ಸರ್ಕಾರ ಕೋಮುಗಲಭೆ, ಸಂವಿಧಾನಿಕ ಶಿಸ್ತಿಗೆ ಧಕ್ಕೆ ತರಬಲ್ಲ ಸರಣಿ ಹತ್ಯೆ, ಮತ್ತು ಸಾಮಾಜಿಕ ಶಾಂತಿಗೆ ಧಕ್ಕೆಯಾಗಬಹುದಾದ ಘಟನೆಗಳನ್ನು ತಡೆಯುವ ಉದ್ದೇಶದಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಿಗಾ ಇಡುವ ವಿಶೇಷ ಕಾರ್ಯಪಡೆ ಘಟಕವನ್ನು ಮಂಗಳೂರಿನಲ್ಲಿ ಅಧಿಕೃತವಾಗಿ ಉದ್ಘಾಟಿಸಿದೆ.
ಈ ಘಟಕವನ್ನು ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಶುಕ್ರವಾರ ಬೆಳಗ್ಗೆ ಮಂಗಳೂರಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರುಗಳು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಕೋಮುಗಲಭೆ ಮತ್ತು ಸಂವೇದನಶೀಲ ಪ್ರದೇಶಗಳಲ್ಲಿ ತ್ವರಿತ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಘಟಕವನ್ನು ರಚಿಸಲಾಗಿದೆ. ಈ ಘಟಕದಲ್ಲಿ ಒಟ್ಟು 248 ಪೊಲೀಸರುನ್ನು ನೇಮಿಸಲಾಗಿದೆ. ಈ ತಂಡವನ್ನು ಮೂರು ಕಂಪೆನಿಗಳಾಗಿ ವಿಭಾಗಿಸಿ ಕಾರ್ಯನಿರ್ವಹಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು:
- ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್
- ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
- ವಿಧಾನ ಪರಿಷತ್ ಸದಸ್ಯರು ಐವನ್ ಡಿಸೋಜ ಮತ್ತು ಮಂಜುನಾಥ್ ಭಂಡಾರಿ
- ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ
- ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್. ಮುರುಗನ್
- ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್
- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
- ವಿಶೇಷ ಕಾರ್ಯಪಡೆ ಘಟಕದ ಡಿಐಜಿಪಿ ಪ್ರಭಾರ ವಹಿಸಿಕೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್.
ಗೃಹಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, “ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ. ಕೋಮು ಗಲಭೆ, ಭೀತಿಯ ವಾತಾವರಣ ಹುಟ್ಟುಹಾಕುವಂತಹ ಪ್ರಯತ್ನಗಳಿಗೆ ಸರಿಯಾದ ತಡೆ ನೀಡುವಲ್ಲಿ ಈ ವಿಶೇಷ ಘಟಕ ಪ್ರಮುಖ ಪಾತ್ರವಹಿಸಲಿದೆ” ಎಂದು ಹೇಳಿದರು.














