ಚೆನ್ನೈ: ಧಾರ್ಮಿಕ ಮತಾಂತರಕ್ಕೆ ಹೆದರಿ ತಂಜಾವೂರಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸೋಮವಾರ ಸಿಬಿಐಗೆ ವರ್ಗಾಯಿಸಿ ಆದೇಶ ನೀಡಿದೆ.ಶಾಲಾ ಬಾಲಕಿ ಧಾರ್ಮಿಕ ಮತಾಂತರಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ವಿವಾದಾತ್ಮಕ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಪೊಲೀಸ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ರಾಜ್ಯ ಸರ್ಕಾರ ತಿಳಿಸಿತ್ತು.
ಈ ಹಿನ್ನಲೆಯಲ್ಲಿ ಬಾಲಕಿಯ ಪೋಷಕರ ಪರ ವಕೀಲರು ನ್ಯಾಯಾಧೀಶರಿಗೆ ಪೊಲೀಸ್ ತನಿಖೆಯಲ್ಲಿ ನಂಬಿಕೆಯಿಲ್ಲ ಎಂದು ಹೇಳಿದ್ದರು ಮತ್ತು ಬಾಹ್ಯ ಏಜೆನ್ಸಿಯಿಂದ ತನಿಖೆಯನ್ನು ಕೋರಿದ್ದರು.ತಂಜಾವೂರು ವಿದ್ಯಾರ್ಥಿನಿ ಆತ್ಮಹತ್ಯೆ ತಮಿಳುನಾಡಿನಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದು, ವಿದ್ಯಾರ್ಥಿನಿ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಓದುತ್ತಿದ್ದು, ಆಕೆ ಮೂಲತಃ ಅರಿಯಲೂರು ಜಿಲ್ಲೆಯವಳಾಗಿದ್ದು, ಶಾಲೆಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಬಾಲಕಿಯನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಸ್ಟೆಲ್‌ನಲ್ಲಿ ಮನೆಕೆಲಸಗಳನ್ನು ಮಾಡಲು ಬಲವಂತಪಡಿಸಲಾಗಿದೆ ಎಂದು ಆರೋಪಿಸಿ ಆಕೆಯ ಪೋಷಕರು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅದನ್ನು ಸಮರ್ಥಿಸುವ ವೀಡಿಯೊ ಕ್ಲಿಪ್ ಹೊರಬಂದಿತ್ತು.