ಮಂಡ್ಯ:ವಿದ್ಯಾರ್ಥಿಗಳಿಗೆ ಮಾತ್ರವಲ್ಲ,ಎಲ್ಲಾ ಸ್ಥಾಯಿಗಳಲ್ಲಿ ಕೆಲಸ ಮಾಡುವ ನೌಕರರಿಗೂ ಕ್ರೀಡೆ ಅವಶ್ಯಕ.ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಗೊಳಿಸಲು ಸಹಕಾರಿ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವಜ್ಞಾನಿ ಸೇವಾ ಟ್ರಸ್ಟ್, ಮಂಡ್ಯ ವಿಶ್ವವಿದ್ಯಾಲಯ ಹಾಗೂ ಸಾರಿಗೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಜ್ಞಾನಿ ಸಾರಿಗೆ ಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ರೀಡಾಳುಗಳಿಗೆ ಶುಭಾಶಯಗಳು ಹಾರೈಸಿ ಅವರು ಮಾತನಾಡಿದರು.
ರಾಜ್ಯಾಧ್ಯಂತ ಕೆಲಸ ಮಾಡುವ ಸಾರಿಗೆ ನೌಕರರಿಗೆ ಈ ರೀತಿ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಂತಸದ ವಿಷಯ. ಕ್ರೀಡಾಳುಗಳಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.
ಮಂಡ್ಯ ಜಿಲ್ಲೆಗೆ ಆಗಮಿಸಿರುವ ರಾಜ್ಯದ ಎಲ್ಲಾ ನೌಕರರು ನಮ್ಮವರೇ.ಜಿಲ್ಲೆಯ ಆತಿಥ್ಯ ಅನುಭವಿಸಿ ಸಂತಸದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು.
ಇದೇ ವೇಳೆ ಕ್ರಿಕೆಟ್ ಪಂದ್ಯಾವಳಿಗೆ ಟಾಸ್ ಹಾರಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಳಶಾಸನ ಮೋಹನ್, ನಹೀಮ್, ವಿಜಯ್ ಕುಮಾರ್ ಇತರರು ಉಪಸ್ಥಿತರಿದ್ದರು.