ಮನೆ ಪೌರಾಣಿಕ ಗಾಲವ ಚರಿತೆ

ಗಾಲವ ಚರಿತೆ

0

ವಿಶ್ವಾಮಿತ್ರನ ಶಿಷ್ಯ ಗಾಲವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೦೪-೧೨೧) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ದೇವರ್ಷಿ ನಾರದನು ಹಠವು ಒಳ್ಳೆಯದಲ್ಲ ಎಂದು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು.

Join Our Whatsapp Group

 ಹಿಂದೆ ತಪಸ್ಸಿನಲ್ಲಿದ್ದ ವಿಶ್ವಾಮಿತ್ರನನ್ನು ಪರೀಕ್ಷಿಸಲೋಸುಗ ಸ್ವಯಂ ಧರ್ಮನು ಭಗವಾನ್ ಋಷಿ ವಸಿಷ್ಠನಾಗಿ ಬಂದನು. ಸಪ್ತರ್ಷಿಗಳಲ್ಲೊಬ್ಬನ ವೇಷವನ್ನು ತಾಳಿ ಹಸಿದು ಊಟಮಾಡಲು ಕೌಶಿಕನ ಆಶ್ರಮಕ್ಕೆ ಬಂದನು. ಆಗ ವಿಶ್ವಾಮಿತ್ರನು ಸಂಭ್ರಾಂತನಾಗಿ ಚರುವನ್ನು ತಯಾರಿಸಲು ಪ್ರಾರಂಭಿಸಿದನು. ಉತ್ತಮ ಅನ್ನವನ್ನು ತಯಾರಿಸುವ ಪ್ರಯತ್ನದಲ್ಲಿ ಅವನನ್ನು ನೋಡಿಕೊಳ್ಳಲಿಕ್ಕಾಗಲಿಲ್ಲ. ಅನ್ಯ ತಪಸ್ವಿಗಳು ನೀಡಿದ ಅನ್ನವನ್ನು ತಿಂದ ನಂತರವೇ ವಿಶ್ವಾಮಿತ್ರನು ಬಿಸಿ ಬಿಸಿಯಾದ ಅನ್ನವನ್ನು ಹಿಡಿದುಕೊಂಡು ಬಂದನು. “ಊಟಮಾಡಿಯಾಯಿತು! ನಿಲ್ಲು!” ಎಂದು ಹೇಳಿ ಭಗವಾನನು ಹೊರಟುಹೋದನು. ಮಹಾದ್ಯುತಿ ವಿಶ್ವಾಮಿತ್ರನು ನಿಂತುಕೊಂಡೇ ಇದ್ದನು. ಪಾತ್ರೆಯನ್ನು ನೆತ್ತಿಯಮೇಲಿರಿಸಿ, ಎರಡೂ ಕೈಗಳಿಂದ ಹಿಡಿದುಕೊಂಡು ಅಲ್ಲಿಯೇ ಸ್ಥಾಣುವಿನಂತೆ ಅಲುಗಾಡದೇ ಗಾಳಿಯನ್ನು ಸೇವಿಸುತ್ತಾ ನಿಂತುಕೊಂಡನು. ಮುನಿ ಗಾಲವನು ಗೌರವದಿಂದ, ಪ್ರಿಯವಾದುದನ್ನು ಮಾಡಲೋಸುಗ, ಸೌಹಾರ್ದದಿಂದ, ಮಾನವನ್ನಿತ್ತು ಅವನ ಶುಶ್ರೂಷಣೆಯ ಪ್ರಯತ್ನದಲ್ಲಿ ತೊಡಗಿದನು. ನೂರು ವರ್ಷಗಳು ಪೂರ್ಣವಾದ ನಂತರ ಧರ್ಮನು ವಸಿಷ್ಠನ ವೇಶವನ್ನು ತಳೆದು ಊಟವನ್ನು ಬಯಸಿ ಕೌಶಿಕನಲ್ಲಿಗೆ ಪುನಃ ಬಂದನು. ತಲೆಯ ಮೇಲೆ ಪಾತ್ರೆಯನ್ನು ಹೊತ್ತು ವಾಯುವನ್ನೇ ಸೇವಿಸುತ್ತಾ ನಿಂತಿರುವ ಧೀಮತ ಮಹರ್ಷಿ ವಿಶ್ವಾಮಿತ್ರನನ್ನು ಅವನು ನೋಡಿದನು. ಆಗ ಆ ಮುನಿ ಧರ್ಮನು ಆಗತಾನೇ ತಯಾರಿಸಿದ ಹಾಗೆ ಬಿಸಿಬಿಸಿಯಾಗಿರುವ ಆ ಅನ್ನವನ್ನು ಸ್ವೀಕರಿಸಿ, ಉಂಡು, “ವಿಪ್ರರ್ಷೇ! ನಿನ್ನಿಂದ ಪ್ರೀತನಾಗಿದ್ದೇನೆ!” ಎಂದು ಹೇಳಿ ಹೊರಟುಹೋದನು. ಧರ್ಮನ ವಚನದಂತೆ ಆಗ ವಿಶ್ವಾಮಿತ್ರನು ಕ್ಷತ್ರಭಾವವನ್ನು ಕಳೆದುಕೊಂಡು ಬ್ರಾಹ್ಮಣತ್ವವನ್ನು ಪಡೆದು ಸಂತೋಷಗೊಂಡನು.

ತಪಸ್ವಿ ವಿಶ್ವಾಮಿತ್ರನಾದರೋ ಶಿಷ್ಯ ಗಾಲವನ ಶುಶ್ರೂಷೆ, ಭಕ್ತಿ, ಪ್ರೀತಿಯನ್ನು ಮನ್ನಿಸಿ ಅವನಿಗೆ ಹೇಳಿದನು: “ವತ್ಸ! ಗಾಲವ! ನನ್ನಿಂದ ಅಪ್ಪಣೆಯಿದೆ. ನಿನಗಿಷ್ಟಬಂದಂತೆ ಹೋಗು!”

ಹೀಗೆ ಹೇಳಲು ಪ್ರೀತನಾಗಿ ಗಾಲವನು ಮಹಾದ್ಯುತಿ, ಮುನಿಸತ್ತಮ, ವಿಶ್ವಾಮಿತ್ರನಿಗೆ ಈ ಮಧುರ ಮಾತನ್ನಾಡಿದನು.  “ಗುರುವಿನ ಕಾರ್ಯಮಾಡಿದ ನಿಮಗೆ ದಕ್ಷಿಣೆಯನ್ನಾಗಿ ಏನನ್ನು ಕೊಡಲಿ? ದಕ್ಷಿಣೆಯನ್ನಿತ್ತರೇ ಮಾನವನ ಕರ್ಮವು ಸಿದ್ಧಿಯಾಗುತ್ತದೆ. ದಕ್ಷಿಣೆಗಳಿಂದಲೇ ಸೃಷ್ಟಿಯಾದವರು ಅಪವರ್ಗದಲ್ಲಿ ಭೋಗಿಸುತ್ತಾರೆ. ಸ್ವರ್ಗದಲ್ಲಿ ಕ್ರತುಗಳ ಫಲ, ಸದ್ಭಾವಿಗಳ ಶಾಂತಿ ದಕ್ಷಿಣೆಯೆಂದು ಹೇಳುತ್ತಾರೆ. ಗುರು ದಕ್ಷಿಣೆಯಾಗಿ ನಿಮಗೆ ಏನನ್ನು ತರಲೆನ್ನುವುದನ್ನು ನೀವು ಹೇಳಬೇಕು.”

ಭಗವಾನ್ ವಿಶ್ವಾಮಿತ್ರನು ತನ್ನ ಶುಶ್ರೂಷಣೆಯಿಂದಲೇ ಎಲ್ಲವನ್ನು ಗಳಿಸಿದ್ದಾನೆ ಎಂದು ತಿಳಿದು ಪುನಃ ಪುನಃ “ಹೋಗು! ಹೋಗು!” ಎಂದು ಪ್ರಚೋದಿಸಿದನು. “ಈಗಾಗಲೇ ಮಾಡಿದ್ದೀಯೆ. ಹೋಗು ಹೋಗು!” ಎಂದು ವಿಶ್ವಾಮಿತ್ರನು ಹೇಳಲು ಗಾಲವನು “ಏನನ್ನು ಕೊಡಲಿ?” ಎಂದು ಬಹಳ ಬಾರಿ ಕೇಳಿದನು. ತಪಸ್ವಿ ಗಾಲವನು ಹೀಗೆ ಬಹುಬಾರಿ ಹಠವನ್ನು ಮಾಡಲು ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದ ವಿಶ್ವಾಮಿತ್ರನು ಇದನ್ನು ಹೇಳಿದನು: “ಗಾಲವ! ಹೋಗು! ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಚಂದ್ರನಂತೆ ಬಿಳಿಯಾಗಿರುವ ಕುದುರೆಗಳನ್ನು ನನಗೆ ತಂದು ಕೊಡು! ತಡಮಾಡಬೇಡ!”

ಧೀಮತ ವಿಶ್ವಾಮಿತ್ರನು ಹೀಗೆ ಹೇಳಲು ಗಾಲವನಿಗೆ ನಿಲ್ಲಲೂ, ಮಲಗಲೂ, ಊಟಮಾಡಲೂ ಆಗಲಿಲ್ಲ. ಅವನು ಸ್ವಲ್ಪವೇ ಸಮಯದಲ್ಲಿ ಚಿಂತಾಶೋಕಪರಾಯಣನಾಗಿ ಹಳದಿಯಾಗಿ, ಶೋಕಿಸುತ್ತ ಸಿಟ್ಟಿನಿಂದ ಉರಿಯುತ್ತಾ ಅಸ್ತಿಯಂತಾದನು. “ಶ್ರೀಮಂತ ಮಿತ್ರರನ್ನು ಎಲ್ಲಿ ಹುಡುಕಲಿ? ಹಣವನ್ನು ಎಲ್ಲಿಂದ ತರಲಿ? ಉಳಿತಾಯವಾದರೂ ಎಲ್ಲಿದೆ? ಚಂದ್ರನಂತೆ ಬಿಳುಪಾದ ಎಂಟುನೂರು ಕುದುರೆಗಳನ್ನು ನಾನು ಎಲ್ಲಿಂದ ತರಲಿ? ನನಗೆ ಊಟದಲ್ಲಿ ಆಸಕ್ತಿ ಎಲ್ಲಿದೆ? ನನಗೆ ಸುಖದಲ್ಲಿ ಆಸಕ್ತಿ ಎಲ್ಲಿದೆ? ಜೀವನದಲ್ಲಿಯೇ ನನಗೆ ಶ್ರದ್ಧೆ ಎಲ್ಲಿದೆ? ನಾನಿನ್ನು ಏಕೆ ಜೀವಿಸಿರಬೇಕು? ಸಮುದ್ರದ ಆಚೆ ಹೋಗಿ ಅಥವಾ ಭೂಮಿಯ ತುದಿಗೆ ಹೋಗಿ ನನ್ನನ್ನು ಮುಕ್ತಗೊಳಿಸುತ್ತೇನೆ. ನಾನು ಜೀವಿಸಿ ಏನು ಪ್ರಯೋಜನ? ಧನವಿಲ್ಲದವನಿಗೆ, ಹಣವನ್ನು ಸಂಪಾದಿಸದವನಿಗೆ, ವಿವಿಧ ಫಲಗಳಿಂದ ವಂಚಿತನಾದವನಿಗೆ, ಸಾಲವನ್ನು ಹೊತ್ತಿರುವವನಿಗೆ ಸುಖವು ಎಲ್ಲಿಂದ ಬರುತ್ತದೆ? ಸುಹೃದಯರು ಪ್ರೀತಿಯಿಂದ ನೀಡಿದ ಸಹಾಯಧನವನ್ನು ಬಳಸಿ ಅದನ್ನು ಹಿಂದಿರುಗಿಸಲು ಅಶಕ್ತನಾದವನಿಗೆ ಜೀವಿಸಿರುವುದಕ್ಕಿಂತ ಸಾಯುವುದೇ ಮೇಲು. ಮಾಡುತ್ತೇನೆ ಎಂದು ಹೇಳಿ ಕರ್ತವ್ಯವನ್ನು ಮಾಡದೇ ಇದ್ದವನು ಸುಳ್ಳುಹೇಳಿದುದಕ್ಕೆ ಉರಿದು ಸಂಪೂರ್ಣವಾಗಿ ನಾಶಹೊಂದುತ್ತಾನೆ. ಸುಳ್ಳುಹೇಳಿದವನಿಗೆ ರೂಪವಿರುವುದಿಲ್ಲ, ಸುಳ್ಳುಹೇಳಿದವನಿಗೆ ಸಂತತಿಯಿರುವುದಿಲ್ಲ, ಸುಳ್ಳುಹೇಳಿದವನಿಗೆ ಅಧಿಕಾರವಿರುವುದಿಲ್ಲ. ಶುಭ ಗತಿಯಾದರೂ ಎಲ್ಲಿರುತ್ತದೆ? ಕೃತಘ್ನನಿಗೆ ಯಶಸ್ಸು ಎಲ್ಲಿ ಸಿಗುತ್ತದೆ? ಸ್ಥಾನವೆಲ್ಲಿ? ಸುಖವೆಲ್ಲಿ? ಅಶ್ರದ್ಧೆಯುಳ್ಳವನು ಕೃತಘ್ನನೇ ಸರಿ. ಕೃತಘ್ನನಿಗೆ ಮೋಕ್ಷವಿಲ್ಲ. ಧನವಿಲ್ಲದಿದ್ದರೆ ಜೀವವಿಲ್ಲದಂತೆ. ಆ ಪಾಪಿಗೆ ಪಾಪದ ತಂತ್ರಣವೆಲ್ಲಿ? ಆ ಪಾಪಿಯು ಮಾಡಿದುದೆಲ್ಲವನ್ನೂ ನಾಶಪಡಿಸಿ, ನಿಶ್ಚಿತವಾಗಿಯೂ ವಿನಾಶಹೊಂದುತ್ತಾನೆ. ನಾನೇ ಆ ಪಾಪಿ, ಕೃತಘ್ನ, ಕೃಪಣ, ಸುಳ್ಳುಬುರುಕನೆನಿಸಿಕೊಂಡು ಬಿಟ್ಟಿದ್ದೇನೆ. ಗುರುವಿನಿಂದ ನನ್ನ ಕೆಲಸಗಳನ್ನು ಮಾಡಿಸಿಕೊಂಡು ಅವನು ಹೇಳಿದಂತೆ ಮಾಡಲಿಕ್ಕಾಗುತ್ತಿಲ್ಲವಲ್ಲ! ಉತ್ತಮ ಪ್ರಯತ್ನವನ್ನು ಮಾಡಿ ನನ್ನ ಪ್ರಾಣಗಳನ್ನು ತೊರೆಯುತ್ತೇನೆ. ಇದಕ್ಕೂ ಮೊದಲು ದೇವತೆಗಳಿಂದ ಯಾವ ಸಂಪತ್ತನ್ನೂ ಕೇಳಿರಲಿಲ್ಲ. ಎಲ್ಲಾ ತ್ರಿದಶರೂ ಇದಕ್ಕಾಗಿಯೇ ನನ್ನನ್ನು ಯಜ್ಞಗಳಲ್ಲಿ ಗೌರವಿಸುತ್ತಾರೆ. ನಾನಾದರೋ ಈಗ ವಿಬುಧಶ್ರೇಷ್ಠ, ದೇವ, ತ್ರಿಭುವನೇಶ್ವರ, ಗತಿಮತರಲ್ಲಿ ಶ್ರೇಷ್ಠ, ವಿಷ್ಣು, ಕೃಷ್ಣನ ಮೊರೆಹೋಗುತ್ತೇನೆ. ಯಾರಿಂದ ಸರ್ವ ಭೋಗಗಳು ಹುಟ್ಟಿ ಸುರಾಸುರರಲ್ಲಿ ವ್ಯಾಪಿಸಿಕೊಂಡಿವೆಯೋ ಆ ಮಹಾಯೋಗಿ, ಅವ್ಯಯನನ್ನು ತಲೆಬಾಗಿ ನೋಡಲು ಇಚ್ಛಿಸುತ್ತೇನೆ.”

ಹೀಗೆ ಹೇಳಲು ಅವನ ಸಖ ವಿನತಾತ್ಮಜ ಗರುಡನು ತೋರಿಸಿಕೊಂಡನು ಮತ್ತು ಸಂತೋಷಗೊಂಡು ಅವನಿಗೆ ಹಿತವಾದುದನ್ನು ಮಾಡುವ ಆಸೆಯಿಂದ ಹೇಳಿದನು: “ನೀನು ನನ್ನ ಪ್ರಿಯ ಸಖ! ತಾನು ಸುಖದಲ್ಲಿರುವಾಗ ಸ್ನೇಹಿತನ ಆಸೆ-ಅಭಿಲಾಶೆಗಳನ್ನು ಪೂರೈಸುವುದು ಸ್ನೇಹಿತನ ಕರ್ತವ್ಯ. ದ್ವಿಜ! ವಾಸವನ ತಮ್ಮನೇ ನನ್ನಲ್ಲಿರುವ ಸಂಪತ್ತು. ಇದಕ್ಕೂ ಮೊದಲು ನಿನಗೋಸ್ಕರ ನಾನು ಅವನಲ್ಲಿ ಮಾತನಾಡಿದ್ದೆ. ಅವನು ನನ್ನ ಬಯಕೆಯನ್ನು ಪೂರೈಸಲು ಒಪ್ಪಿಕೊಂಡಿದ್ದಾನೆ. ಬಾ! ನಾನು ಮತ್ತು ನೀನು ಒಟ್ಟಿಗೇ ಹೋಗೋಣ! ನಾನು ನಿನ್ನನ್ನು ಸುಖವಾಗಿ ಆಕಡೆ ಅಥವಾ ಭೂಮಿಯ ಅಂಚಿಗೆ ಕರೆದೊಯ್ಯುತ್ತೇನೆ. ಗಾಲವ! ತಡಮಾಡಬೇಡ!”

ಹೀಗೆ ಹೇಳಿ ಗರುಡನು ಪ್ರತಿಯೊಂದು ದಿಕ್ಕನ್ನೂ ತೋರಿಸುತ್ತಾ ಅವುಗಳನ್ನು ವರ್ಣಿಸತೊಡಗಿದನು: “ಅಜ್ಞಾತ ಯೋನಿ ದೇವನ ಅಪ್ಪಣೆಯಾಗಿದೆ. ಮೊದಲು ಯಾವದಿಕ್ಕನ್ನು ನೋಡಲು ಬಯಸುತ್ತೀಯೆ ಹೇಳು. ಅಲ್ಲಿಗೆ ಕರೆದೊಯ್ಯುತ್ತೇನೆ. ಪೂರ್ವ ಅಥವಾ ದಕ್ಷಿಣಕ್ಕೆ ಕೊಂಡೊಯ್ಯಲೋ ಅಥವಾ ಪಶ್ಚಿಮ ಅಥವಾ ಉತ್ತರ ದಿಕ್ಕಿಗೋ? ಯಾವ ದಿಕ್ಕಿನಲ್ಲಿ ಹೋಗಲಿ ಎಂದು ಹೇಳು! ಎಲ್ಲಿ ಸರ್ವಲೋಕಪ್ರಭಾವನ ಸೂರ್ಯನು ಮೊದಲು ಉದಯಿಸುತ್ತಾನೋ, ಎಲ್ಲಿ ಸಂಧ್ಯಾಸಮಯದಲ್ಲಿ ಸಾಧ್ಯರು ತಪಸ್ಸಿನಲ್ಲಿ ತೊಡಗುತ್ತಾರೋ, ಎಲ್ಲಿ ಈ ಜಗತ್ತನ್ನೇ ವ್ಯಾಪಿಸಿದ ಬುದ್ಧಿಯು ಮೊದಲು ಹುಟ್ಟಿತೋ, ಎಲ್ಲಿ ಸ್ವಯಂ ಧರ್ಮ ಮತ್ತು ಅವನ ಎರಡು ಕಣ್ಣುಗಳು ಸ್ಥಾಪಿತವಾಗಿವೆಯೋ, ಎಲ್ಲಿ ಯಾಗಮುಖದಲ್ಲಿ ಸುರಿದ ತುಪ್ಪದ ಆಹುತಿಯು ಎಲ್ಲ ದಿಕ್ಕುಗಳಲ್ಲಿ ಹರಿದುಹೋಯಿತೋ ಇದೇ ದಿವಸದ ಮತ್ತು ಕಾಲದ ದ್ವಾರ. ಅಲ್ಲಿ ದಕ್ಷನ ಹೆಣ್ಣುಮಕ್ಕಳು ಹಿಂದೆ ಮಕ್ಕಳನ್ನು ಹಡೆದರು. ಆ ದಿಕ್ಕಿನಲ್ಲಿಯೇ ಕಶ್ಯಪನ ಆತ್ಮಸಂಭವರು ಪ್ರವೃದ್ಧರಾದರು. ಇದು ಸುರರ ಸಂಪತ್ತಿನ ಮೂಲ. ಏಕೆಂದರೆ ಇಲ್ಲಿಯೇ ಶಕ್ರನು ಸುರರಾಜ್ಯದಿಂದ ಅಭಿಷಿಕ್ತನಾಗಿದ್ದನು. ದೇವತೆಗಳು ಇಲ್ಲಿಯೇ ತಪಸ್ಸನ್ನಾಚರಿಸಿದರು. ಈ ಕಾರಣದಿಂದಲೇ ಇದಕ್ಕೆ ಪೂರ್ವದಿಕ್ಕೆಂದು ಕರೆಯುತ್ತಾರೆ. ಮೊದಲ ಕಾಲಗಳಲ್ಲಿ ಪೂರ್ವವು ಸುರರಿಂದ ತುಂಬಿಹೋಗಿತ್ತು. ಮೊದಲ ಪೂರ್ವಜರು ಇಲ್ಲಿಯೇ ಆಶಯದಿಂದ ನೋಡಿದುದು. ಸುಖವನ್ನು ಬಯಸಿದ ದೇವತೆಗಳೂ ಕೂಡ ಇಲ್ಲಿಯೇ ಮೊದಲ ಕರ್ಮಗಳನ್ನು ನೆರವೇರಿಸಿದರು. ಅಲ್ಲಿ ಹಿಂದೆ ಭಗವಾನ್ ಲೋಕಭಾವನನು ವೇದಗಳನ್ನು ಹಾಡಿದನು. ಅಲ್ಲಿಯೇ ಸೂರ್ಯನು ಸಾವಿತ್ರಿಗೆ ಆ ಬ್ರಹ್ಮವಾದಿ ಗಾಯತ್ರಿಯನ್ನು ಹೇಳಿಕೊಟ್ಟನು. ಅಲ್ಲಿಯೇ ಸೂರ್ಯನು ಯಜುರ್ವೇದವನ್ನು ಯಾಜ್ಞವಲ್ಕ್ಯನಿಗೆ ನೀಡಿದನು. ಅಲ್ಲಿಯೇ ಕ್ರತುಗಳಲ್ಲಿ ವರಗಳನ್ನು ಪಡೆದು ಸುರರು ಸೋಮವನ್ನು ಕುಡಿದರು. ಅಲ್ಲಿ ಆಹುತಿಗಳಿಂದ ತೃಪ್ತವಾಗಿ ಯಜ್ಞಗಳು ಸ್ವ-ಯೋನಿಯಲ್ಲಿ ಹುಟ್ಟಿದವುಗಳನ್ನು ಭುಂಜಿಸಿದವು. ಅಲ್ಲಿ ಮೊದಲು ವರುಣನು ಪಾತಾಲವನ್ನು ಸೇರಿ ಸಂಪತ್ತನ್ನು ಪಡೆದನು. ಇಲ್ಲಿಯೇ ಪೌರಾಣಿಕ ವಸಿಷ್ಠನ ಮೊದಲ ಜನನ, ಪ್ರತಿಷ್ಠೆ ಮತ್ತು ನಿಧನಗಳು ಕಾಣಿಸಿಕೊಂಡವು. ಇಲ್ಲಿಯೇ ಓಂಕಾರದ ನೂರಾರು ಶಾಕೆಗಳು ಹುಟ್ಟಿಕೊಂಡವು. ಇಲ್ಲಿಯೇ ಮುನಿಗಳು ಧೂಮಗಳಾಗಿ ಹವಿಸ್ಸು ಮತ್ತು ಸೋಮಗಳನ್ನು ಕುಡಿಯುತ್ತಾರೆ. ಇಲ್ಲಿಯೇ ಶಕ್ರನು ವರಾಹಾದಿ ವನ್ಯ ಮೃಗಗಳನ್ನು ಬೇಟೆಯಾಡಿ ದೇವತೆಗಳಿಗೆ ಹಂಚಿದನು. ಇಲ್ಲಿಯೇ ವಿಭಾವಸು ಉದಯನು ಕೆಟ್ಟ ಮತ್ತು ಕೃತಘ್ನ ಮನುಷ್ಯ-ಅಸುರರೆಲ್ಲರನ್ನೂ ಕ್ರೋಧದಿಂದ ಸುಡುತ್ತಾನೆ. ಇದು ತ್ರಿಲೋಕದ, ಸ್ವರ್ಗದ ಮತ್ತು ಸುಖದ ದ್ವಾರ. ನಿನಗಿಷ್ಟವಾದರೆ ಈ ಪೂರ್ವದಿಕ್ಕಿನ ಭಾಗಕ್ಕೆ ಹೋಗೋಣ. ಗಾಲವ! ನಾನು ನನಗೆ ಪ್ರಿಯರಾದವರ ಕಾರ್ಯವನ್ನು ಮಾಡಲು ಸರ್ವದಾ ಸಿದ್ಧನಿದ್ದೇನೆ. ನಿನಗೆ ಬೇರೆಯೆಲ್ಲಿಯಾದರೂ ಹೋಗಬೇಕೆಂದಿದ್ದರೆ ಅದನ್ನೂ ಹೇಳು. ನಾನು ಈಗ ಅನ್ಯ ದಿಕ್ಕುಗಳ ಕುರಿತು ಹೇಳುತ್ತೇನೆ.

“ಪೂರ್ವದಲ್ಲಿ ಶ್ರೌತಿ ವಿವಸ್ವತನು ಇದನ್ನು ಗುರುವಿಗೆ ದಕ್ಷಿಣೆಯನ್ನಾಗಿತ್ತನಲ್ಲವೇ? ಅದರಿಂದಲೇ ಈ ದಿಕ್ಕಿಗೆ ದಕ್ಷಿಣ ಎಂಬ ಹೆಸರು ಬಂದಿತು. ಅಲ್ಲಿ ಮೂರೂ ಲೋಕಗಳ ಪಿತೃಗಳು ನೆಲೆಸಿರುತ್ತಾರೆ. ಧೂಮವನ್ನು ಕುಡಿಯುವ ದೇವತೆಗಳೂ ಅಲ್ಲಿ ನಿವಾಸಿಸುತ್ತಾರೆ ಎಂದು ಕೇಳಿದ್ದೇವೆ. ಅಲ್ಲಿ ವಿಶ್ವೇದೇವರೂ ಕೂಡ ಪಿತೃಗಳೊಂದಿಗೆ ವಾಸಿಸುತ್ತಾರೆ. ಲೋಕಗಳಲ್ಲಿಯ ಯಜ್ಞಗಳಲ್ಲಿ ಅವರೂ ಕೂಡ ಹವಿಸ್ಸುಗಳ ಸಮಭಾಗಿಗಳು. ಇದನ್ನು ಧರ್ಮನ ಎರಡನೆಯ ದ್ವಾರವೆಂದು ಕರೆಯುತ್ತಾರೆ. ಇಲ್ಲಿರುವವರ ಕಾಲವನ್ನು ತ್ರುಟಿಶ ಮತ್ತು ಲವಶಗಳಂತೆ ಲೆಖ್ಕಮಾಡಿ ನಿಶ್ಚಯಿಸುತ್ತಾರೆ. ಇಲ್ಲಿ ನಿತ್ಯವೂ ದೇವಋಷಿಗಳು, ಪಿತೃಲೋಕದ ಋಷಿಗಳು ಮತ್ತು ರಾಜರ್ಷಿಗಳು ಎಲ್ಲರೂ ಗತವ್ಯಥರಾಗಿ ವಾಸಿಸುತ್ತಾರೆ. ಅಲ್ಲಿ ದರ್ಮ ಮತ್ತು ಸತ್ಯಗಳಿವೆ. ಅಲ್ಲಿ ಕರ್ಮಗಳು ಫಲವನ್ನೀಯುತ್ತವೆ. ತೀರಿಕೊಂಡವರ ಕರ್ಮಗಳ ದಾರಿಯೇ ಇದು. ಎಲ್ಲರೂ ದುಸ್ತರರಾಗುವ (ವಿಶ್ರಾಂತಿ ಪಡೆದು ಪುನಃ ಚೇತನಗೊಳ್ಳುವ) ಸ್ಥಳವೆಂದರೆ ಈ ದಿಕ್ಕು. ಕತ್ತಲೆಯಿಂದ ಆವರಿಸಲ್ಪಡುವುದರಿಂದ ಅವರು ಸುಖವನ್ನು ಹೊಂದುವುದಿಲ್ಲ. ಅಲ್ಲಿ ಅಕೃತಾತ್ಮರು ನೋಡಲೆಂದು ಸೃಷ್ಟಿಸಲ್ಪಟ್ಟ ಬಹು ಸಹಸ್ರಾರು ನೈರೃತರು ವಾಸಿಸುತ್ತಾರೆ. ಅಲ್ಲಿ ಮಂದರದ ಕಣಿವೆಗಳಲ್ಲಿ ವಿಪ್ರರ್ಷಿಸದನಗಳಲ್ಲಿ ಗಂಧರ್ವರು ಚಿತ್ತ-ಬುದ್ಧಿಗಳನ್ನು ಅಪಹರಿಸುವ ಗೀತೆಗಳನ್ನು ಹಾಡುತ್ತಾರೆ. ಅಲ್ಲಿಯೇ ಸಾಮದ ಹಾಡು-ಗೀತೆಗಳನ್ನು ಕೇಳಿ ರೈವತನು ಪತ್ನಿಯನ್ನು, ಅಮಾತ್ಯರನ್ನು, ಮತ್ತು ರಾಜ್ಯವನ್ನು ತೊರೆದು ವನಕ್ಕೆ ತೆರಳಿದನು. ಅಲ್ಲಿ ಸಾವರ್ಣಿ ಮತ್ತು ಯವಕ್ರೀತನ ಮಗನು ಸೂರ್ಯನಿಗೆ ಗಡಿಹಾಕಿ, ಅವನು ಅದನ್ನು ದಾಟದೇ ಹಿಂದಿರುಗುತ್ತಾನೆ. ಅಲ್ಲಿ ಮಹಾತ್ಮ, ರಾಕ್ಷಸರಾಜ, ಪೌಲಸ್ತ್ಯ, ರಾವಣನು ತಪಸ್ಸನ್ನು ತಪಿಸಿ ಸುರರಿಂದ ಅಮರತ್ವವನ್ನು ಕೇಳಿದನು. ಅಲ್ಲಿ ತನ್ನ ಪಾಪವರ್ತನೆಯಿಂದ ವೃತ್ರನು ಶಕ್ರನೊಂದಿಗೆ ಶತ್ರುತ್ವವನ್ನು ಬೆಳೆಸಿದನು. ಎಲ್ಲ ಜೀವಿಗಳು ಇಲ್ಲಿ ಬಂದು ಪುನಃ ಪಂಚಭೂತಗಳಲ್ಲಿ ಸೇರುತ್ತವೆ. ಇಲ್ಲಿ ದುಷ್ಕೃತಕರ್ಮಗಳನ್ನು ಮಾಡಿದ ನರರು ಪಚನವಾಗುತ್ತಾರೆ. ಇಲ್ಲಿಯೇ ವಿತರಣಗಳಿಂದ ಕೂಡಿದ ವೈತರಣೀ ಎಂಬ ನದಿಯು ಹರಿಯುತ್ತದೆ. ಇಲ್ಲಿಗೆ ಬಂದು ಜೀವಿಗಳು ಅತ್ಯಂತ ಸುಖವನ್ನೂ ಅತ್ಯಂತ ದುಃಖವನ್ನೂ ಅನುಭವಿಸುತ್ತಾರೆ. ಇಲ್ಲಿಗೆ ತಲುಪಿದ ದಿವಾಕರನು ಸುರಸ ನೀರನ್ನು ಸುರಿಸುತ್ತಾನೆ. ಧನಿಷ್ಠಾ ದಿಕ್ಕಿಗೆ ಹೋಗಿ ಪುನಃ ಹಿಮವನ್ನು ಸುರಿಸುತ್ತಾನೆ. ಹಿಂದೆ ನಾನು ಹಸಿದು ಚಿಂತೆಯಲ್ಲಿದ್ದಾಗ ಅಲ್ಲಿಯೇ ಯುದ್ಧಮಾಡುತ್ತಿರುವ ಬೃಹದಾಕಾರದ ಗಜ-ಕಚ್ಛಪರೀರ್ವರನ್ನು ಪಡೆದಿದ್ದೆನು. ಅಲ್ಲಿ ಸೂರ್ಯನಿಂದ ಶಕ್ರಧನುವೆಂಬ ಹೆಸರಿನ ಮಹಾನೃಷಿಯು ಹುಟ್ಟಿದನು. ಅವನು ನಂತರ ಕಪಿಲದೇವನೆಂದಾದನು. ಅವನಿಂದಲೇ ಸಗರಾತ್ಮಜರು ನಾಶಗೊಂಡರು. ಅಲ್ಲಿಯೇ ಶಿವಾ ಎಂಬ ಹೆಸರಿನ ವೇದಪಾರಂಗತರು ಸಿದ್ಧಿಯನ್ನು ಪಡೆದರು. ಅಖಿಲ ವೇದಗಳನ್ನೂ ಗೆದ್ದು ಕೊನೆಯಲ್ಲಿ ಯಮಕ್ಷಯವನ್ನು ಹೊಂದಿದರು. ಅಲ್ಲಿ ವಾಸುಕಿ, ತಕ್ಷಕ, ನಾಗ ಐರಾವತನಿಂದ ಪಾಲಿತವಾದ ಭೋಗವತೀ ಎಂಬ ಹೆಸರಿನ ಪುರಿಯಿದೆ. ನಿರ್ಯಾಣಕಾಲದಲ್ಲಿ ಅಲ್ಲಿ ಸ್ವಯಂ ಭಾಸ್ಕರನಿಂದ ಅಥವಾ ಅಗ್ನಿಯಿಂದ ಭೇದಿಸಲಸಾಧ್ಯವಾದ ಮಹಾ ಕತ್ತಲೆಯು ಸಿಗುತ್ತದೆ. ತಪಸ್ಸನ್ನು ತಪಿಸಿರುವ ನೀನು ಕೂಡ ಈ ಮಾರ್ಗದಲ್ಲಿ ಪ್ರಯಾಣಿಸಬೇಕಾಗುತ್ತದೆ. ಈ ದಿಕ್ಕಿಗೆ ಹೋಗಬೇಕಾ ಹೇಳು. ಇಲ್ಲದಿದ್ದರೆ ಪಶ್ಚಿಮದ ಕುರಿತು ನನ್ನಿಂದ ಕೇಳು.

“ಇದು ಗೋಪತಿ ವರುಣ ರಾಜನ ದಿಕ್ಕು. ಸಲಿಲರಾಜನು ಸದಾ ಇಲ್ಲಿಯೇ ಪ್ರತಿಷ್ಠನಾಗಿದ್ದಾನೆ. ದಿನದ ಪಶ್ಚಾತ್ ಸೂರ್ಯನು ಸ್ವಯಂ ಕಿರಣಗಳನ್ನು ಅಲ್ಲಿ ವಿಸರ್ಜಿಸುವುದರಿಂದ ಈ ದಿಕ್ಕು ಪಶ್ಚಿಮವೆಂದು ವಿಖ್ಯಾತವಾಗಿದೆ. ಜಲಚರರ ಮತ್ತು ಸಲಿಲಗಳ ರಕ್ಷಣೆಗಾಗಿ ಭಗವಾನ್ ಕಶ್ಯಪ ದೇವನು ವರುಣನನ್ನು ಇಲ್ಲಿ ಅಭಿಷೇಕಿಸಿದನು. ಅಲ್ಲಿ ವರುಣನ ಎಲ್ಲ ಆರು ರಸಗಳನ್ನು ಕುಡಿದು ತಮಸ್ಸನ್ನು ಕಳೆಯುವ ಸೋಮನು ಶುಕ್ಲಪಕ್ಷದ ಆದಿಯಲ್ಲಿ ತರುಣನಾಗಿ ಹುಟ್ಟುತ್ತಾನೆ. ಈ ದಿಕ್ಕಿನಲ್ಲಿ ದೈತ್ಯರು ವಾಯುವಿನಿಂದ ಕಟ್ಟಿ ಎಸೆಯಲ್ಪಟ್ಟಿದ್ದರು. ಆ ಭಿರುಗಾಳಿಗೆ ಸಿಲುಕಿ ನಿಟ್ಟುಸಿರು ಬಿಡುತ್ತಾ ಅವರು ಇಲ್ಲಿಯೇ ನಿದ್ದೆ ಮಾಡಿದರು. ಅಲ್ಲಿ ಸಾಯಂಕಾಲದ ಸಂಧ್ಯಾ ಸಮಯವನ್ನು ಒದಗಿಸುವ ಅಸ್ತ ಎಂಬ ಹೆಸರಿನ ಪರ್ವತವು ಸೂರ್ಯನನ್ನು ಪ್ರಣಯಿಸಿ ಸ್ವೀಕರಿಸುತ್ತದೆ. ದಿವಸವು ಕಳೆದು ಹೋದಾಗ ಅಲ್ಲಿ ರಾತ್ರಿ ಮತ್ತು ನಿದ್ದೆಗಳು ಜೀವಲೋಕದ ಅರ್ಧ ಆಯುಸ್ಸನ್ನು ಕದಿಯಲು ಪಸರಿಸುತ್ತವೆ. ಅಲ್ಲಿ ಗರ್ಭವನ್ನು ಧರಿಸಿ ಮಲಗಿದ್ದ ದಿತಿ ದೇವಿಯ ಗರ್ಭವನ್ನು ಶಕ್ರನು ವಿಭಜನೆ ಮಾಡಿದನು ಮತ್ತು ಅವುಗಳಿಂದ ಮರುದ್ಗಣರು ಜನಿಸಿದರು. ಅಲ್ಲಿ ಹಿಮವತ್ ಪರ್ವತದ ಬೇರುಗಳು ಮಂದರ ಪರ್ವತದ ವರೆಗೂ ಶಾಶ್ವತವಾಗಿ ಪಸರಿಸಿವೆ. ಸಾವಿರ ವರ್ಷಗಳು ಪ್ರಯಾಣಿಸಿದರೂ ಈ ಬೇರುಗಳ ಕೊನೆಯನ್ನು ತಲುಪಲಾರೆವು. ಅಲ್ಲಿ ಕಾಂಚನಶೈಲದ ಕಾಂಚನ ಸರೋವರದ ತೀರವನ್ನು ಸೇರಿ ಸುರಭಿಯು ಹಾಲನ್ನು ಸುರಿಸಿದಳು. ಅಲ್ಲಿ ಸಮುದ್ರದ ಮಧ್ಯದಲ್ಲಿ ಸೋಮಸೂರ್ಯರನ್ನು ನುಂಗಲು ಕಾತರನಾಗಿರುವ ಸೂರ್ಯನಂತೆಯೇ ಇರುವ ಸ್ವರ್ಭಾನು (ರಾಹು) ವಿನ ಶಿರವಿಲ್ಲದ ದೇಹವು ಕಾಣುತ್ತದೆ. ಇಲ್ಲಿ ಅದೃಶ್ಯನೂ, ಅಪ್ರಮೇಯನೂ, ಹಸಿರುಬಣ್ಣದ ಕೂದಲಿರುವವನೂ ಆದ ಸುವರ್ಣಶಿರಸನು ದೊಡ್ಡ ಧ್ವನಿಯಲ್ಲಿ ವೇದಗಳನ್ನು ಹಾಡುವುದು ಕೇಳಿಬರುತ್ತದೆ. ಅಲ್ಲಿ ಹರಿಮೇಧಸನ ಕುಮಾರಿ ಧ್ವಜವತೀ ಎಂಬ ಹೆಸರಿನವಳು ‘ನಿಲ್ಲು! ನಿಲ್ಲು!’ ಎಂಬ ಸೂರ್ಯನ ಶಾಸನದಂತೆ ಅಲ್ಲಿಯೇ ನಿಂತುಬಿಟ್ಟಿದ್ದಾಳೆ. ಅಲ್ಲಿ ವಾಯು, ಅಗ್ನಿ, ನೀರು, ಆಕಾಶ, ದಿನ, ರಾತ್ರಿಗಳು ದುಃಖಸ್ಪರ್ಷದಿಂದ ಮುಕ್ತವಾಗುತ್ತವೆ. ಅಲ್ಲಿಂದ ಮುಂದೆ ಸೂರ್ಯನ ಗತಿಯು ವಕ್ರವಾಗುತ್ತದೆ. ಅಲ್ಲಿ ಎಲ್ಲ ನಕ್ಷತ್ರಗಳೂ ಸೂರ್ಯಮಂಡಲವನ್ನು ಪ್ರವೇಶಿಸುತ್ತವೆ. ಭಾನುವಿನೊಂದಿಗೆ ಇಪ್ಪತ್ತೆಂಟು ರಾತ್ರಿಗಳನ್ನು ಕಳೆದು, ಸೂರ್ಯನ ಸಂಗವನ್ನು ತೊರೆದು ಪುನಃ ಸೋಮನ ಸಂಗದಲ್ಲಿ ಬರುತ್ತವೆ. ಅಲ್ಲಿ ನಿತ್ಯವೂ ಸಾಗರವನ್ನು ಹುಡುಕಿಕೊಂಡು ಹೋಗುವ ನದಿಗಳು ಹುಟ್ಟುತ್ತವೆ. ಇಲ್ಲಿ ಮೂರು ಲೋಕಗಳ ನೀರುಗಳೂ ವರುಣನ ಆಶ್ರಯದಲ್ಲಿವೆ. ಅಲ್ಲಿ ಪನ್ನಗರಾಜ ಅನಂತನ ಮನೆಯಿದೆ. ಅಲ್ಲಿ ಅನಾದಿನಿಧನ ವಿಷ್ಣುವಿನ ಅನುತ್ತಮ ಸ್ಥಾನವೂ ಇದೆ. ಅಲ್ಲಿ ಅನಲಸಖ ಪವನನ ಮನೆಯಿದೆ. ಅಲ್ಲಿ ಮಹರ್ಷಿ ಕಶ್ಯಪ ಮತ್ತು ಮಾರೀಚನ ನಿವೇಶನಗಳೂ ಇವೆ. ಇದು ಪಶ್ಚಿಮ ಮಾರ್ಗ. ಈ ದಿಕ್ಕನ್ನು ನಿನಗೆ ವರ್ಣಿಸಿದ್ದೇನೆ. ನಿನಗೆ ಎಲ್ಲಿಗೆ ಹೋಗುವ ಬುದ್ಧಿಯಿದೆ? ಹೇಳು!

“ಪಾಪ ಮತ್ತು ನಿಃಶ್ರೇಯಸ್ಸಿನಿಂದ ಪಾರುಮಾಡುವಂಥಹ ಉತ್ತಾರಣ ಫಲವನ್ನು ಹೊಂದಿರುವುದರಿಂದ ತಿಳಿದವರು ಈ ದಿಕ್ಕನ್ನು ಉತ್ತರ ಎಂದು ಕರೆಯುತ್ತಾರೆ. ಹಿರಣ್ಯವನ್ನುಳ್ಳ ಉತ್ತರದ ಮಾರ್ಗವು ಪಶ್ಚಿಮ-ಪೂರ್ವ ದಿಕ್ಕುಗಳ ವರೆಗೂ ಪಸರಿಸಿರುವುದರಿಂದ ಇದನ್ನು ಮಧ್ಯಮ ಎಂದೂ ಕರೆಯುತ್ತಾರೆ. ವರಿಷ್ಠವಾಗಿರುವ ಈ ಉತ್ತರ ದಿಕ್ಕಿನಲ್ಲಿ ಸೌಮ್ಯನಾಗಿಲ್ಲದಿರುವ, ವಿಧೇಯಾತ್ಮನಾಗಿಲ್ಲದ, ಅಧರ್ಮ ಜನರು ವಾಸಿಸುವುದಿಲ್ಲ. ಅಲ್ಲಿ ಕೃಷ್ಣ ನಾರಾಯಣ ಮತ್ತು ನರೋತ್ತಮ ಜಿಷ್ಣು, ಮತ್ತು ಬ್ರಹ್ಮರು ಬದರಿಕಾಶ್ರಮಪದದಲ್ಲಿ ಶಾಶ್ವತರಾಗಿ ನೆಲಸಿದ್ದಾರೆ. ಅಲ್ಲಿ ಹಿಮವತ್ಪರ್ವತದ ಮೇಲೆ ಮಹೇಶ್ವರನು ನಿತ್ಯವೂ ನೆಲಸಿದ್ದಾನೆ. ಅಲ್ಲಿ ಚಂದ್ರಮನನ್ನು ವಿಪ್ರರ ರಾಜ್ಯಕ್ಕೆ ಅಭಿಷೇಕಿಸಲಾಯಿತು. ಅಲ್ಲಿ ಗಗನದಿಂದ ಕಳಚಿ ಬೀಳುತ್ತಿದ್ದ ಗಂಗೆಯನ್ನು ಹಿಡಿದು ಮಾನುಷ ಲೋಕಕ್ಕೆ ಕೊಟ್ಟನು. ಅಲ್ಲಿ ಮಹೇಶ್ವರನನ್ನು ಬಯಸಿ ದೇವಿಯು ತಪಸ್ಸನ್ನು ತಪಿಸಿದಳು. ಅಲ್ಲಿ ಕಾಮ, ರೋಷ, ಶೈಲ ಮತ್ತು ಉಮ ಒಟ್ಟಿಗೇ ಬೆಳಗಿದರು. ಅಲ್ಲಿ ಕೈಲಾಸದಲ್ಲಿ ರಾಕ್ಷಸ, ಯಕ್ಷ, ಗಂಧರ್ವರ ಅಧಿಪತ್ಯದಿಂದ ಧನದನು ಅಭಿಷಿಕ್ತನಾದನು. ಅಲ್ಲಿ ರಮ್ಯ ಚೈತ್ರರಥವಿದೆ. ಅಲ್ಲಿ ವೈಖಾನಸಾಶ್ರಮವಿದೆ. ಅಲ್ಲಿ ಮಂದಾಕಿನಿಯೂ ಮಂದರವೂ ಇವೆ. ಅಲ್ಲಿ ನೈರೃತರಿಂದ ರಕ್ಷಿತವಾದ ಸೌಗಂಧಿಕ ವನವಿದೆ. ಅಲ್ಲಿ ಹುಲ್ಲುಗಾವಲಿದೆ, ಬಾಳೆಯ ವನವಿದೆ ಮತ್ತು ಸಂತಾನಕ ಪರ್ವತಗಳಿವೆ. ಅಲ್ಲಿ ಸಂಯಮಿಗಳಾದ, ಸ್ವಚ್ಛಂದರಾದ ಸಿದ್ಧರ ವಿಮಾನಗಳೂ, ಅನುರೂಪವಾದ ಕಾಮ ಭೋಗಗಳೂ ಇವೆ. ಅಲ್ಲಿ ಸಪ್ತ ಋಷಿಗಳೂ ಮತ್ತು ದೇವೀ ಅರುಂಧತಿಯೂ ಕಾಣುತ್ತಾರೆ. ಅಲ್ಲಿ ಸ್ವಾತಿಯು ಉದಯಿಸಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಪಿತಾಮಹನು ಯಜ್ಞವನ್ನೇರಿರುತ್ತಾನೆ. ಅಲ್ಲಿ ಚಂದ್ರ, ಸೂರ್ಯ ಮತ್ತು ನಕ್ಷತ್ರಗಳು ನಿತ್ಯವೂ ತಿರುಗುತ್ತಿರುತ್ತವೆ. ಅಲ್ಲಿ ಧಾಮ ಎಂಬ ಹೆಸರಿನ ಮಹಾತ್ಮ, ಸತ್ಯವಾದಿ, ದ್ವಿಜಸತ್ತಮ ಮುನಿಗಳು ಗಂಗಾದ್ವಾರವನ್ನು ರಕ್ಷಿಸುತ್ತಾರೆ. ಅವರ ಹುಟ್ಟು, ಕರ್ಮಗಳು, ಮತ್ತು ತಪಶ್ಚರ್ಯಗಳು, ಅವರು ಬಳಸುವ ಸಹಸ್ರಾರು ಪಾತ್ರೆಗಳು ಮತ್ತು ಕಾಮಭೋಗಗಳು ಯಾರಿಗೂ ತಿಳಿದಿಲ್ಲ. ಅವರು ಹಾಕಿದ ಗಡಿಯನ್ನು ದಾಟಿ ಯಾವ ನರನು ಹೋಗುತ್ತಾನೋ ಅವನು ನಾಶಹೊಂದುವುದು ಸತ್ಯ. ಅವರು ಕಾಯುವ ಗಡಿಯನ್ನು ಇದೂವರೆಗೆ ಯಾರೂ – ದೇವ ನಾರಾಯಣ ಅಥವಾ ಅವ್ಯಯ ನರ ಜಿಷ್ಣುವನ್ನು ಬಿಟ್ಟು – ಹೋಗಿಲ್ಲ. ಅಲ್ಲಿ ಐಲವಿಲ (ಕುಬೇರ) ನ ಸ್ಥಾನವಾದ ಕೈಲಾಸವೆನ್ನುವುದಿದೆ. ಅಲ್ಲಿಯೇ ವಿದ್ಯುತ್ಪ್ರಭಾ ಎಂಬ ಹೆಸರಿನ ಹತ್ತು ಅಪ್ಸರೆಯರು ಜನಿಸಿದರು. ಅಲ್ಲಿ ತ್ರಿಲೋಕ ವಿಕ್ರಮದಲ್ಲಿ ವಿಷ್ಣುವು ಉತ್ತರ ದಿಕ್ಕನ್ನು ತುಳಿದ ವಿಷ್ಣುಪದ ಎಂಬ ಹೆಸರಿನ ಸ್ಥಳವಿದೆ. ಅಲ್ಲಿ ಕಾಂಚನ ಸರೋವರದ ಉಶೀರಬೀಜದಲ್ಲಿ ರಾಜಾ ಮರುತ್ತನು ಯಜ್ಞ-ಇಷ್ಟಿಯನ್ನು ನಡೆಸಿದನು. ಅಲ್ಲಿ ಮಹಾತ್ಮ ವಿಪ್ರರ್ಷಿ ಜೀಮೂತನಿಗೆ ಪುಣ್ಯ, ವಿಮಲ, ಕಮಲಾಕರ, ಪುಣ್ಯ ಹಿಮವತನು ಸಾಕ್ಷಾತ್ಕರಿಸಿದನು. ಆಗ ಜೀಮೂತನು ಆ ಮಹಾ ಧನವನ್ನು ಸಂಪೂರ್ಣವಾಗಿ ಬ್ರಾಹ್ಮಣರಿಗಿತ್ತನು. ಅನಂತರ ಮಹರ್ಷಿಯು ಆ ವನವನ್ನು ಜೈಮೂತವನವೆಂದು ಕರೆಯುವಂತೆ ಕೇಳಿಕೊಂಡನು. ಅಲ್ಲಿ ನಿತ್ಯವೂ ಬೆಳಿಗ್ಗೆ ಮತ್ತು ಸಾಯಂಕಾಲ ದಿಕ್ಪಾಲಕರು ‘ಯಾರ ಕೆಲಸವು ಏನು?’ ಎಂದು ಚರ್ಚಿಸುತ್ತಾರೆ. ಉತ್ತರವು ಇವುಗಳಿಂದ ಮತ್ತು ಇನ್ನೂ ಇತರ ಗುಣಗಳಿಂದ ಕೂಡಿದೆ. ಎಲ್ಲ ದಿಕ್ಕುಗಳಲ್ಲಿ ಇದು ಶ್ರೇಷ್ಠವಾಗಿರುವುದರಿಂದ ಇದಕ್ಕೆ ಉತ್ತರವೆಂಬ ಹೆಸರಿದೆ. ಈ ರೀತಿ ನಾನು ನಿನಗೆ ನಾಲ್ಕೂ ದಿಕ್ಕುಗಳನ್ನು ಕ್ರಮಬದ್ಧವಾಗಿ ವಿಸ್ತಾರವಾಗಿ ವರ್ಣಿಸಿದ್ದೇನೆ. ಎಲ್ಲಿ ಹೋಗಲು ಬಯಸುತ್ತೀಯೇ? ದಿಕ್ಕುಗಳನ್ನು, ಅಖಿಲ ಪೃಥ್ವಿಯನ್ನೂ ನಿನಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ. ಬ್ರಹ್ಮನ್! ನನ್ನನ್ನು ಏರು.”

ಗಾಲವನು ಹೇಳಿದನು: “ಗುರುತ್ಮನ್! ಎಲ್ಲಿ ಧರ್ಮನ ಎರಡು ಕಣ್ಣುಗಳು ಮೊದಲು ತೆರೆದವೋ ಆ ಪೂರ್ವಕ್ಕೆ ನನ್ನನ್ನು ಕರೆದುಕೊಂಡು ಹೋಗು! ನೀನು ಮೊದಲು ವರ್ಣಿಸಿದ ಪೂರ್ವದಿಕ್ಕಿಗೆ ಹೋಗು. ಅಲ್ಲಿ ದೈವತರ ಸಾನ್ನಿಧ್ಯವಿದೆಯೆಂದು ನೀನು ಹೇಳಿದ್ದೀಯೆ. ಅಲ್ಲಿ ಸತ್ಯ-ಧರ್ಮಗಳು ನೆಲಸಿವೆಯೆಂದು ನೀನು ಹೇಳಿದ್ದೀಯೆ. ನಾನು ಸಮಸ್ತ ದೇವತೆಗಳನ್ನೂ ಭೇಟಿಯಾಗಲು ಬಯಸುತ್ತೇನೆ. ಆ ಸುರರನ್ನೂ ನೋಡಲು ಬಯಸುತ್ತೇನೆ.”

ವಿನತಾಸೂನುವು “ಏರು” ಎಂದು ದ್ವಿಜನಿಗೆ ಹೇಳಿದನು. ಆಗ ಮುನಿ ಗಾಲವನು ಗರುಡನನ್ನೇರಿದನು.

ಗಾಲವನು ಹೇಳಿದನು: “ಪನ್ನಗಾಶನ! ಹೋಗುತ್ತಿರುವ ನಿನ್ನ ರೂಪವು ಪೂರ್ವಾಹ್ಣದ ಸಹಸ್ರಾಂಶ, ವಿವಸ್ವತ ಭಾಸ್ಕರನಂತೆ ಕಾಣುತ್ತದೆ. ನೀನು ಎಷ್ಟು ವೇಗದಿಂದ ಹೋಗುತ್ತಿದ್ದೀಯೆಂದರೆ ನಿನ್ನ ರೆಕ್ಕೆಗಳ ರಭಸಕ್ಕೆ ಸಿಕ್ಕಿ ಉರುಳಿದ ಮರಗಳು ನಿನ್ನನ್ನೇ ಅನುಸರಿಸಿಬರುತ್ತಿರುವುದನ್ನು ನೋಡುತ್ತಿದ್ದೇನೆ. ನಿನ್ನ ರೆಕ್ಕೆಗಳ ವೇಗದೊಂದಿಗೆ ಈ ಸಾಗರ, ವನ, ಶೈಲ, ಕಾನನಗಳೊಂದಿಗೆ ಇಡೀ ಭೂಮಿಯನ್ನೇ ಎಳೆದುಕೊಂಡು ಹೋಗುತ್ತಿರುವೆಯೋ ಎಂದು ಅನ್ನಿಸುತ್ತಿದೆ. ನಿನ್ನ ರೆಕ್ಕೆಗಳ ಹೊಡೆತದಿಂದ ಉಂಟಾದ ಭಿರುಗಾಳಿಯು ಮೀನು, ನಾಗ ಮತ್ತು ಮೊಸಳೆಗಳೊಂದಿಗೆ ಸಾಗರವು ಮೇಲುಬ್ಬುತ್ತಿದೆ. ಒಂದೇ ರೀತಿಯ ರೂಪವುಳ್ಳ, ಮತ್ಸ್ಯಗಳೂ, ತಿಮಿಂಗಿಲಗಳೂ, ಸರ್ಪಗಳೂ, ಮನುಷ್ಯರ ರೂಪವುಳ್ಳವುಗಳೂ ನಿನ್ನ ರಭಸಕ್ಕೆ ಸಿಲುಕಿ ನಾಶವಾಗುತ್ತಿರುವುದನ್ನು  ನೋಡುತ್ತಿದ್ದೇನೆ. ಕೇಳಿಬರುತ್ತಿರುವ ಸಾಗರದ ಭೋರ್ಗರೆತವು ನನ್ನನ್ನು ಕಿವುಡುಮಾಡುತ್ತಿದೆ. ಕೇಳಲಿಕ್ಕಾಗುತ್ತಿಲ್ಲ. ನೋಡಲಿಕ್ಕಾಗುತ್ತಿಲ್ಲ. ಕಾರಣವು ನನಗೆ ತಿಳಿಯುತ್ತಿಲ್ಲ. ಬ್ರಹ್ಮಹತ್ಯೆಯನ್ನು ಸ್ಮರಿಸಿಕೊಂಡು ನೀನು ನಿಧಾನವಾಗಿ ಹೋಗುವುದು ಒಳ್ಳೆಯದು. ಸೂರ್ಯ, ದಿಕ್ಕು, ಆಕಾಶವು ಕಾಣುತ್ತಿಲ್ಲ. ಕತ್ತಲೆಯೇ ಕಾಣುತ್ತಿದೆ. ನಿನ್ನ ಶರೀರವೂ ಕಾಣುತ್ತಿಲ್ಲ. ಮಣಿಗಳಂತೆ ತೋರುವ ನಿನ್ನ ಎರಡು ಕಣ್ಣುಗಳು ಮಾತ್ರ ಕಾಣುತ್ತಿವೆ. ನನ್ನ ಅಥವಾ ನಿನ್ನ ಶರೀರಗಳನ್ನು ನಾನು ಕಾಣುತ್ತಿಲ್ಲ. ಪದೇ ಪದೇ ನಿನ್ನ ಸಲಿಲದಿಂದ ಎದ್ದು ಬರುವ ಬೆಂಕಿಯ ಕಿಡಿಗಳನ್ನು ಕಾಣುತ್ತಿದ್ದೇನೆ. ತಕ್ಷಣವೇ ನಿನ್ನ ಈ ಕಣ್ಣುಗಳ ಬೆಳಕನ್ನು ಕಡಿಮೆಮಾಡು. ನಿನ್ನ ಹೋಗುವ ಈ ವೇಗವನ್ನು ಕಡಿಮೆಮಾಡು! ನಿನ್ನೊಡನೆ ಹೋಗುವುದರ ಪ್ರಯೋಜನವಾದರೂ ಏನು? ನಿನ್ನ ಈ ಮಹಾವೇಗವನ್ನು ಕಡಿಮೆಮಾಡು. ನಿನ್ನ ವೇಗವನ್ನು ಸಹಿಸಲಾರೆ. ನನ್ನ ಗುರುವಿಗೆ ಚಂದ್ರನ ಮುಖದಂತೆ ಬಿಳಿಯಾಗಿರುವ ಆದರೆ ಒಂದೇ ಕಿವಿಯು ಕಪ್ಪಾಗಿರುವ ಎಂಟುನೂರು ಕುದುರೆಗಳನ್ನು ತಂದು ಕೊಡುತ್ತೇನೆಂದು ಭರವಸೆಯನ್ನಿತ್ತಿದ್ದೇನೆ. ಅವುಗಳನ್ನು ಒಂದುಗೂಡಿಸುವ ಮಾರ್ಗವನ್ನು ಕಾಣುತ್ತಿಲ್ಲ. ಆದುದರಿಂದಲೇ ನಾನು ಜೀವವನ್ನು ತ್ಯಜಿಸುವ ಮಾರ್ಗವನ್ನು ಕಂಡುಕೊಂಡಿದ್ದೇನೆ. ನನ್ನಲ್ಲಿ ಧನವಿಲ್ಲ. ಧನಿಕನಾದ ಸ್ನೇಹಿತನೂ ಇಲ್ಲ. ಎಷ್ಟೇ ಧನವಿದ್ದರೂ ನನಗೆ ಬೇಕಾದುದನ್ನು ಕೊಡಲಿಕ್ಕಾಗುವುದಿಲ್ಲ.”

ಈ ರೀತಿ ದೀನನಾಗಿ ಬಹುವಿಧದಲ್ಲಿ ಹೇಳುತ್ತಿರುವ ಗಾಲವನಿಗೆ ವಿನತಾತ್ಮಜನು ತನ್ನ ವೇಗವನ್ನು ಕಡಿಮೆಗೊಳಿಸದೇ ನಗುತ್ತಾ ಉತ್ತರಿಸಿದನು: “ವಿಪ್ರರ್ಷೇ! ಜೀವವನ್ನು ತೊರೆಯಲು ಬಯಸುವ ನಿನಗೆ ತಿಳುವಳಿಕೆಯಿಲ್ಲ. ಮೃತ್ಯುವು ಕೃತ್ರಿಮವಾದಲ್ಲ. ಕಾಲನೇ ಪರಮೇಶ್ವರ. ಮೊದಲೇ ನನಗೆ ಏಕೆ ನಿನ್ನ ಉದ್ದೇಶವನ್ನು ಹೇಳಲಿಲ್ಲ? ಇವೆಲ್ಲವುಗಳನ್ನೂ ಪಡೆಯುವುದಕ್ಕೆ ಒಂದು ಮಹಾ ಉಪಾಯವಿದೆ. ಇಲ್ಲಿ ಸಾಗರದ ಬಳಿ ಋಷಭ ಎಂಬ ಹೆಸರಿನ ಪರ್ವತವಿದೆ. ಇಲ್ಲಿ ತಿಂದು ವಿಶ್ರಮಿಸಿ ನಂತರ ಹಿಂದಿರುಗುತ್ತೇನೆ.”

ದ್ವಿಜ-ಪಕ್ಷಿಗಳಿಬ್ಬರೂ ಋಷಭದ ಶಿಖರದ ಮೇಲೆ ಇಳಿದು ಅಲ್ಲಿ ತಪೋನ್ವಿತೆ ಬ್ರಾಹ್ಮಣೀ ಶಾಂಡಲಿಯನ್ನು ಕಂಡರು. ಸುಪರ್ಣನು ಅಭಿವಂದಿಸಿದನು. ಗಾಲವನೂ ಅವಳನ್ನು ಪೂಜಿಸಿದನು. ಅವಳೂ ಕೂಡ “ಸ್ವಾಗತ!” ಎನ್ನಲು ಅವರು ಹರಡಿದ್ದ ದರ್ಬೆಗಳ ಮೇಲೆ ಕುಳಿತುಕೊಂಡರು. ಬೇಗನೇ ಬಲಿ-ಮಂತ್ರಗಳಿಂದ ಕೂಡಿಸಿ ಸಿದ್ಧಪಡಿಸಲ್ಪಟ್ಟ ಅನ್ನವನ್ನು ಊಟಮಾಡಿ ಅವರಿಬ್ಬರೂ ಊಟದಿಂದ ಮೋಹಿತರಾಗಿ ಭೂಮಿಯ ಮೇಲೆ ಮಲಗಿಕೊಂಡರು. ಸ್ವಲ್ಪವೇ ಸಮಯದಲ್ಲಿ ಎಚ್ಚರಗೊಂಡ ಸುಪರ್ಣನು ಹೊರಡಲು ಬಯಸಿದನು. ಆಗ ಆ ಪಕ್ಷಿಯು ತನ್ನ ರೆಕ್ಕೆಗಳು ದೇಹದಿಂದ ಕಳಚಿ ಬಿದ್ದಿರುವುದನ್ನು ನೋಡಿದನು. ಆ ಖಗನು ತಲೆ ಕಾಲುಗಳನ್ನುಳ್ಳ ಕೇವಲ ಒಂದು ಮಾಂಸದ ಮುದ್ದೆಯಂತೆ ಕಂಡನು. ಅವನನ್ನು ನೋಡಿದ ಗಾಲವನು ವಿಷಣ್ಣನಾಗಿ ಕೇಳಿದನು: “ನಿನಗೇನಾಯಿತು? ಇನ್ನು ಎಷ್ಟು ಕಾಲ ನಾವು ಇಲ್ಲಿ ಇರಬೇಕು? ನೀನು ಏನಾದರೂ ಅಶುಭವೂ ಧರ್ಮದೂಷಣವೂ ಆಗಿರುವುದನ್ನು ಮನಸ್ಸಿನಲ್ಲಿ ಯೋಚಿಸಿದೆಯೇನು? ನಾನು ನಿನಗೆ ಸ್ವಲ್ಪವೂ ವ್ಯಭಿಚಾರವಾಗಿರಲಿಕ್ಕಿಲ್ಲ ತಾನೇ?”

ಆಗ ಸುಪರ್ಣನು ವಿಪ್ರನಿಗೆ ಹೇಳಿದನು: “ದ್ವಿಜ! ಈ ಸಿದ್ಧಳನ್ನು ಇಲ್ಲಿಂದ ಎಲ್ಲಿ ಪ್ರಜಾಪತಿಯಿರುವನೋ, ಎಲ್ಲಿ ಮಹಾದೇವನಿರುವನೋ, ಎಲ್ಲಿ ಸನಾತನ ವಿಷ್ಣುವಿರುವನೋ, ಎಲ್ಲಿ ಧರ್ಮ ಮತ್ತು ಯಜ್ಞಗಳು ಇವೆಯೋ ಅಲ್ಲಿಗೆ ಕೊಂಡೊಯ್ಯಬೇಕೆಂಬ ಯೋಚನೆಯೊಂದು ನನಗೆ ಬಂದಿತ್ತು. ನಮಸ್ಕರಿಸಿ ಭಗವತಿಯಲ್ಲಿ ನಾನು ಬೇಡಿಕೊಳ್ಳುತ್ತೇನೆ. ಪ್ರಿಯವಾದುದನ್ನು ಮಾಡಬೇಕೆಂದು ನಾನು ನಿನ್ನನ್ನು ಕೊಂಡೊಯ್ಯಲು ಮನಸ್ಸಿನಲ್ಲಿ ಯೋಚಿಸಿದೆನಲ್ಲ! ಅದು ನಿನಗೆ ಬಹುಮಾನವನ್ನು ಕೊಡಬೇಕೆಂಬ ನನ್ನ ಬಯಕೆಯು ನಡೆಸಿತು. ಅದು ಸುಕೃತವಾಗಿರಲಿ ದುಷ್ಕೃತವಾಗಿರಲಿ ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕು.”

ಆಗ ಶಾಂಡಲಿಯು ಆ ಪತಗೇಂದ್ರ ದ್ವಿಜರ್ಷಭರಿಬ್ಬರಿಗೂ ಹೇಳಿದಳು: “ಸುಪರ್ಣ! ಹೆದರಬೇಡ. ಸುಪರ್ಣನೆಂಬ ಸಂಭ್ರಮವನ್ನು ತೊರೆ. ನಾನು ನಿನ್ನಿಂದ ನಿಂದಿತಳಾಗಿದ್ದೇನೆ. ನಿಂದೆಯನ್ನು ನಾನು ಕ್ಷಮಿಸುವುದಿಲ್ಲ. ನನ್ನನ್ನು ನಿಂದಿಸುವ ಪಾಪವನ್ನು ಮಾಡಿದವನು ಲೋಕಗಳಿಂದ ಪ್ರರಿಭ್ರಷ್ಟನಾಗುತ್ತಾನೆ. ಎಲ್ಲ ಅಲಕ್ಷಣಗಳನ್ನು ಕಳೆದುಕೊಂಡು ಅನಿಂದಿತೆಯಾಗಿರುವ ನಾನು ಆಚಾರವನ್ನು ನನ್ನದಾಗಿಸಿಕೊಂಡು ಅಂತ್ಯದಲ್ಲಿ ಉತ್ತಮ ಸಿದ್ಧಿಯನ್ನು ಪಡೆದಿರುತ್ತೇನೆ. ಆಚಾರದಿಂದ ಧರ್ಮವು ಲಭಿಸುತ್ತದೆ. ಧರ್ಮಾಚಾರಣೆಯಿಂದ ಧನವು ಲಭಿಸುತ್ತದೆ. ಆಚಾರದಿಂದ ಶ್ರೀಯು ದೊರೆಯುತ್ತದೆ. ಆಚಾರದಿಂದ ಅಲಕ್ಷಣವು ನಾಶವಾಗುತ್ತದೆ. ಇನ್ನು ನಿನಗಿಷ್ಟವಾದಲ್ಲಿಗೆ ಹೋಗಬಹುದು. ಕೀಳಾಗಿ ಕಾಣಲು ಅರ್ಹಳಾದಳೂ ಇನ್ನುಮುಂದೆ ಯಾವ ಸ್ತ್ರೀಯನ್ನೂ ಕೀಳಾಗಿ ಕಾಣಬೇಡ! ಮೊದಲಿನಂತೆಯೇ ನೀನು ಬಲವೀರ್ಯಸಮನ್ವಿತನಾಗುತ್ತೀಯೆ.” ಆಗ ಅವನ ರೆಕ್ಕೆಗಳೆರಡೂ ಮೊದಲಿಗಿಂತಲೂ ದೊಡ್ಡದಾಗಿ ಬೆಳೆದವು.

ಶಾಂಡಿಲ್ಯಳ ಅನುಮತಿಯನ್ನು ಪಡೆದು ಅವನು ಬಂದದಾರಿಯುಲ್ಲಿ ಹಿಂದಿರುಗಿದನು. ದಾರಿಯಲ್ಲಿ ವಿಶ್ವಾಮಿತ್ರನು ಗಾಲವನನ್ನು ಕಂಡು ನಿಲ್ಲಿಸಿದನು. ಆ ಮಾತನಾಡುವವರಲ್ಲಿ ಶ್ರೇಷ್ಠನು ವೈನತೇಯನ ಸನ್ನಿಧಿಯಲ್ಲಿ ಹೇಳಿದನು: “ದ್ವಿಜ! ನನಗಾಗಿ ನೀನೇ ತೆಗೆದುಕೊಂಡಿರುವ ಪ್ರತಿಜ್ಞೆಯನ್ನು ಹಿಂದೆ ತೆಗೆದುಕೊಳ್ಳುವ ಕಾಲವು ಬಂದಂತಿದೆ. ಅಥವಾ ನಿನಗೇನಾದರೂ ಬೇರೆ ಯೋಚನೆಯಿದೆಯೇ? ಅದನ್ನು ಪೂರೈಸಲು ಎಷ್ಟು ಸಮಯ ಬೇಕೋ ಅಷ್ಟು ಕಾಲ ನಾನು ಕಾಯುತ್ತೇನೆ. ವಿಪ್ರ! ಅದನ್ನು ಪೂರೈಸುವ ಮಾರ್ಗವನ್ನು ಸಿದ್ಧಪಡಿಸು!”

ತುಂಬಾ ದುಃಖಿತನಾಗಿ ದೀನನಾಗಿರುವ ಗಾಲವನಿಗೆ ಸುಪರ್ಣನು ಹೇಳಿದನು: “ವಿಶ್ವಾಮಿತ್ರನು ಏನು ಹೇಳಿದನೆನ್ನುವುದನ್ನು ನಾನು ಪ್ರತ್ಯಕ್ಷವಾಗಿ ಕೇಳಿದೆ. ಗಾಲವ! ಹೋಗಿ ಒಟ್ಟಿಗೇ ಯೋಚಿಸೋಣ. ನಿನ್ನ ಗುರುವಿಗೆ ಕೊಡಬೇಕಾದ್ದುದನ್ನು ಸಂಪೂರ್ಣವಾಗಿ ಕೊಡದೇ ನೀನು ಕುಳಿತುಕೊಳ್ಳಲಿಕ್ಕಾಗುವುದಿಲ್ಲ.”

ದೀನನಾಗಿದ್ದ ಗಾಲವನಿಗೆ ಆಗ ಪಕ್ಷಿಗಳಲ್ಲಿಯೇ ಶ್ರೇಷ್ಠ ಸುಪರ್ಣನು ಹೇಳಿದನು: “ಭೂಮಿಯ ಒಡಲು ಅಗ್ನಿಯಿಂದ ನಿರ್ಮಿತವಾಗಿದೆ, ವಾಯುವಿನಿಂದ ವೃದ್ಧಿಗೊಂಡಿದೆ ಮತ್ತು ಎಲ್ಲವೂ ಹಿರಣ್ಮಯವಾದುದರಿಂದ ಅದಕ್ಕೆ ಹಿರಣ್ಯ ಎಂದೂ ಕರೆಯುತ್ತಾರೆ. ಪೋಷಿಸುವುದರಿಂದ ಅದನ್ನು ಧನವೆಂದು ಕರೆಯುತ್ತಾರೆ. ಧನಕ್ಕಾಗಿಯೇ ಈ ಮೂರೂ ಲೋಕಗಳು ಶಾಶ್ವತವಾಗಿವೆ. ಪೂರ್ವಾಭಾದ್ರ ಅಥವಾ ಉತ್ತರಾಭಾದ್ರ ನಕ್ಷತ್ರವು ಉದಯಿಸುತ್ತಿರುವ ಆ ಶುಕ್ರವಾರದಂದು ಅಗ್ನಿಯು ತನ್ನ ಚಿತ್ತದಿಂದ ಸೃಷ್ಟಿಸಿದ ಧನವನ್ನು ಧನಪತಿಗೆ ನೀಡಲು ಮನುಷ್ಯರಿಗೆ ಕೊಟ್ಟನು. ಭೂಮಿಯ ಒಡಲಲ್ಲಿರುವ ಧನವನ್ನು ಅಜೈಕಪಾದ, ಅಹಿರ್ಬುಧ್ನ ಮತ್ತು ಧನದರು ರಕ್ಷಿಸುತ್ತಾರೆ. ಪಡೆಯಲು ಅತಿ ಕಷ್ಟಕರವಾದ ಅದನ್ನು ಪಡೆಯಲಿಕ್ಕಾಗುವುದಿಲ್ಲ. ಧನವಿಲ್ಲದೇ ನಾವು ನಿನ್ನ ಕುದುರೆಗಳನ್ನು ಪಡೆಯುವ ವಿಧಾನವಿಲ್ಲ. ಆದುದರಿಂದ ನಾವು ಯಾರಾದರೂ ರಾಜರ್ಷಿಯ ವಂಶದಲ್ಲಿ ಹುಟ್ಟಿದ ರಾಜನಲ್ಲಿ ಯಾಚಿಸಬೇಕು. ಆ ರಾಜನು ತನ್ನ ಪೌರರನ್ನು ಪೀಡಿಸದೇ ಯಾಚಿಸುವ ನಮಗೆ ಏನಾದರೂ ಮಾಡಬಹುದು. ಚಂದ್ರವಂಶದಲ್ಲಿ ನನ್ನ ಸಖನಾದ ನೃಪನೊಬ್ಬನು ಇದ್ದಾನೆ. ಭುವಿಯಲ್ಲಿಯೇ ಅತ್ಯಂತ ಶ್ರೀಮಂತನಾಗಿರುವ ಅವನಲ್ಲಿಗೆ ಹೋಗೋಣ. ಅವನ ಹೆಸರು ಯಯಾತಿ; ರಾಜರ್ಷಿ ನಾಹುಷ ಮತ್ತು ಸತ್ಯವಿಕ್ರಮಿ. ಸ್ವಯಂ ನೀನು ಕೇಳಿದರೆ, ನಾನು ಅದನ್ನು ಅನುಮೋದಿಸಿದರೆ ಅದನ್ನು ಅವನು ಕೊಡದೇ ಇರಲಾರ. ಧನಪತಿಯಂತೆ ಅವನು ಅತಿದೊಡ್ಡ ಶ್ರೀಮಂತ. ಹೀಗೆ ಧನವನ್ನು ಪಡೆದು ನಿನ್ನ ಗುರುವಿಗೆ ಅದನ್ನು ಕೊಟ್ಟು ಋಣವನ್ನು ತೀರಿಸಿಕೋ.”

ಈ ರೀತಿಯಾಗಿ ಅವರಿಬ್ಬರೂ ಮಾತನಾಡಿಕೊಳ್ಳುತ್ತಾ, ಒಳ್ಳೆಯದನ್ನು ಮಾಡಲು ಯೋಚಿಸುತ್ತಾ ಪ್ರತಿಷ್ಠಾನದಲ್ಲಿ ನರಪತಿ ಯಯಾತಿಯ ಉಪಸ್ಥಿತಿಯಲ್ಲಿ ಬಂದರು. ಅರ್ಘ್ಯವೇ ಮೊದಲಾದ ಸತ್ಕಾರಗಳನ್ನೂ, ಶ್ರೇಷ್ಠ ಭೋಜನವನ್ನೂ ಸ್ವೀಕರಿಸಿ, ಬಂದ ಕಾರಣವನ್ನು ಕೇಳಲು, ವಿನತಾಸುತನು ಹೇಳಿದನು: “ನಾಹುಷ! ಈ ತಪಸ್ಸಿನ ನಿಧಿ ಗಾಲವನು ನನ್ನ ಸಖ. ಇವನು ಸಹಸ್ರವರ್ಷಗಳು ವಿಶ್ವಾಮಿತ್ರನ ಶಿಷ್ಯನಾಗಿದ್ದನು. ಅವನಿಂದ ಹೋಗಲು ಅನುಜ್ಞಾತನಾದ ಈ ದ್ವಿಜನು ಉಪಕಾರ ಮಾಡಲು ಬಯಸಿ ಅವನಿಗೆ ಕೇಳಿದನು – “ಭಗವನ್! ನಿನಗೆ ಗುರುದಕ್ಷಿಣೆಯನ್ನಾಗಿ ಏನು ಕೊಡಲಿ?” ಇವನ ಸಂಪತ್ತು ಕಡಿಮೆಯಿದೆ ಎನ್ನುವುದನ್ನ್ನು ತಿಳಿದಿದ್ದ ಅವನು ಎನನ್ನೂ ಕೇಳಲಿಲ್ಲ. ಆದರೆ ಪುನಃ ಪುನಃ ಇವನಿಂದ ಕೇಳಲ್ಪಟ್ಟ ಅವನು ಸ್ವಲ್ಪ ಸಿಟ್ಟಿಗೆದ್ದು ಕೇಳಿದನು: “ಒಂದೇ ಕಿವಿಯು ಕಪ್ಪಾಗಿರುವ, ಚಂದ್ರವರ್ಚಸ, ಶುಭ್ರ ಬಣ್ಣದ, ಶುದ್ಧ ಜನ್ಮದ ಎಂಟುನೂರು ಕುದುರೆಗಳನ್ನು ನನಗೆ ಕೊಡು. ಗಾಲವ! ಗುರುವಿಗೆ ಕೊಡಬೇಕೆಂದು ಬಯಸಿದರೆ ಇದನ್ನು ಕೊಡಬೇಕು!” ಎಂದು ಕ್ರೋಧನಾದ ತಪೋಧನ ವಿಶ್ವಾಮಿತ್ರನು ಇವನಿಗೆ ಹೇಳಿದನು. ಅದನ್ನು ಮಾಡಲು ಅಶಕ್ತನಾಗಿ, ಮಹಾ ಶೋಕದಿಂದ ಪರಿತಪಿಸುತ್ತಿರುವ ಈ ದ್ವಿಜರ್ಷಭನು ನಿನ್ನ ಶರಣು ಬಂದಿದ್ದಾನೆ. ನಿನ್ನಿಂದ ಭಿಕ್ಷವನ್ನು ಪಡೆದು ಗತವ್ಯಥನಾಗಿ ಗುರುವಿನ ಋಣವನ್ನು ತೀರಿಸಿ ಇವನು ಮಹಾತಪಸ್ಸನ್ನು ಆಚರಿಸುತ್ತಾನೆ. ಆ ತಪಸ್ಸಿನ ಒಳ್ಳೆಯ ಭಾಗವನ್ನು ನಿನಗೆ ಕೂಡ ಕೊಡುತ್ತಾನೆ. ಅದರಿಂದ ನಿನ್ನ ಸ್ವಂತ ರಾಜರ್ಷಿ ತಪಸ್ಸೂ ಪೂರ್ಣಗೊಳ್ಳುತ್ತದೆ. ಕುದುರೆಯಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ಪುಣ್ಯಲೋಕಗಳು ಕುದುರೆಯನ್ನು ದಾನಮಾಡಿದವನಿಗೆ ದೊರೆಯುತ್ತದೆ. ನೀನು ದಾನವನ್ನು ನೀಡಲು ಎಷ್ಟು ಪಾತ್ರನೋ ದಾನವನ್ನು ಸ್ವೀಕರಿಸಲೂ ಕೂಡ ಇವನು ಪಾತ್ರನು. ಆದುದರಿಂದ ಶಂಖದಲ್ಲಿ ಹಾಲನ್ನು ಹಾಕಿದಂತೆ ಈ ದಾನವು ನಡೆಯಲಿ.”

ಸುಪರ್ಣನು ಆ ತಥ್ಯವೂ ಉತ್ತಮವೂ ಆದ ಮಾತುಗಳನ್ನಾಡಲು ರಾಜನು ಪುನಃ ಪುನಃ ವಿಮರ್ಷೆ ಮಾಡಿ, ನಿಶ್ಚಯಿಸಿ ಹೇಳಿದನು. ನೂರಾರು ಕ್ರತುಗಳನ್ನು ಮಾಡಿದ, ದಾನಿ, ದಾನಪತಿ, ಪ್ರಭು, ವತ್ಸ-ಕಾಶಿಗಳ ಅಧಿಪತಿ, ಯಯಾತಿಯು ಈ ಮಾತುಗಳನ್ನಾಡಿದನು. ಪ್ರಿಯಸಖ ತಾರ್ಕ್ಷನನ್ನೂ ದ್ವಿಜರ್ಷಭ ಗಾಲವನ್ನನ್ನೂ ನೋಡಿ, ತಪಸ್ಸಿನ ನಿದರ್ಶನವನ್ನೂ ಭಿಕ್ಷೆಯು ತನಗೆ ಶ್ಲಾಘನೀಯವಾದುದು ಮತ್ತು ಕೀರ್ತಿಯನ್ನು ತರುವಂತಹುದು ಎಂದು ಯೋಚಿಸಿದನು. “ಇವರಿಬ್ಬರೂ ಅನ್ಯ ಆದಿತ್ಯಕುಲಸಂಭವರನ್ನು ಬಿಟ್ಟು ನನ್ನ ಬಳಿಗೆ ಬಂದಿದ್ದಾರೆ!” ಎಂದು ಮನಸ್ಸಿನಲ್ಲಿಯೇ ಯೋಚಿಸಿದನು. “ತಾರ್ಕ್ಷ್ಯ! ಇಂದು ನನ್ನ ಜನ್ಮವು ಸಫಲವಾಯಿತು. ಇಂದು ನನ್ನ ಕುಲವು ರಕ್ಷಿಸಲ್ಪಟ್ಟಿತು. ನಿನ್ನಿಂದ ನನ್ನ ಈ ದೇಶವು ಉಳಿದುಕೊಂಡಿತು. ಹಿಂದೆ ನೀನು ನನ್ನನ್ನು ಹೇಗೆ ಅರಿತುಕೊಂಡಿದ್ದೆಯೋ ಹಾಗೆ ನಾನು ಇಂದು ಇಲ್ಲ. ನನ್ನ ಸಂಪತ್ತು ಕ್ಷೀಣಿಸಿದೆ. ಆದರೂ ನಿಮ್ಮ ಆಗಮನವನ್ನು ನಿಷ್ಪಲವನ್ನಾಗಿ ಮಾಡಲು ಶಕ್ತನಿಲ್ಲ. ಈ ವಿಪ್ರರ್ಷಿಯ ಆಶಯವನ್ನೂ ಕುಂಠಿಸಲು ಉತ್ಸುಕನಾಗಿಲ್ಲ. ಆದರೂ ನಾನು ಈ ಕಾರ್ಯವನ್ನು ಸಂಪಾದಿಸಬಲ್ಲದುದನ್ನು ಕೊಡುತ್ತೇನೆ. ಏಕೆಂದರೆ ಬಂದೂ ಹತಾಶರಾಗಿ ಹಿಂದಿರುಗುವವರು ಕುಲವನ್ನು ಸುಡುತ್ತಾರೆ. ನನ್ನಲ್ಲಿ ಏನೂ ಇಲ್ಲ ಎಂದು ಹೇಳುವುದು ಮತ್ತು ದೇಹಿ ಎಂದವನಿಗೆ ನಾಸ್ತಿ ಎನ್ನುವುದು ಲೋಕದಲ್ಲಿ ಪರಮ ಪಾಪಿಷ್ಠವಾದುದು ಎಂದು ಹೇಳುತ್ತಾರೆ. ಹತಾಶೆಗೆ, ಅಯಶಸ್ವಿಗೆ ಕಾರಣನಾದ, ಸಂಭವವನ್ನು ಕೊಂದ ನರನ ಪುತ್ರ ಪೌತ್ರರನ್ನು ಯಾಚಿಸಿಬಂದವನು ಸಂಹರಿಸುತ್ತಾನೆ. ಆದುದರಿಂದ ನಾಲ್ಕು ವಂಶಗಳನ್ನು ಸ್ಥಾಪಿಸುವ ಈ ನನ್ನ ಮಗಳನ್ನು, ಸುರಸುತೆಯಂತೆ ಪ್ರಖರಳಾಗಿರುವ, ಸರ್ವಧರ್ಮೋಪಚಾರಿಣಿ, ಸದಾ ದೇವ-ಮನುಷ್ಯ-ಅಸುರರು ಬಯಸುವ, ರೂಪವತಿ, ನನ್ನ ಈ ಬಾಲಕಿ ಮಗಳನ್ನು ಗಾಲವನು ಸ್ವೀಕರಿಸಬೇಕು. ಇವಳಿಗೆ ಶುಲ್ಕವಾಗಿ ನೃಪರು ರಾಜ್ಯವನ್ನೇ ನೀಡುವುದು ನಿಶ್ಚಿತ. ಇನ್ನು ಎಂಟುನೂರು ಕಪ್ಪುಕಿವಿಗಳ ಕುದುರೆಗಳೇನು? ನನ್ನ ಸುತೆ ಮಾಧವಿಯನ್ನು ನೀವು ಸ್ವೀಕರಿಸಬೇಕು. ಇವಳಿಂದ ನನಗೆ ಮೊಮ್ಮಗನೋರ್ವನಾಗಲಿ ಎಂದು ಕೇಳಿಕೊಳ್ಳುತ್ತೇನೆ.”

ಪಕ್ಷಿಯೊಡನೆ ಗಾಲವನು ಆ ಕನ್ಯೆಯನ್ನು ಸ್ವೀಕರಿಸಿ “ಮತ್ತೆ ಕಾಣುತ್ತೇವೆ” ಎಂದು ಹೇಳಿ ಕನ್ಯೆಯೊಡನೆ ಹೊರಟರು. “ಅಶ್ವಗಳಿಗೆ ದ್ವಾರವಾದ ಇವಳು ಸಿಕ್ಕಿದಳು!” ಎಂದು ಗಾಲವನಿಗೆ ಹೇಳಿ ಅಂಡಜನು ತನ್ನ ಮನೆಗೆ ತೆರಳಿದನು. ಪತಗರಾಜನು ಹೊರಟುಹೋಗಲು ಕನ್ಯೆಯೊಡನೆ ಗಾಲವನು ಇವಳಿಗೆ ಶುಲ್ಕವನ್ನು ಕೊಡಬಲ್ಲ ಯಾವ ರಾಜನಿಗೆ ಇವಳನ್ನು ಮಾರಲಿ ಎಂದು ಚಿಂತಿಸಿದನು. ಅವನ ಮನಸ್ಸು ಇಕ್ಷ್ವಾಕು ರಾಜಸತ್ತಮ ಹರ್ಯಶ್ವನ ಕಡೆ ಹರಿಯಿತು. ಆ ಅಯೋಧ್ಯೆಯ ಮಹಾವೀರ್ಯ, ಚತುರಂಗಬಲಾನ್ವಿತ, ಕೋಶಧಾನ್ಯಬಲೋಪೇತ, ಪುರರ ಪ್ರಿಯ, ದ್ವಿಜರ ಪ್ರಿಯನು ಮಕ್ಕಳನ್ನು ಬಯಸಿ ಶಾಂತಿಯಿಂದ ಉತ್ತಮ ತಪಸ್ಸನ್ನು ನಡೆಸುತ್ತಿದ್ದನು. ಆ ಹರ್ಯಶ್ವನ ಬಳಿಹೋಗಿ ವಿಪ್ರ ಗಾಲವನು ಹೇಳಿದನು: “ರಾಜೇಂದ್ರ! ನನ್ನ ಈ ಕನ್ಯೆಯು ಪ್ರಸವಿಸಿ ಕುಲವನ್ನು ವೃದ್ಧಿಸುತ್ತಾಳೆ. ಶುಲ್ಕವನ್ನಿತ್ತು ಇವಳನ್ನು ಪತ್ನಿಯನ್ನಾಗಿ ಸ್ವೀಕರಿಸು. ನಿನಗೆ ಶುಲ್ಕವೇನೆಂದು ಹೇಳುತ್ತೇನೆ. ಅದನ್ನು ಕೇಳಿ ನಿನಗೆ ಏನು ಮಾಡಬೇಕೆಂದು ನಿರ್ಧರಿಸು.”

ಬಹಳಷ್ಟು ಚಿಂತೆಮಾಡಿ, ದೀರ್ಘ, ಬಿಸಿಯಾದ, ನಿಟ್ಟುಸಿರನ್ನು ಬಿಡುತ್ತಾ, ಮಕ್ಕಳನ್ನು ಪಡೆಯಲೋಸುಗ, ಆ ನೃಪೋತ್ತಮ ರಾಜಾ ಹರ್ಯಶ್ವನು ಹೇಳಿದನು: “ಉನ್ನತವಾಗಿರಬೇಕಾದ ಆ ಆರೂ ಇವಳಲ್ಲಿ ಉನ್ನತವಾಗಿವೆ. ಸೂಕ್ಷ್ಮವಾಗಿರಬೇಕಾದ ಏಳೂ ಸೂಕ್ಷ್ಮವಾಗಿವೆ. ಗಂಭೀರವಾಗಿರಬೇಕಾದ ಮೂರೂ ಗಂಭೀರವಾಗಿವೆ ಮತ್ತು ಐದು ಕೆಂಪಾಗಿವೆ. ಇವಳು ದೇವಾಸುರಲೋಕದವರಿಗೂ ಗಂಧರ್ವರಿಗೂ ಸುಂದರಿಯಾಗಿ ಕಾಣುತ್ತಾಳೆ. ಬಹುಲಕ್ಷಣ ಸಂಪನ್ನಳಾಗಿದ್ದಾಳೆ. ಬಹಳ ಮಕ್ಕಳನ್ನೂ ಹಡೆಯುವಂತಿದ್ದಾಳೆ. ಇವಳು ನನ್ನಿಂದ ಹುಟ್ಟುವ ಚಕ್ರವರ್ತಿಗೆ ಜನ್ಮನೀಡಲು ಸಮರ್ಥಳಾಗಿದ್ದಾಳೆ. ದ್ವಿಜಶ್ರೇಷ್ಠ! ನನ್ನ ಸಂಪತ್ತನ್ನು ನೋಡಿಕೊಂಡು ಶುಲ್ಕವೇನೆಂದು ಹೇಳು.”

ಗಾಲವನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ, ಚಂದ್ರನಂತೆ ಬಿಳಿಯಾಗಿರುವ, ಉತ್ತಮ ಪ್ರದೇಶದಲ್ಲಿ ಹುಟ್ಟಿದ ಸುಂದರ ಎಂಟುನೂರು ಕುದುರೆಗಳನ್ನು ನನಗೆ ಕೊಡು. ಆಗ ಹುತಾಶನನ ಯೋನಿ ಅರಣಿಯಂತಿರುವ ಈ ಆಯತಲೋಚನೆ ಶುಭೆಯು ನಿನ್ನ ಪುತ್ರರ ಜನನಿಯಾಗುತ್ತಾಳೆ.”

ಈ ಮಾತುಗಳನ್ನು ಕೇಳಿದ ಕಾಮಮೋಹಿತ ರಾಜರ್ಷಿ ರಾಜಾ ಹರ್ಯಶ್ವನು ದೀನನಾಗಿ ಗಾಲವನಿಗೆ ಹೇಳಿದನು: “ನೀನು ಬಯಸುವಂತಹ ಎರಡೇ ನೂರು ಕುದುರೆಗಳು ನನ್ನ ಹತ್ತಿರ ಇವೆ. ಇಷ್ಟಿಗಳಲ್ಲಿ ಬಳಸಬಹುದಾದ ಇತರ ಇನ್ನೂ ನೂರಾರು ಕುದುರೆಗಳು ನನ್ನ ಬಳಿ ಓಡಾಡುತ್ತಿವೆ. ಗಾಲವ! ನಾನು ಇವಳಲ್ಲಿ ಒಬ್ಬನೇ ಮಗನನ್ನು ಹುಟ್ಟಿಸುತ್ತೇನೆ. ನನಗೆ ಈ ವರವನ್ನು ನೀಡಲು ನೀನು ಮನಸ್ಸುಮಾಡಬೇಕು.”

ಇದನ್ನು ಕೇಳಿದ ಆ ಕನ್ಯೆಯು ಗಾಲವನಿಗೆ ಹೇಳಿದಳು: “ಒಮ್ಮೆ ನನಗೆ ಯಾರೋ ಒಬ್ಬ ಬ್ರಹ್ಮವಾದಿಯು ವರವನ್ನು ನೀಡಿದ್ದನು. “ಪ್ರತಿ ಹೆರಿಗೆಯ ನಂತರ ನೀನು ಕನ್ಯೆಯಾಗಿಯೇ ಉಳಿಯುತ್ತೀಯೆ!” ಎಂದು. ಆದುದರಿಂದ ನನ್ನನ್ನು ಈ ರಾಜನಿಗೆ ಕೊಟ್ಟು ನೀನು ಆ ಉತ್ತಮ ಕುದುರೆಗಳನ್ನು ಪಡೆ. ಹೀಗೆ ನಾಲ್ವರು ನೃಪರಿಂದ ಸಂಪೂರ್ಣವಾಗಿ ಎಂಟುನೂರು ಕುದುರೆಗಳನ್ನು ಪಡೆಯಬಹುದು. ನನಗೂ ಕೂಡ ನಾಲ್ವರು ಮಕ್ಕಳಾದಂತೆ ಆಗುತ್ತದೆ. ದ್ವಿಜಸತ್ತಮ! ಹೀಗೆ ನನ್ನನ್ನು ಬಳಸಿ ನಿನ್ನ ಗುರುವಿಗೆ ಬೇಕಾದುದನ್ನು ಸಂಗ್ರಹಿಸಿದಂತಾಗುತ್ತದೆ. ಹೀಗೆ ಮಾಡಬಹುದೆಂದು ನನಗನ್ನಿಸುತ್ತದೆ. ಆದರೆ ನಿನಗೆ ಅನ್ನಿಸಿದ ಹಾಗೆ ಮಾಡು.”

ಕನ್ಯೆಯು ಈ ರೀತಿ ಹೇಳಲು ಮುನಿ ಗಾಲವನು ಪೃಥಿವೀಪಾಲ ಹರ್ಯಶ್ವನಿಗೆ ಈ ಮಾತನ್ನಾಡಿದನು: “ನರಶ್ರೇಷ್ಠ! ಶುಲ್ಕದ ನಾಲ್ಕನೆಯ ಒಂದು ಭಾಗವನ್ನು ಕೊಟ್ಟು ಇವಳನ್ನು ಸ್ವೀಕರಿಸು. ಇವಳಿಂದ ಒಬ್ಬನೇ ಮಗನನ್ನು ಹುಟ್ಟಿಸು.” ಗಾಲವನನ್ನು ಪೂಜಿಸಿ, ಆ ಕನ್ಯೆಯನ್ನು ಸ್ವೀಕರಿಸಿ, ಅವನು ದೇಶಕಾಲದಲ್ಲಿ ಒಪ್ಪಂದದಂತೆ ತನಗಿಷ್ಟವಾದ ಮಗನನ್ನು ಪಡೆದನು. ಸಂಪತ್ತಿರುವವರಲ್ಲೆಲ್ಲ ಅಧಿಕ ಸಂಪತ್ತುಳ್ಳವನಾಗಿ, ವಸುವಿನಂತೆ ತೋರುವ ಅವನು ವಸುಮನಾ ಎಂಬ ಹೆಸರಿನ, ಸಂಪತ್ತನ್ನು ನೀಡುವ, ನರಪತಿಯಾದನು.

ಅನಂತರ ಕಾಲಾಂತರದಲ್ಲಿ ಧೀಮಾನ್ ಗಾಲವನು ಮರಳಿ ಬಂದನು. ಸಂತೋಷದಿಂದಿದ್ದ ಹರ್ಯಶ್ವನನ್ನು ಭೇಟಿಮಾಡಿ ಹೇಳಿದನು: “ನೃಪ! ನಿನಗೆ ಈ ಭಾಸ್ಕರ ಸನ್ನಿಭನಾಗಿರುವ ಮಗನು ಜನಿಸಿದ್ದಾನೆ. ಬೇರೆ ನೃಪರಲ್ಲಿಗೆ ಭಿಕ್ಷೆಗೆ ಹೋಗುವ ಸಮಯವು ಬಂದಿದೆ.”

ಸತ್ಯವಚನದಲ್ಲಿ ಸ್ಥಿತನಾಗಿದ್ದ, ಪೌರುಷದಲ್ಲಿ ನಿಂತಿದ್ದ ಹರ್ಯಶ್ವನು ಸಂಪೂರ್ಣ ಶುಲ್ಕವು ತನ್ನಲ್ಲಿ ದುರ್ಲಭವೆಂದು ಮಾಧವಿಯನ್ನು ಮರಳಿ ಕೊಟ್ಟನು. ಮಾಧವಿಯಾದರೋ ಆ ನೃಪನ ಬೆಳಗುತ್ತಿದ್ದ ಶ್ರೀಯನ್ನು ಪರಿತ್ಯಜಿಸಿ ಪುನಃ ಕಾಮಿಸುವ ಕುಮಾರಿಯಾಗಿ ಗಾಲವನನ್ನು ಹಿಂಬಾಲಿಸಿದಳು. “ಈ ಕುದುರೆಗಳು ನಿನ್ನಲ್ಲಿಯೇ ಇರಲಿ!” ಎಂದು ಹೇಳಿ ದ್ವಿಜನು ಕನ್ಯೆಯೊಡನೆ ಪ್ರಜೇಶ್ವರ ದಿವೋದಾಸನಲ್ಲಿಗೆ ಪ್ರಯಾಣಿಸಿದನು.

ಗಾಲವನು ಹೇಳಿದನು: “ಇವನು ಮಹಾವೀರ, ಮಹೀಪಾಲ, ಕಾಶಿಯ ಒಡೆಯ, ಪ್ರಭು, ದಿವೋದಾಸ ಎಂದು ಪ್ರಖ್ಯಾತನಾಗಿರುವವನು. ನರಾಧಿಪ ಭೀಮಸೇನನ ಮಗ. ಭದ್ರೇ! ಅವನಲ್ಲಿಗೆ ಹೋಗುತ್ತಿದ್ದೇವೆ. ನಿಧಾನವಾಗಿ ಬಾ. ಶೋಕಿಸ ಬೇಡ! ಆ ಜನೇಶ್ವರನು ಧಾರ್ಮಿಕ, ಸಂಯಮಿ ಮತ್ತು ಸತ್ಯವಂತ.”

ಅವನಲ್ಲಿಗೆ ಹೋಗಿ ಮುನಿಯು ಅವನಿಂದ ಯಾಥಾನ್ಯಾಯವಾಗಿ ಸತ್ಕೃತನಾದನು. ಅನಂತರ ಗಾಲವನು ನೃಪನಿಗೆ ಮಕ್ಕಳನ್ನು ಪಡೆಯಲು ಪ್ರಚೋದಿಸಿದನು. ದಿವೋದಾಸನು ಹೇಳಿದನು: “ದ್ವಿಜ! ಈ ಹಿಂದೆಯೇ ನಾನು ಇದರ ಕುರಿತು ಕೇಳಿದ್ದೇನೆ. ಏಕೆ ವಿಸ್ತಾರವಾಗಿ ಹೇಳುತ್ತಿರುವೆ? ಏಕೆಂದರೆ ಇದರ ಕುರಿತು ಕೇಳಿದಾಗಲಿಂದ ಇದನ್ನು ಮಾಡಬೇಕೆಂದು ನನಗೆ ಆಸೆಯಾಗಿದೆ. ಇತರ ನರಾಧಿಪರನ್ನು ಬಿಟ್ಟು ನೀನು ನನ್ನಲ್ಲಿಗೆ ಬಂದಿರುವೆ ಎನ್ನುವುದೂ ನನಗೆ ಹೆಚ್ಚಿನ ಗೌರವದ ವಿಷಯವಾಗಿದೆ. ನಿನ್ನ ಉದ್ದೇಶವನ್ನೂ ಪೂರೈಸುವಲ್ಲಿ ನಾನು ಉಪಯೋಗಕ್ಕೆ ಬರುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಹರ್ಯಶ್ವನಲ್ಲಿರುವಷ್ಟೇ ಸಂಪತ್ತು ನನ್ನಲ್ಲಿದೆ. ನಾನೂ ಕೂಡ ಇವಳಲ್ಲಿ ಒಬ್ಬನೇ ರಾಜನನ್ನು ಹುಟ್ಟಿಸುತ್ತೇನೆ.”

ಹಾಗೆಯೇ ಆಗಲೆಂದು ದ್ವಿಜಶ್ರೇಷ್ಠನು ಮಹೀಪತಿಗೆ ಹೇಳಲು ರಾಜನು ಆ ಕನ್ಯೆಯನ್ನು ವಿಧಿಪೂರ್ವಕವಾಗಿ ಸ್ವೀಕರಿಸಿದನು. ಪ್ರಭಾವತಿಯಲ್ಲಿ ರವಿಯಂತೆ, ಸ್ವಾಹಾಳಲ್ಲಿ ಅಗ್ನಿಯಂತೆ, ಶಚಿಯಲ್ಲಿ ವಾಸವನಂತೆ, ರೋಹಿಣಿಯಲ್ಲಿ ಚಂದ್ರನಂತೆ, ಧೂಮೋರ್ಣಳಲ್ಲಿ ಯಮನಂತೆ, ಗೌರಿಯಲ್ಲಿ ವರುಣನಂತೆ, ಚರ್ಧ್ಮಳಲ್ಲಿ ಧನೇಶ್ವರನಂತೆ, ಲಕ್ಷ್ಮಿಯಲ್ಲಿ ನಾರಾಯಣನಂತೆ, ಜಾಹ್ನವಿಯಲ್ಲಿ ಸಾಗರದಂತೆ, ರುದ್ರಾಣಿಯಲ್ಲಿ ರುದ್ರನಂತೆ, ವೇದಗಳಲ್ಲಿ ಪಿತಾಮಹನಂತೆ, ಅದೃಶ್ಯಂತಳಲ್ಲಿ ಶಕ್ತಿಯಂತೆ, ಅಕ್ಷಮಾಲೆಯಲ್ಲಿ ವಸಿಷ್ಠನಂತೆ, ಸುಕನ್ಯೆಯಲ್ಲಿ ಚ್ಯವನನಂತೆ, ಸಂಧ್ಯೆಯಲ್ಲಿ ಪುಲಸ್ತ್ಯನಂತೆ, ವೈದರ್ಭಿಯಲ್ಲಿ ಅಗಸ್ತ್ಯನಂತೆ, ಸಾವಿತ್ರಿಯಲ್ಲಿ ಸತ್ಯವಾನನಂತೆ, ಪುಲೋಮೆಯಲ್ಲಿ ಭೃಗುವಂತೆ, ಅದಿತಿಯಲ್ಲಿ ಕಶ್ಯಪನಂತೆ, ರೇಣುಕೆಯಲ್ಲಿ ಆರ್ಚೀಕನಂತೆ, ಹೇಮವತಿಯಲ್ಲಿ ಕೌಶಿಕನಂತೆ, ತಾರೆಯಲ್ಲಿ ಬೃಹಸ್ಪತಿಯಂತೆ, ಶತಪರ್ವೆಯಲ್ಲಿ ಶುಕ್ರನಂತೆ, ಭೂಮಿಯೊಂದಿಗೆ ಭೂಮಿಪತಿಯಂತೆ, ಊರ್ವಶಿಯಲ್ಲಿ ಪುರೂರವನಂತೆ, ಸತ್ಯವತಿಯಲ್ಲಿ ಋಚೀಕನಂತೆ, ಮತ್ತು ಸರಸ್ವತಿಯಲ್ಲಿ ಮನುವಿನಂತೆ ಆ ರಾಜರ್ಷಿಯು ಅವಳೊಂದಿಗೆ ರಮಿಸಿದನು. ಹೀಗೆ ರಮಿಸುತ್ತಿರುವ ಭೂಪತಿ ದಿವೋದಾಸನು ಮಾಧವಿಯಲ್ಲಿ ಪ್ರತರ್ದನನೆನ್ನುವ ಓರ್ವ ಪುತ್ರನನ್ನು ಹುಟ್ಟಿಸಿದನು.

ಆಗ ಸಮಯವು ಬಂದಾಗ ಭಗವಾನ್ ಗಾಲವನು ದಿವೋದಾಸನಲ್ಲಿಗೆ ಹೋಗಿ ಈ ಮಾತನ್ನಾಡಿದನು: “ಪೃಥಿವೀಪತೇ! ಕನ್ಯೆಯನ್ನು ನನಗೆ ಹಿಂದಿರುಗಿಸು. ಕುದುರೆಗಳು ನಿನ್ನಲ್ಲಿಯೇ ಇರಲಿ. ಶುಲ್ಕಾರ್ಥಕ್ಕೆ ಇತರರಲ್ಲಿ ಹೋಗುತ್ತೇನೆ.” ಆಗ ಧರ್ಮಾತ್ಮ ಮಹೀಪತಿ ದಿವೋದಾಸನು ಆ ಸಮಯದಲ್ಲಿ ಆ ಕನ್ಯೆಯನ್ನು ಗಾಲವನಿಗೆ ಹಿಂದಿರುಗಿಸಿ ಸತ್ಯಸ್ಥಿತನಾದನು.

ಆ ಶ್ರೀಯನ್ನೂ ತೊರೆದು ಪುನಃ ಕನ್ಯೆಯಾಗಿ ಆ ಯಶಸ್ವಿನೀ ಸತ್ಯಸಂಗರೆ ಮಾಧವಿಯು ವಿಪ್ರ ಗಾಲವನನ್ನು ಅನುಸರಿಸಿದಳು. ತನ್ನ ಕಾರ್ಯವಾಗಬೇಕೆಂದು ಬಯಸಿ ವಿಮರ್ಶೆಮಾಡಿ ಗಾಲವನು ನೃಪ ಔಶೀನರನನ್ನು ನೋಡಲು ಭೋಜನಗರಕ್ಕೆ ಹೋದನು. ಅಲ್ಲಿಗೆ ಹೋಗಿ ಅವನು ಸತ್ಯವಿಕ್ರಮಿ ನೃಪತಿಗೆ ಹೇಳಿದನು: “ಈ ಕನ್ಯೆಯು ನಿನಗೆ ಇಬ್ಬರು ಪಾರ್ಥಿವ ಸುತರನ್ನು ಜನಿಸುತ್ತಾಳೆ. ಇವಳಲ್ಲಿ ಸೋಮಾರ್ಕಪ್ರತಿಸಂಕಾಶರಾದ ಇಬ್ಬರು ಮಕ್ಕಳನ್ನು ಪಡೆದು ನೀನು ಇಲ್ಲಿಯ ಮತ್ತು ನಂತರದ ಉದ್ದೇಶಗಳನ್ನು ಸಾಧಿಸಬಲ್ಲೆ. ಶುಲ್ಕವಾಗಿ ನೀನು ನನಗೆ ನಾಲ್ನೂರು ಚಂದ್ರವರ್ಚಸ, ಒಂದೇ ಕಿವಿಯು ಕಪ್ಪಾಗಿರುವ ಕುದುರೆಗಳನ್ನು ಕೊಡಬೇಕು. ಗುರುವಿಗಾಗಿ ನಾನು ಈ ಕುದುರೆಗಳನ್ನು ಒಟ್ಟುಹಾಕುತ್ತಿದ್ದೇನೆ. ಶಕ್ಯವಾದರೆ ಮಾಡು. ವಿಚಾರಮಾಡಬೇಡ! ಮಕ್ಕಳಿಲ್ಲದವನಾಗಿದ್ದೀಯೆ. ಇಬ್ಬರು ಪುತ್ರರನ್ನು ಹುಟ್ಟಿಸು! ಪುತ್ರನೆನ್ನುವ ದೋಣಿಯಿಂದ ನಿನ್ನನ್ನೂ ನಿನ್ನ ಪಿತೃಗಳನ್ನೂ ಉದ್ಧರಿಸು. ಏಕೆಂದರೆ ಪುತ್ರಫಲವನ್ನು ಪಡೆದವನು ದಿವದಿಂದ ಬೀಳುವುದಿಲ್ಲ ಮತ್ತು ಅನಾತ್ಮಜರು ಹೋಗುವ ಘೋರ ನರಕಕ್ಕೆ ಹೋಗುವುದಿಲ್ಲ.”

ಈ ರೀತಿ ಮತ್ತು ಇನ್ನೂ ಇತರ ವಿಧಗಳಲ್ಲಿ ಹೇಳಿದ ಗಾಲವನ ಮಾತನ್ನು ಕೇಳಿ ನರಾಧಿಪ ಉಶೀನರನು ಅವನಿಗೆ ಪ್ರತ್ಯುತ್ತರವನ್ನಿತ್ತನು: “ಗಾಲವ! ನೀನು ಮಾತನಾಡಿದ್ದುದನ್ನು ನಾನು ಕೇಳಿದ್ದೇನೆ. ಏಕೆಂದರೆ ಯಾವುದರಲ್ಲಿ ನನ್ನ ಮನಸ್ಸು ಬಯಸುತ್ತಿದೆಯೋ ಅಲ್ಲಿ ವಿಧಿಯು ಬಲವಾದುದು. ನನ್ನಲ್ಲಿ ಅಂಥಹ ಇನ್ನೂರು ಕುದುರೆಗಳು ಮಾತ್ರ ಇವೆ. ಇತರ ಬಹಳಷ್ಟು ಸಹಸ್ರ ಸಂಖ್ಯೆಯಲ್ಲಿ ನನ್ನಲ್ಲಿ ನಡೆದಾಡುತ್ತಿವೆ. ನಾನೂ ಕೂಡ ಇವಳಲ್ಲಿ ಓರ್ವನೇ ಮಗನನ್ನು ಪಡೆದು ಇತರರು ಹೋದ ದಾರಿಯಲ್ಲಿಯೇ ಹೋಗುತ್ತೇನೆ. ನಾನು ನಿನಗೆ ಅವರಿಗೆ ಸಮನಾದ ಮೂಲ್ಯವನ್ನೂ ಕೊಡುತ್ತೇನೆ. ನನ್ನ ಸಂಪತ್ತು ಪೌರಜನರಿಗಾಗಿ ಇದೆಯೇ ಹೊರತು ನನಗೆ ಭೋಗಿಸಲಿಕ್ಕಲ್ಲ. ಪರರ ಧನವನ್ನು ತನ್ನ ಕಾಮಕ್ಕಾಗಿ ಕಳೆಯುವ ರಾಜನು ಧರ್ಮವನ್ನೂ ಯಶಸ್ಸನ್ನೂ ಸಾಧಿಸುವುದಿಲ್ಲ. ಆದುದರಿಂದ ಅವಳನ್ನು ನೀನು ನನಗೆ ಕೊಡು. ಸ್ವೀಕರಿಸುತ್ತೇನೆ. ಈ ಕುಮಾರಿಯಲ್ಲಿ ನನಗೆ ದೇವಗರ್ಭಾಭನಾದ ಓರ್ವ ಪುತ್ರನು ಆಗಲಿ.”

ಬಹಳ ಕಲ್ಯಾಣಕರವಾದುದನ್ನು ಹೇಳಿದ ಆ ನರಾಧಿಪ ಉಶೀನರನನ್ನು ದ್ವಿಜಶ್ರೇಷ್ಠ ಗಾಲವನು ಗೌರವಿಸಿದನು. ಅವಳನ್ನು ಉಶೀನರನಿಗೆ ಕೊಟ್ಟು ಗಾಲವನು ವನಕ್ಕೆ ನಡೆದನು. ಅವನು ಅವಳನ್ನು ಶ್ರೀಯನ್ನು ಕೃತಪುಣ್ಯನು ಭೋಗಿಸುವಂತೆ ಕಂದರಗಳಲ್ಲಿ, ಶೈಲಗಳಲ್ಲಿ, ನದಿಗಳಲ್ಲಿ, ನಿರ್ಝರಿಗಳಲ್ಲಿ, ಉದ್ಯಾನಗಗಳಲ್ಲಿ, ವಿಚಿತ್ರ ವನ-ಉಪವನಗಳಲ್ಲಿ, ಹರ್ಮಿಗಳಲ್ಲಿ, ರಮಣೀಯ ಪ್ರಾಸಾದಶಿಖರಗಳಲ್ಲಿ, ವಾತಾಯನ ವಿಮಾನಗಳಲ್ಲಿ, ಗರ್ಭಗೃಹಗಳಲ್ಲಿ ರಮಿಸಿದನು. ಆಗ ಕಾಲದಲ್ಲಿ ಅವನಿಗೆ ಬಾಲರವಿಯ ಪ್ರಭೆಯುಳ್ಳ ಪುತ್ರನು ಜನಿಸಿದನು. ಅವನೇ ಪಾರ್ಥಿವ ಸತ್ತಮ ಶಿಬಿಯೆಂಬ ಹೆಸರಿನಿಂದ ವಿಖ್ಯಾತನಾದನು. ಅನಂತರ ವಿಪ್ರ ಗಾಲವನು ಅವನಿಂದ ಕನ್ಯೆಯನ್ನು ಹಿಂದೆ ಪಡೆದು ವಿನತಾತ್ಮಜನನ್ನು ನೋಡಲು ಹೋದನು.

ಗಾಲವನಿಗೆ ವೈನತೇಯನು ಮುಗುಳ್ನಕ್ಕು ಹೇಳಿದನು: “ಒಳ್ಳೆಯದಾಯಿತು ದ್ವಿಜ! ನೀನು ಕೃತಾರ್ಥನಾದುದನ್ನು ಕಾಣುತ್ತಿದ್ದೇನೆ.” ವೈನತೇಯನು ಹೇಳಿದುದನ್ನು ಕೇಳಿ ಗಾಲವನು ಕಾರ್ಯದ ನಾಲ್ಕನೆಯ ಒಂದು ಭಾಗವು ಇನ್ನೂ ಮಾಡುವುದಿದೆಯೆಂದು ಹೇಳಿದನು. ಆಗ ಪಕ್ಷಿಗಳಲ್ಲಿ ಶ್ರೇಷ್ಠ ಸುಪರ್ಣನು ಗಾಲವನಿಗೆ ಹೇಳಿದನು: “ಅದಕ್ಕೆ ಪ್ರಯತ್ನಿಸಬೇಡ! ಅದು ನಿನ್ನಿಂದ ಸಂಪೂರ್ಣವಾಗುವುದಿಲ್ಲ. ಏಕೆಂದರೆ ಹಿಂದೆ ಕನ್ಯಕುಬ್ಜದಲ್ಲಿ ಗಾಧಿಯು ಮಗಳು ಸತ್ಯವತಿಯನ್ನು ಪತ್ನಿಯನ್ನಾಗಿ ಋಚೀಕನು ವರಿಸುವಾಗ “ಒಂದೇ ಕಿವಿಯು ಕಪ್ಪಾಗಿರುವ ಚಂದ್ರವರ್ಚಸ ಒಂದು ಸಾವಿರ ಕುದುರೆಗಳನ್ನು ನನಗೆ ಕೊಡು” ಎಂದು ಹೇಳಿದ್ದನು. ಹಾಗೆಯೇ ಆಗಲೆಂದು ಋಚೀಕನು ವರುಣಾಲಯಕ್ಕೆ ಹೋದನು. ಅಶ್ವತೀರ್ಥದಲ್ಲಿ ಕುದುರೆಗಳನ್ನು ಪಡೆದು ಪಾರ್ಥಿವನಿಗೆ ಕೊಟ್ಟಿದ್ದನು. ರಾಜನು ಪುಂಡರೀಕ ಇಷ್ಟಿಯನ್ನು ಮಾಡುವಾಗ ದ್ವಿಜರಲ್ಲಿ ಆ ಕುದುರೆಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತಿದ್ದನು. ಅವರಿಂದ ನೀನು ಹೋಗಿದ್ದ ರಾಜರು ಎರಡೆರಡು ನೂರನ್ನು ಖರೀದಿಸಿ ಪಡೆದಿದ್ದರು. ಉಳಿದ ನಾಲ್ನೂರನ್ನು ತರುವಾಗ ಸೇತುವೆಯಿಂದ ವಿತಸ್ತನು ಅಪಹರಿಸಿದ್ದನು. ಹೀಗೆ ಅಪ್ರಾಪ್ಯವಾದುದನ್ನು ಪಡೆಯಲು ಎಂದೂ ಸಾಧ್ಯವಿಲ್ಲ. ನಿನ್ನಲ್ಲಿರುವ ಆರುನೂರು ಕುದುರೆಗಳೊಂದಿಗೆ, ಉಳಿದ ಇನ್ನೂರು ಕುದುರೆಗಳಿಗೆ ಬದಲಾಗಿ ಈ ಕನ್ಯೆಯನ್ನು ನೀನು ವಿಶ್ವಾಮಿತ್ರನಿಗಿತ್ತು ಕೃತಕೃತ್ಯನಾಗು. ಆಗ ನೀನು ಚಿಂತೆ ಕಳೆದುಕೊಂಡವನಾಗುತ್ತೀಯೆ.”

ಹಾಗೆಯೇ ಆಗಲೆಂದು ಹೇಳಿ ಗಾಲವನು ಸುಪರ್ಣನ ಸಹಿತ ಆ ಕನ್ಯೆಯನ್ನೂ ಕರೆದುಕೊಂಡು ವಿಶ್ವಾಮಿತ್ರನಲ್ಲಿಗೆ ಹೋಗಿ ಹೇಳಿದನು: “ನೀನು ಕೇಳಿದಂತಹ ಆರುನೂರು ಕುದುರೆಗಳು ಮಾತ್ರ ಇವೆ. ಉಳಿದ ಇನ್ನೂರಕ್ಕೆ ಬದಲಾಗಿ ಈ ಕನ್ಯೆಯನ್ನು ಸ್ವೀಕರಿಸಬೇಕು. ಇವಳಿಂದ ಮೂವರು ಧಾರ್ಮಿಕ ರಾಜರ್ಷಿಗಳು ಪುತ್ರರನ್ನು ಪಡೆದಿದ್ದಾರೆ. ನಾಲ್ಕನೆಯ ಒಬ್ಬನು ನಿನ್ನಿಂದ ಇವಳಲ್ಲಿ ಹುಟ್ಟಲಿ. ಹೀಗೆ ಎಂಟು ನೂರು ಕುದುರೆಗಳು ಸಂಪೂರ್ಣವಾಗಿ ನಿನಗೆ ಸಲ್ಲಿದಂತಾದವು. ನಿನ್ನಿಂದ ಋಣಮುಕ್ತನಾಗಿ ಯಥಾಸುಖವಾಗಿ ತಪಸ್ಸನ್ನು ಮಾಡುತ್ತೇನೆ.”

ವಿಶ್ವಾಮಿತ್ರನು ಪಕ್ಷಿಯೊಂದಿಗಿರುವ ಗಾಲವನನ್ನು ಮತ್ತು ಆ ವರಾರೋಹೆ ಕನ್ಯೆಯನ್ನು ನೋಡಿ ಈ ಮಾತನ್ನಾಡಿದನು. “ಗಾಲವ! ಈ ಮೊದಲೇ ಇವಳನ್ನು ನನಗೆ ಏಕೆ ಕೊಡಲಿಲ್ಲ? ನನಗೇ ನಾಲ್ಕು ಕುಲಭಾವನ ಮಕ್ಕಳು ಆಗುತ್ತಿದ್ದರಲ್ಲ! ಒಬ್ಬನೇ ಮಗನಿಗಾದರೂ ನಿನ್ನ ಕನ್ಯೆಯನ್ನು ಸ್ವೀಕರಿಸುತ್ತೇನೆ. ಕುದುರೆಗಳು ಎಲ್ಲವೂ ನನ್ನ ಆಶ್ರಮದಲ್ಲಿಯೇ ನೆಲೆಸಲಿ.”

ಆಗ ಮಹಾದ್ಯುತಿ ವಿಶ್ವಾಮಿತ್ರನು ಅವಳೊಂದಿಗೆ ರಮಿಸಿದನು. ಮಾಧವಿಯಲ್ಲಿ ಮಗ ಅಷ್ಟಕನನ್ನು ಜನಿಸಿದನು. ಹುಟ್ಟಿದ ಕೂಡಲೇ ಮಹಾದ್ಯುತಿ ವಿಶ್ವಾಮಿತ್ರನು ಮಗನಿಗೆ ಅರ್ಥ-ಧರ್ಮಗಳಿಂದ ಸಂಯೋಜಿಸಿದನು ಮತ್ತು ಆ ಅಶ್ವಗಳನ್ನೂ ಕೊಟ್ಟನು. ಅನಂತರ ಅಷ್ಟಕನು ಸೋಮಪುರಪ್ರಭೆಯುಳ್ಳ ಪುರವನ್ನು ಪಡೆದನು. ಕೌಶಿಕನಾದರೋ ಕನ್ಯೆಯನ್ನು ಶಿಷ್ಯನಿಗೆ ಹಿಂದಿರುಗಿಸಿ, ವನಕ್ಕೆ ತೆರಳಿದನು. ಗಾಲವನೂ ಕೂಡ ಸುಪರ್ಣನ ಜೊತೆಗೆ ಗುರು ದಕ್ಷಿಣೆಗಳನ್ನು ಪೂರೈಸಿ ಮನಸ್ಸಿನಲ್ಲಿ ತುಂಬಾ ಸಂತೋಷಗೊಂಡು ಕನ್ಯೆಗೆ ಹೀಗೆ ಹೇಳಿದನು: “ನೀನು ದಾನಪತಿಯಾಗಿರುವ ಮಗನಿಗೆ ಜನ್ಮವಿತ್ತಿದ್ದೀಯೆ. ಇನ್ನೊಬ್ಬನು ಶೂರ. ಅನ್ಯನು ಸತ್ಯಧರ್ಮ ರತ. ಇನ್ನೊಬ್ಬನು ಯಜ್ಞಗಳಲ್ಲಿ ಶ್ರೇಷ್ಠನು. ವರಾರೋಹೇ! ಈ ಮಕ್ಕಳ ಮೂಲಕ ನೀನು ನಿನ್ನ ತಂದೆಯಲ್ಲದೇ ಆ ನಾಲ್ವರು ರಾಜರನ್ನೂ, ಮತ್ತು ನನ್ನನ್ನೂ ಉದ್ಧರಿಸಿದ್ದೀಯೆ. ಹೋಗು!”

ಗಾಲವನು ಪನ್ನಗಾಶನ ಸುಪರ್ಣನಿಗೆ ಬೀಳ್ಕೊಟ್ಟು, ಆ ಕನ್ಯೆಯನ್ನು ತಾನೇ ಅವಳ ತಂದೆಗೆ ಹಿಂದಿರುಗಿಸಿ ವನಕ್ಕೆ ತೆರಳಿದನು.

ಅನಂತರ ರಾಜ ಯಯಾತಿಯು ಪುನಃ ಮಗಳು ಮಾಧವಿಯ ಸ್ವಯಂವರವನ್ನು ಮಾಡಲು ಬಯಸಿ ಮಾಧವಿಯನ್ನು ಮಾಲೆ-ಗೆಜ್ಜೆಗಳಿಂದ ಅಲಂಕರಿಸಿ, ರಥದಲ್ಲಿ ಕುಳ್ಳಿರಿಸಿಕೊಂಡು, ಗಂಗಾಯಮುನ ಸಂಗಮದಲ್ಲಿ ಒಂದು ಆಶ್ರಮಪದವನ್ನು ತಲುಪಿದನು. ಪುರು-ಯದುಗಳೀರ್ವರೂ ಆಶ್ರಮಕ್ಕೆ ತಂಗಿಯನ್ನು ಹಿಂಬಾಲಿಸಿದರು. ಅಲ್ಲಿ ನಾಗ, ಯಕ್ಷ, ಮನುಷ್ಯ, ಪಕ್ಷಿ, ಜಿಂಕೆಗಳು, ಸೈಲ, ದ್ರುಮ, ವನೌಕಸರ ಸಮಾಗಮವಾಗಿತ್ತು. ಆ ವನವು ನಾನಾ ಪುರುಷರ ಮತ್ತು ದೇಶಗಳ ರಾಜರುಗಳಿಂದ ತುಂಬಿಹೋಗಿತ್ತು. ಬ್ರಹ್ಮಕಲ್ಪ ಋಷಿಗಳೂ ಅಲ್ಲಿ ಸೇರಿದ್ದರು. ಆ ಎಲ್ಲ ವರರನ್ನೂ ಪರಿಚಯಿಸಿದ ನಂತರ ಆ ವರವರ್ಣಿನಿಯು ವರರೆಲ್ಲರನ್ನೂ ದಾಟಿ ವನವನ್ನು ವರನನ್ನಾಗಿ ವರಿಸಿದಳು. ಯಯಾತಿಯ ಮಗಳು ಕನ್ಯೆಯು ರಥದಿಂದಿಳಿದು, ಬಂಧುಗಳಿಗೆ ನಮಸ್ಕರಿಸಿ ಪುಣ್ಯ ವನಕ್ಕೆ ತೆರಳಿ ತಪಸ್ಸನ್ನು ತಪಿಸಿದಳು. ಉಪವಾಸ, ವಿವಿಧ ದೀಕ್ಷಾನಿಯಮಗಳಿಂದ ತನ್ನನ್ನು ಹಗುರವಾಗಿಸಿಕೊಂಡು ಅವಳು ಮೃಗಚಾರಿಣಿಯಾದಳು. ವೈಡೂರ್ಯದಂತಿರುವ ಮೃದುವಾದ ಹಸಿರು, ಚಪ್ಪೆ-ಸಿಹಿಯಾಗಿರುವ ಚಿಗುರುಗಳನ್ನು ಮೇಯುತ್ತಾ; ಹರಿಯುತ್ತಿರುವ ಪುಣ್ಯ, ರುಚಿಕರ, ಶುದ್ಧ ಶೀತ ವಿಮಲ ನದಿಗಳ ನೀರನ್ನು ಕುಡಿಯುತ್ತಾ; ಜಿಂಕೆಯೇ ರಾಜನಾಗಿರುವ, ಸಿಂಹವು ಇಲ್ಲದಿರುವ, ದಾವಾಗ್ನಿಗಳಿಂದ ಮುಕ್ತವಾದ, ಶೂನ್ಯ ಗಹನ ವನಗಳಲ್ಲಿ ಹರಿಣಗಳೊಡನೆ ಜಿಂಕೆಯಂತೆಯೇ ವನದಲ್ಲಿ ಸಂಚರಿಸಿಕೊಂಡು, ವಿಪುಲ ಧರ್ಮ ಮತ್ತು ಬ್ರಹ್ಮಚರ್ಯದಿಂದ ಸಂವೃತಳಾಗಿ ನಡೆದುಕೊಂಡಳು.

ಯಯಾತಿಯೂ ಕೂಡ ಹಿಂದಿನ ರಾಜರಂತೆ ನಡೆದುಕೊಂಡು ಬಹಳ ಸಾವಿರ ವರ್ಷಗಳ ನಂತರ ಕಾಲಧರ್ಮಕ್ಕೊಳಗಾದನು. ನರೋತ್ತಮರಾದ ಪುರು ಮತ್ತು ಯದು ಇಬ್ಬರೂ ಎರಡು ವಂಶಗಳನ್ನು ಬೆಳೆಯಿಸಿ ಈ ಲೋಕ ಮತ್ತು ಪರಲೋಕ ಎರಡರಲ್ಲಿಯೂ ನಾಹುಷನ ಹೆಸರನ್ನು ಪ್ರತಿಷ್ಠಾಪಿಸಿದರು. ನರಪತಿ ಯಯಾತಿ ನೃಪತಿ ವಿಭುವು ಸ್ವರ್ಗವನ್ನು ಸೇರಿ ಮಹರ್ಷಿಗಳಂತೆ ಸ್ವರ್ಗದ ಅಗ್ರ ಫಲಗಳನ್ನು ಭೋಗಿಸಿ ಮೆರೆದನು. ಬಹುವರ್ಷಸಹಸ್ರಗಳು ಬಹುಗುಣಗಳಲ್ಲಿ ಕಳೆಯಲು, ರಾಜರ್ಷಿಗಳು ಮತ್ತು ಮಹರ್ಷಿಗಳೊಂದಿಗೆ ಕುಳಿತುಕೊಂಡಿರುವಾಗ, ಯಯಾತಿಯು ಬುದ್ಧಿಮೂಢನಾಗಿ, ವಿಸ್ಮಯದಿಂದ ಆವೇಶಗೊಂಡು, ಎಲ್ಲ ನರರನ್ನೂ, ದೇವತೆಗಳನ್ನೂ, ಋಷಿಗಣಗಳನ್ನೂ ಅಪಮಾನಿಸಿದನು. ಅವನನ್ನು ಬಲನಿಷೂದನ ದೇವ ಶಕ್ರನು ಅರ್ಥಮಾಡಿಕೊಂಡನು. ಅವನೂ ರಾಜರ್ಷಿಗಳೆಲ್ಲರೂ “ಧಿಕ್ಕಾರ! ಧಿಕ್ಕಾರ!” ಎಂದು ಹೇಳಿದರು. ನಹುಷಾತ್ಮಜನನ್ನು ನೋಡಿ ಅವರಲ್ಲಿ ಸಂಶಯವುಂಟಾಯಿತು: “ಇವನು ಯಾರು? ಯಾರ ರಾಜ? ಹೇಗೆ ಸ್ವರ್ಗಕ್ಕೆ ಆಗಮಿಸಿದನು? ಯಾವ ಕರ್ಮಗಳಿಂದ ಇವನು ಸಿದ್ಧನಾದನು? ಎಲ್ಲಿಂದ ತಪೋಬಲವನ್ನು ಪಡೆದನು? ಸ್ವರ್ಗದಲ್ಲಿ ಇವನು ಹೇಗೆ ಪರಿಚಿತನಾಗಿದ್ದಾನೆ? ಯಾರು ಇವನನ್ನು ಬಲ್ಲರು?”

ಹೀಗೆ ಸ್ವರ್ಗವಾಸಿ ರಾಜರು ನೃಪತಿ ಯಯಾತಿಯ ಕಡೆ ನೋಡಿ ಅನ್ಯೋನ್ಯರನ್ನು ಕೇಳಿ ವಿಚಾರಿಸಿದರು. ನೂರಾರು ವಿಮಾನಪಾಲಕರು, ಸ್ವರ್ಗದ್ವಾರ ರಕ್ಷಕರು, ಮತ್ತು ಆಸನಪಾಲಕರು “ಇವನು ನಮಗೆ ಗೊತ್ತಿಲ್ಲ!” ಎಂದು ಹೇಳಿದರು. ಅವರೆಲ್ಲರ ಜ್ಞಾನವು ಮಸುಕಾಗಿತ್ತು ಮತ್ತು ಯಾರೂ ಆ ನೃಪನನ್ನು ಗುರುತಿಸಲಿಲ್ಲ. ಮುಹೂರ್ತ ಮಾತ್ರದಲ್ಲಿ ಆ ನೃಪನು ಓಜಸ್ಸಿಲ್ಲದವನಾಗಿಬಿಟ್ಟಿದ್ದನು.

ಆಗ ಸ್ಥಾನದಿಂದ ಪ್ರಚಲಿತನಾಗಿ, ಆಸನದಿಂದ ಪರಿಚ್ಯುತನಾಗಿ, ಮನಸ್ಸು ಕಂಪಿಸುತ್ತಿರಲು, ಶೋಕವಹ್ನಿಯಲ್ಲಿ ಬೆಂದು, ಮಾಲೆಯು ಮಸುಕಾಗಿ, ವಿಶೇಷ ಜ್ಞಾನವನ್ನು ಕಳೆದುಕೊಂಡು, ಕಿರೀಟ-ಅಂಗದಗಳನ್ನು ಕಳಚಿಕೊಂಡು, ತಲೆತಿರುಗಿದಂತಾಗಿ, ಕೈಕಾಲುಗಳು ಜೋತುಬಿದ್ದು, ಆಭರಣ-ವಸ್ತ್ರಗಳನ್ನು ಕಳೆದುಕೊಂಡು, ಅದೃಶ್ಯನಾಗಿ, ಇತರರನ್ನು ನೋಡಿಯೂ ನೋಡದಂತೆ, ಶೂನ್ಯಮನಸ್ಸಿನಿಂದ ಶೂನ್ಯನಾಗಿ ಮಹೀತಲಕ್ಕೆ ಬೀಳುತ್ತಿದ್ದನು. “ನನ್ನನ್ನು ಸ್ಥಾನದಿಂದ ಚಲಿಸಬಲ್ಲಂತಹ, ಅಶುಭವೂ ಧರ್ಮದೂಷಣವೂ ಆದ ಯಾವುದನ್ನು ನಾನು ಮನಸ್ಸಿನಲ್ಲಿ ಧ್ಯಾನಿಸಿದೆ?” ಎಂದು ರಾಜನು ಚಿಂತಿಸಿದನು. ಆದರೆ ಅಲ್ಲಿದ್ದ ರಾಜರು, ಸಿದ್ಧರು ಮತ್ತು ಅಪ್ಸರೆಯರು ನಿರಾಲಂಬನಾಗಿ ಪರಿಚ್ಯುತನಾಗಿದ್ದ ಯಯಾತಿಯನ್ನು ನೋಡಲೇ ಇಲ್ಲ. ಅಷ್ಟರಲ್ಲಿಯೇ ಕ್ಷೀಣ ಪುಣ್ಯರನ್ನು ಕೆಳಗುರಿಳಿಸುವ ಯಾರೋ ಪುರುಷನೋರ್ವನು ದೇವರಾಜನ ಶಾಸನದಂತೆ ಯಯಾತಿಗೆ ಹೇಳಿದನು: “ಅತೀವ ಮದಮತ್ತನಾಗಿ ನೀನು ಬೇರೆ ಯಾರನ್ನೂ ಅವಮಾನಿಸುತ್ತಿರುವೆ. ಮಾನದಿಂದಾಗಿ ನೀನು ಸ್ವರ್ಗಭ್ರಷ್ಟನಾಗಿದ್ದೀಯೆ. ನೀನು ಅನರ್ಹನಾಗಿರುವೆ. ಈಗ ನೀನು ಅಪರಿಚಿತ. ಹೋಗು. ಬೀಳು!” ಎಂದು ಅವನು ಹೇಳಿದನು. “ಒಳ್ಳೆಯವರ ಮಧ್ಯೆ ಬೀಳುವಂತಾಗಲಿ!” ಎಂದು ಹೇಳಿ ಗತಿವಂತರಲ್ಲಿ ಶ್ರೇಷ್ಠ ನಹುಷಾತ್ಮಜನು ಹೋಗುವ ದಾರಿಯ ಕುರಿತು ಚಿಂತಿಸಿದನು.

ಇದೇ ಕಾಲದಲ್ಲಿ ನೈಮಿಷದಲ್ಲಿದ್ದ ನಾಲ್ವರು ಪಾರ್ಥಿವರ್ಷಭರನ್ನು ನೋಡಿ ಅವನು ಆ ನೃಪರ ಮಧ್ಯದಲ್ಲಿಯೇ ಬಿದ್ದನು. ಪ್ರತರ್ದನ, ವಸುಮನ, ಔಶೀನರ ಶಿಬಿ ಮತ್ತು ಅಷ್ಟಕರು ವಾಜಪೇಯ ಯಜ್ಞದಿಂದ ಸುರೇಶ್ವರನನ್ನು ತೃಪ್ತಿಪಡಿಸುತ್ತಿದ್ದರು. ಅವರ ಅಧ್ವರದಲ್ಲಿ ಹುಟ್ಟಿದ ಧೂಮವು ಸ್ವರ್ಗದ್ವಾರವನ್ನು ತಲುಪಿತ್ತು. ಅದನ್ನು ಆಘ್ರಾಣಿಸಿ ಯಯಾತಿಯು ಭೂಮಿಯ ಮೇಲೆ ಬಿದ್ದನು. ಭೂಮಿಯನ್ನು ಸ್ವರ್ಗಕ್ಕೆ ಜೋಡಿಸುವ ಗಂಗಾನದಿಯಂತಿದ್ದ ಆ ಧೂಮದಲ್ಲಿಯೇ ತೇಲಿಕೊಂಡು ಜಗತೀಪತಿ ರಾಜನು ಲೋಕಪಾಲಕರಂತಿದ್ದ ಆ ನಾಲ್ವರು ಶ್ರೀಮಂತ, ಅವಭೃಥರಲ್ಲಿ ಅಗ್ರ ಬಂಧುಗಳ ಮಧ್ಯೆ ಬಿದ್ದನು. ಆ ಪುಣ್ಯ ಸಂಕ್ಷಯದಲ್ಲಿ ಮಹಾಗ್ನಿಗಳಲ್ಲಿ ಆಹುತಿಗಳಂತಿದ್ದ ರಾಜಸಿಂಹರ ಮಧ್ಯೆ ರಾಜರ್ಷಿ ಯಯಾತಿಯು ಬಿದ್ದನು.

ಶ್ರೀಯಂತೆ ಸುಂದರರಾಗಿದ್ದ ಆ ಪಾರ್ಥಿವರೆಲ್ಲರೂ ಅವನನ್ನು ಕೇಳಿದರು: “ನೀನು ಯಾರು? ಯಾರ ಬಂಧು? ಯಾವ ದೇಶ ಅಥವಾ ನಗರದವನು? ಯಕ್ಷನೋ ಅಥವಾ ದೇವನೋ, ಗಂಧರ್ವನೋ ಅಥವಾ ರಾಕ್ಷಸನೋ? ಏಕೆಂದರೆ ನೀನು ಮನುಷ್ಯರೂಪದವನಲ್ಲ! ನಿನ್ನ ಉದ್ದೇಶ ಬಯಕೆಗಳು ಏನು?”

ಯಯಾತಿಯು ಹೇಳಿದನು: “ನಾನು ರಾಜರ್ಷಿ ಯಯಾತಿ. ಪುಣ್ಯವು ಕಡಿಮೆಯಾಗಿ ದಿವದಿಂದ ಚ್ಯುತನಾಗಿದ್ದೇನೆ. ಒಳ್ಳೆಯವರ ಮಧ್ಯೆ ಬೀಳಲಿ ಎಂದು ಆಲೋಚಿಸುತ್ತಾ ನಿಮ್ಮ ಮಧ್ಯೆ ಬಿದ್ದಿದ್ದೇನೆ!”

ರಾಜರು ಹೇಳಿದರು: “ಪುರುಷರ್ಷಭ! ನಿನ್ನನ್ನು ಬಯಕೆಯು ಸತ್ಯವಾಗಲಿ. ನಮ್ಮೆಲ್ಲರ ಕ್ರತು ಮತ್ತು ಧರ್ಮಫಲಗಳನ್ನು ಸ್ವೀಕರಿಸು.”

ಯಯಾತಿಯು ಹೇಳಿದನು: “ನಾನು ಧನವನ್ನು ದಾನವಾಗಿ ಸ್ವೀಕರಿಸಬಲ್ಲ ಬ್ರಾಹ್ಮಣನಲ್ಲ. ಏಕೆಂದರೆ ನಾನು ಕ್ಷತ್ರಿಯ. ಇತರರ ಪುಣ್ಯವನ್ನು ನಾಶಗೊಳಿಸುವಲ್ಲಿ ನನ್ನ ಬುದ್ಧಿಯು ಇಷ್ಟಪಡುವುದಿಲ್ಲ.”

ಅದೇ ಸಮಯದಲ್ಲಿ ಜಿಂಕೆಯ ನಡತೆ ಕ್ರಮಗಳನ್ನು ಅನುಸರಿಸುತ್ತಿರುವ ಮಾಧವಿಯನ್ನು ನೋಡಿ ರಾಜರು ಅವಳನ್ನು ಅಭಿವಂದಿಸಿ ಹೇಳಿದರು: “ನೀನು ಇಲ್ಲಿಗೆ ಬರಲು ಕಾರಣವೇನು? ಏನು ಕೆಲಸವಿದೆ? ನಿನ್ನ ಶಾಸನದಂತೆ ಮಾಡುತ್ತೇವೆ. ಆಜ್ಞಾಪಿಸು. ತಪೋಧನೆ! ನಾವೆಲ್ಲರೂ ನಿನ್ನ ಪುತ್ರರು.”

ಅವರ ಆ ಮಾತನ್ನು ಕೇಳಿ ಪರಮ ಮುದಿತಳಾಗಿ ಮಾಧವಿಯು ತಂದೆ ಯಯಾತಿಯ ಬಳಿ ಸಾರಿ ಅವನಿಗೆ ವಂದಿಸಿದಳು. ತಲೆತಗ್ಗಿಸಿ ನಿಂತಿದ್ದ ಮಕ್ಕಳನ್ನು ನೋಡಿ ಆ ತಾಪಸಿಯು ಹೇಳಿದಳು: “ರಾಜೇಂದ್ರ! ನನ್ನ ಈ ಮಕ್ಕಳು ನಿನ್ನ ಮಗಳ ಮಕ್ಕಳು. ನಿನಗೆ ಪರರಲ್ಲ. ಇವರೇ ನಿನ್ನನ್ನು ಉದ್ಧರಿಸುತ್ತಾರೆ ಎಂಬುದು ಬಹಳ ಹಿಂದೆಯೇ ಕಾಣಲಾಗಿತ್ತು. ನಾನು ನಿನ್ನ ಮಗಳು ಮೃಗಚಾರಿಣೀ ಮಾಧವೀ. ನಾನೂ ಕೂಡ ಧರ್ಮವನ್ನು ಸಂಚಯಿಸಿದ್ದೇನೆ. ಅದರ ಅರ್ಧವನ್ನು ಸ್ವೀಕರಿಸಬೇಕು. ಹೇಗೆ ನರರು ಎಲ್ಲರೂ ಮಕ್ಕಳ ಫಲಗಳಿಗೆ ಭಾಗಿಗಳಾಗುತ್ತಾರೋ ಹಾಗೆ ನಿನ್ನಂತೆ ಮಗಳ ಮಕ್ಕಳನ್ನೂ ಬಯಸುತ್ತಾರೆ.”

ಆಗ ಆ ಎಲ್ಲ ಪಾರ್ಥಿವರೂ ಶಿರಬಾಗಿ ಜನನಿಗೆ ಅಭಿವಂದಿಸಿದರು. ಮಾತಾಮಹನಿಗೆ ನಮಸ್ಕರಿಸಿ ಹೇಳಿದರು. ಅವರ ಉಚ್ಚವಾದ, ಅನುಪಮ, ಸ್ನಿಗ್ಧ ಸ್ವರಗಳಿಂದ ಮೇದಿನಿಯನ್ನು ತುಂಬಿಸಿ ಆ ನೃಪತಿಗಳು ದಿವದಿಂದ ಚ್ಯುತನಾಗಿದ್ದ ಮಾತಾಮಹನನ್ನು ಉದ್ಧರಿಸಿದರು. ಆಗ ಗಾಲವನೂ ಅಲ್ಲಿಗೆ ಬಂದು ಪಾರ್ಥಿವನಿಗೆ “ನನ್ನ ತಪಸ್ಸಿನ ಎಂಟನೇ ಒಂದು ಭಾಗದಿಂದ ನೀನು ಸ್ವರ್ಗವನ್ನೇರು!” ಎಂದನು.

ನರಪುಂಗವ ಯಯಾತಿಯು ಆ ದಿವ್ಯಸಂಸ್ಥಾನದಲ್ಲಿ ಗುರುತಿಸಲ್ಪಟ್ಟ ಕೂಡಲೇ ಅವನು ವಿಗತಜ್ವರನಾದನು. ದಿವ್ಯಮಾಲಾಂಬರಧರನಾಗಿ ದಿವ್ಯಾಭರಣಭೂಷಿತನಾಗಿ ದಿವ್ಯಗಂಧಗುಣೋಪೇತನಾಗಿ ಅವನ ಕಾಲುಗಳು ಭೂಮಿಯನ್ನು ಮುಟ್ಟಲಿಲ್ಲ. ಆಗ ಮೊಟ್ಟಮೊದಲು ಲೋಕದಲ್ಲಿ ದಾನಪತಿಯೆಂದು ಖ್ಯಾತನಾದ ವಸುಮನನು ಉಚ್ಚವಾಗಿ ಉಚ್ಚರಿಸಿ ನೃಪನಿಗೆ ಹೇಳಿದನು: “ಸರ್ವವರ್ಣದವರೊಡನೆ ಅಗರ್ಹದಿಂದ ನಡೆದುಕೊಂಡಿದುದರಿಂದ ಈ ಲೋಕದಲ್ಲಿ ಏನನ್ನು ಸಂಪಾದಿಸಿದ್ದೇನೋ ಅದನ್ನೂ ನಿನಗೆ ಕೊಟ್ಟು ಸಂಯೋಜಿಸುತ್ತಿದ್ದೇನೆ.  ದಾನಶೀಲನಾದುದರಿಂದ ಮತ್ತು ಕ್ಷಮಾಶೀಲನಾದುದರಿಂದ ಏನು ಫಲಗಳನ್ನು ಪಡೆದಿದ್ದೇನೋ ಅವುಗಳನ್ನು ನಿನಗೆ ಕೊಟ್ಟು ಸಂಯೋಜಿಸುತಿದ್ದೇನೆ.”

ಆಗ ಕ್ಷತ್ರಿಯ ಪುಂಗವ ಪ್ರತರ್ದನನು ಹೇಳಿದನು: “ನಿತ್ಯವೂ ಧರ್ಮರತನಾಗಿರುವುದರಿಂದ, ನಿತ್ಯವೂ ಯುದ್ಧಪರಾಯಣನಾಗಿರುವುದರಿಂದ ಈ ಲೋಕದಲ್ಲಿ ಪಡೆದ, ಕ್ಷತ್ರಧರ್ಮದಿಂದ ಪಡೆದ ಯಶಸ್ಸು, ವೀರಶಬ್ಧದ ಫಲವನ್ನು ಕೊಟ್ಟು ನಿನ್ನನ್ನು ಸಂಯೋಜಿಸುತ್ತಿದ್ದೇನೆ.”

ಧೀಮಂತ ಶಿಬಿ ಔಶೀನರನು ಮಧುರ ಸ್ವರದಲ್ಲಿ ಹೇಳಿದನು: “ಈ ಹಿಂದೆ ಬಾಲಕರಲ್ಲಿಯಾಗಲೀ, ನಾರಿಯರಲ್ಲಿಯಾಗಲೀ, ವ್ಯವಹಾರದಲ್ಲಿಯಾಗಲೀ, ಯುದ್ಧಗಳಲ್ಲಿಯಾಗಲೀ, ಉತ್ಪಾತಗಳಲ್ಲಿಯಾಗಲೀ, ತುರ್ತುಪರಿಸ್ಥಿತಿಗಳಲ್ಲಿಯಾಗಲೀ ಸುಳ್ಳನ್ನು ಹೇಳದೇ ಇದ್ದ ನನ್ನ ಆ ಸತ್ಯದಿಂದ ನೀನು ಆಕಾಶವನ್ನೇರು! ರಾಜನ್! ನಾನು ಪ್ರಾಣವನ್ನು, ರಾಜ್ಯವನ್ನು, ಕರ್ಮ ಸುಖಗಳನ್ನು ತ್ಯಜಿಸಿಯೇನು. ಆದರೆ ಸತ್ಯವನ್ನು  ಬಿಡಲಾರೆ ಎನ್ನುವ ಸತ್ಯದಿಂದ ನೀನು ಆಕಾಶವನ್ನೇರು. ನಾನು ಸತ್ಯದಿಂದ ಧರ್ಮನನ್ನು, ಸತ್ಯದಿಂದ ಪಾವಕನನ್ನು, ಸತ್ಯದಿಂದ ಶಕ್ರನನ್ನು ಪ್ರೀತಿಸಿದ್ದರೆ ಆ ಸತ್ಯದಿಂದ ನೀನು ಆಕಾಶವನ್ನೇರು!”

ಆಗ ರಾಜರ್ಷಿ, ಕೌಶಿಕ, ಮಾಧವೀಸುತ, ಅನೇಕ ನೂರಾರು ಯಜ್ಞಗಳನ್ನು ನಡೆಸಿದ್ದ ಧರ್ಮವಿದು ಅಷ್ಟಕನು ಈ ಮಾತನ್ನು ಹೇಳಿದನು: “ಪ್ರಭೋ! ನಾನು ನೂರಾರು ಪಂಡರೀಕ, ಗೋಸವ ಮತ್ತು ವಾಜಪೇಯ ಯಜ್ಞಗಳನ್ನು ಮಾಡಿದ್ದೇನೆ. ಅವುಗಳ ಫಲವನ್ನು ಹೊಂದು. ಕ್ರತುಗಳಲ್ಲಿ ಬಳಸದೇ ಇದ್ದ ರತ್ನಗಳಾಗಲೀ, ಧನವಾಗಲೀ, ಪರಿಚ್ಚದವಾಗಲೀ ನನ್ನಲ್ಲಿ ಇಲ್ಲ ಎನ್ನುವ ಈ ಸತ್ಯದಿಂದ ಆಕಾಶವನ್ನೇರು!”

ಹೇಗೆ ಮಗಳ ಮಕ್ಕಳು ಹೀಗೆ ಆ ನರಾಧಿಪನಿಗೆ ಮಾತನಾಡುತ್ತಿದ್ದರೋ ಹಾಗೆ ರಾಜನು ವಸುಮತಿಯನ್ನು ಬಿಟ್ಟು ದಿವಕ್ಕೆ ತೆರಳಿದನು. ಈ ರೀತಿ ಸ್ವರ್ಗದಿಂದ ಭ್ರಷ್ಟನಾದ ಯಯಾತಿಯನ್ನು ಆ ಎಲ್ಲ ರಾಜರು ತಮ್ಮ ಸುಕೃತ ತೇಜಸ್ಸುಗಳಿಂದ ಉದ್ಧರಿಸಿದರು. ನಾಲ್ಕು ರಾಜವಂಶಗಳಲ್ಲಿ ಹುಟ್ಟಿದ ಕುಲವರ್ಧನ ಆ ಮಗಳ ಮಕ್ಕಳು ತಮ್ಮದೇ ಧರ್ಮದಿಂದ, ಯಜ್ಞ ದಾನಗಳನ್ನು ಮಾಡಿದುದರ ಮೂಲಕ ಮಹಾಪ್ರಾಜ್ಞ ಮಾತಾಮಹನನ್ನು ದಿವಕ್ಕೆ ಏರಿಸಿದರು.

ರಾಜರು ಹೇಳಿದರು: “ರಾಜನ್! ರಾಜಧರ್ಮಗುಣೋಪೇತರಾದ, ಸರ್ವಧರ್ಮ ಗುಣಾನ್ವಿತರಾದ ನಿನ್ನ ಮಗಳ ಮಕ್ಕಳಾದ ನಮ್ಮಿಂದ ದಿವವವನ್ನೇರು!”

ಆ ಭೂರಿದಕ್ಷಿಣ ಒಳ್ಳೆಯ ಪಾರ್ಥಿವರಿಂದ ಸ್ವರ್ಗಕ್ಕೆ ಏರಿಸಲ್ಪಟ್ಟ ಯಯಾತಿಯು ಮಗಳ ಮಕ್ಕಳನ್ನು ಬೀಳ್ಕೊಂಡು ಸ್ವರ್ಗವನ್ನು ಸೇರಿದನು. ನಾನಾ ಸುಗಂಧಿತ ಪುಷ್ಪಗಳ ಮಳೆಯಲ್ಲಿ ಮಿಂದು, ಪುಣ್ಯಸುಗಂಧಯುಕ್ತ ಪುಣ್ಯಗಾಳಿಗೆ ಸಿಲುಕಿ, ಮಗಳ ಮಕ್ಕಳ ಫಲವನ್ನು ಪಡೆದು ಅಚಲ ಸ್ಥಾನವನ್ನೇರಿ, ತನ್ನದೇ ಉಪಚಿತ ಕರ್ಮಗಳಿಂದ ಪರಮ ಶ್ರೀಯನ್ನು ಪಡೆದು ಪ್ರಜ್ವಲಿಸಿದನು. ಗಂಧರ್ವಾಪ್ಸರ ಗಣಗಳ ಉಪಗೀತ ಉಪನೃತ್ಯಗಳಿಂದ, ದುಂದುಭಿ ನಿಸ್ವನಗಳಿಂದ ಅವನು ಸ್ವರ್ಗದಲ್ಲಿ ಪ್ರೀತಿಯಿಂದ ಸ್ವಾಗತಿಸಲ್ಪಟ್ಟನು. ವಿವಿಧ ದೇವ-ರಾಜರ್ಷಿ ಚಾರಣರ ಅರ್ಚನೆಗಳಿಂದ ಸಂತೋಷಗೊಂಡು, ದೇವತೆಗಳಿಂದ ಅಭಿನಂದಿತನಾಗಿ, ಅವನು ಸ್ವರ್ಗಫಲವನ್ನು ಹೊಂದಿದನು. ಆಗ ಪಿತಾಮಹನು ಶಾಂತಮನಸ್ಕನಾಗಿ ಹಿಂದಿರುಗಿದ ಅವನನ್ನು ತೃಪ್ತಿಗೊಳಿಸಲೋ ಎನ್ನುವಂತೆ ಹೇಳಿದನು: “ಲೋಕದಲ್ಲಿ ಕರ್ಮಗಳ ಮೂಲಕ ನಾಲ್ಕು ಭಾಗ ಧರ್ಮಗಳನ್ನು ಸಂಚಯಿಸಿದ್ದೀಯೆ. ಈ ಲೋಕವು ನಿನಗೆ ಅಕ್ಷಯವಾಗುತ್ತದೆ. ರಾಜರ್ಷೇ! ನಿನ್ನ ಸುಕೃತ ಕರ್ಮಗಳಿಂದ ಪುನಃ ದಿವಿಯಲ್ಲಿ ನಿನ್ನ ಕೀರ್ತಿಯೂ ಅಕ್ಷಯವಾಗುತ್ತದೆ. ಸ್ವರ್ಗವಾಸಿಗಳೆಲ್ಲರ ಚೇತನಗಳೂ ತಮಸ್ಸಿನಿಂದ ಆವೃತವಾಗಿದ್ದವು. ಆದುದರಿಂದ ಅವರು ನಿನ್ನನ್ನು ಗುರುತಿಸಲಾರದಾದರು. ಗುರುತಿಗೆ ಸಿಗದೇ ನೀನು ಕೆಳಗೆ ಬಿದ್ದೆ. ನಿನ್ನ ಮಗಳ ಮಕ್ಕಳು ಪ್ರೀತಿಯಿಂದ ನಿನ್ನನ್ನು ಉದ್ಧರಿಸಿದುದರಿಂದ ನೀನು ಇಲ್ಲಿಗೆ ಬಂದಿರುವೆ. ಮತ್ತು ನಿನ್ನ ಕರ್ಮಗಳಿಂದ ಗಳಿಸಿದ ಈ ಅಚಲವೂ, ಶಾಶ್ವತವೂ, ಪುಣ್ಯವೂ, ಉತ್ತಮವೂ, ನಿಶ್ಚಿತವೂ, ಅವ್ಯಯವೂ ಆಗಿರುವ ಸ್ಥಾನವನ್ನು ಗಳಿಸಿರುವೆ.”

ಯಯಾತಿಯು ಹೇಳಿದನು: “ಭಗವನ್! ನನಗೊಂದು ಸಂಶಯವಿದೆ. ಅದನ್ನು ಹೋಗಲಾಡಿಸಬೇಕು. ಏಕೆಂದರೆ ಬೇರೆ ಯಾರಲ್ಲಿಯೂ ಇದನ್ನು ಕೇಳಲಾರೆ. ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನಾನು ಮಹಾ ಫಲವನ್ನು ಗಳಿಸಿದೆನು. ಆದರೆ, ಅದು ಸ್ವಲ್ಪವೇ ಸಮಯದಲ್ಲಿ ಕ್ಷೀಣವಾಗಿ ನಾನು ಹೇಗೆ ಬಿದ್ದೆ? ನಾನು ಗಳಿಸಿದ ಶಾಶ್ವತ ಲೋಕಗಳು ನಿನಗೆ ತಿಳಿದೇ ಇವೆ.”

ಪಿತಾಮಹನು ಹೇಳಿದನು: “ಬಹಳ ಸಹಸ್ರಾರು ವರ್ಷಗಳ ಕಾಲ ಪ್ರಜಾಪಾಲನೆಯಿಂದ ಬೆಳೆದ, ಅನೇಕ ಕ್ರತು-ದಾನಾದಿಗಳಿಂದ ನೀನು ಮಹಾ ಫಲಗಳನ್ನು ಗಳಿಸಿದ್ದೆ. ಆದರೆ ಅವನ್ನು ಒಂದೇ ಒಂದು ದೋಷದಿಂದ ಕಳೆದುಕೊಂಡು ಇಲ್ಲಿಂದ ಕೆಳಗುರುಳಿದೆ. ರಾಜೇಂದ್ರ! ಅಭಿಮಾನದಿಂದ ನೀನು ಸ್ವರ್ಗವಾಸಿಗಳಿಂದ ಧಿಕ್ಕರಿಸಲ್ಪಟ್ಟೆ. ಈ ಲೋಕವು ಮಾನದಿಂದ, ಬಲದಿಂದ, ಹಿಂಸೆಯಿಂದ, ಮೋಸದಿಂದ ಮತ್ತು ಮಾಯೆಯಿಂದ ಶಾಶ್ವತವಾಗುವುದಿಲ್ಲ. ನೀನು ಮೇಲಿರುವವರನ್ನಾಗಲೀ, ಕೆಳಗಿರುವವರನ್ನಾಗಲೀ, ಮುಧ್ಯಮರನ್ನಾಗಲೀ ಅವಮಾನಿಸಕೂಡದು. ಅಭಿಮಾನದ ಕಿಚ್ಚಿಗೆ ಸಿಲುಕಿದವರಿಗೆ ಎಂದೂ ಯಾರೂ ಸಮರೆನಿಸುವುದಿಲ್ಲ. ನಿನ್ನ ಈ ಪತನ ಮತ್ತು ಆರೋಹಣವನ್ನು ಯಾವ ನರರು ಹೇಳುತ್ತಾರೋ ಅವರು ಎಲ್ಲ ಕಷ್ಟಗಳನ್ನು ದಾಟುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ!”

ಈ ರೀತಿ ಅಭಿಮಾನದಿಂದ ಹಿಂದೆ ಯಯಾತಿ ಮತ್ತು ಗಾಲವರು ಅತಿ ನಿರ್ಬಂಧಕ್ಕಾಗಿ ದೋಷಗಳನ್ನು ಹೊಂದಿದರು. ತಮ್ಮ ಏಳಿಗೆಯನ್ನು ಬಯಸುವವರು ಸುಹೃದಯರ ಹಿತಕಾಮನೆಗಳನ್ನು ಕೇಳಬೇಕು. ಹಠವನ್ನು ಮಾಡಬಾರದು. ಏಕೆಂದರೆ ಹಠವು ಕ್ಷಯವನ್ನು ತರುತ್ತದೆ.

ಹಿಂದಿನ ಲೇಖನವಿಜಯನಗರ ಎಸ್ಪಿ ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆ , ಹಣಕ್ಕೆ ಬೇಡಿಕೆ
ಮುಂದಿನ ಲೇಖನಗಂಗಾನದಿಯಲ್ಲಿ ದೋಣಿ ಮುಳುಗಿ ನಾಲ್ವರು ಸಾವು, 24 ಜನ ನಾಪತ್ತೆ