ಮನೆ ಸುದ್ದಿ ಜಾಲ ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಮಾರಮಾರಿ:  ಲಾಠಿ ಪ್ರಹಾರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಮಾರಮಾರಿ:  ಲಾಠಿ ಪ್ರಹಾರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯ

0

ಬೆಂಗಳೂರು: ಪ್ರತಿಭಟನೆ ವಿಚಾರವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಸೋಮವಾರ ನಡೆದಿದೆ.

 ಲಾಠಿ ಪ್ರಹಾರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಗುಂಪು, ‘ವಿಶ್ವವಿದ್ಯಾಲಯದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಶ್ವವಿದ್ಯಾಲಯ ವಿಳಂಬ ಧೋರಣೆ ಅನುಸರಿಸುತ್ತಿದೆ. ಮೌಲ್ಯಮಾಪನ ಆಗಿ ಹಲವು ದಿನಗಳು ಕಳೆದರೂ ಎಂ.ಕಾಮ್, ಎಂಸಿಎ, ಬಿ.ಎಸ್ಸಿ, ಎಂ.ಎಸ್ಸಿ, ಎಂ.ಎ, ಬಿ.ಇಡಿ ಹಾಗೂ ಎಂಬಿಎ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿಲ್ಲ. ಪರೀಕ್ಷೆ ಶುಲ್ಕವನ್ನೂ ದಿಢೀರ್ ಹೆಚ್ಚಳ ಮಾಡಲಾಗಿದೆ’ ಎಂದೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಕೋರ್ಸ್‌ಗಳ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು. ಪದವಿ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣ ಪತ್ರ ನೀಡಬೇಕು. ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ 2015–2016ನೇ ಸಾಲಿನ ವಿದ್ಯಾರ್ಥಿಗಳಿಗೆ ಒಂದು ಬಾರಿ ನಿರ್ಗಮನ ಯೋಜನೆಯಡಿ ಪರೀಕ್ಷೆ ನಡೆಸಬೇಕು’ ಎಂದೂ ಪ್ರತಿಭಟನಕಾರರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲೇ ‘ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆ‘ ನೇತೃತ್ವದಲ್ಲಿ ವಿದ್ಯಾರ್ಥಿಗಳ ಇನ್ನೊಂದು ಗುಂಪು, ’ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದ್ದರು.

ವಿಶ್ವವಿದ್ಯಾಲಯ ಆವರಣದಲ್ಲಿ ಯಾರು ಪ್ರತಿಭಟನೆ ನಡೆಸಬೇಕು? ಎಂಬ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪೊಲೀಸರು ಮಧ್ಯಪ್ರವೇಶಿಸಿದ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟವಾಯಿತು.ಇದೇ ಸಂದರ್ಭದಲ್ಲೇ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿ ಚದುರಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಸಂಘಟನೆಯ 20ಕ್ಕೂ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಹಿಂದಿನ ಲೇಖನಹಾಡ್ಯ ಗ್ರಾಪಂ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ
ಮುಂದಿನ ಲೇಖನದಿ. ಮಾದೇಗೌಡರ ಬಗ್ಗೆ ಅವಹೇಳನ ಮಾಡಿರುವ ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಹೆಚ್​​ಡಿಕೆ ಸೂಚನೆ