ನವದೆಹಲಿ: ರಾಜ್ಯಸಭಾ ಚುನಾವಣೆಗೆ ಭಾರತದ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ನ ಆಮ್ ಆದ್ಮಿ ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ. ಬುಧವಾರ ಭಗವಂತ್ ಮಾನ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಅಮೋಘ ಗೆಲುವಿನ ಹಿನ್ನೆಲೆಯಲ್ಲಿ ಎಎಪಿ ಪಂಜಾಬ್‌ನಲ್ಲಿ ರಾಜ್ಯಸಭೆಯ 5 ಸ್ಥಾನಗಳನ್ನು ಪಡೆಯಲಿದೆ.ಮೂಲಗಳ ಮಾಹಿತಿ ಪ್ರಕಾರ, ಭಗವಂತ್ ಮಾನ್ ನೇತೃತ್ವದ ಪಂಜಾಬ್ನ ನೂತನ ಸರ್ಕಾರ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಘೋಷಿಸಿದೆ. ಜೊತೆಗೆ, ಸ್ಪೋರ್ಟ್ಸ್ ಯುನಿವರ್ಸಿಟಿಯ ಮುಖ್ಯಸ್ಥರನ್ನಾಗಿಯೂ ಭಜ್ಜಿಯನ್ನು ನೇಮಕ ಮಾಡುವುದಾಗಿ ತಿಳಿಸಿದೆ.
ಫೆಬ್ರವರಿಯಲ್ಲಿ ನಡೆದ ಪಂಜಾಬ್ ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಮಾಜಿ ಕ್ರಿಕೆಟಿಗ ಈ ವದಂತಿಯನ್ನು ತಳ್ಳಿ ಹಾಕಿದ್ದರು. ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಫೋಟೋದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸೇರಬಹುದು ಎನ್ನಲಾಗಿತ್ತು.
ಇದೀಗ ಆಪ್ ಪಕ್ಷವೇ ಭಜ್ಜಿಯನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಗಾಳಿಸುದ್ದಿಗಳಿಗೆ ತೆರೆ ಎಳೆದಿದೆ. ಆದರೆ ಇಲ್ಲಿಯವರೆಗೆ ಭಜ್ಜಿ ಯಾವುದೇ ಹೇಳಿಕೆ ನೀಡಿಲ್ಲ.