ರಾಜಸ್ಥಾನದಂತೆ ದೇಶದೆಲ್ಲೆಡೆ ಮುಕ್ತ ಜೈಲುಗಳನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಇದರಿಂದ ಜೈಲುಗಳಲ್ಲಿನ ದಟ್ಟಣೆ ನಿವಾರಣೆ ಮತ್ತು ಕೈದಿಗಳ ಪುನರ್ವಸತಿಗೆ ಅನುಕೂಲವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.
“ಇಂತಹ ವ್ಯವಸ್ಥೆಯು ಕೈದಿಗಳು ಸಮುದಾಯದೊಂದಿಗೆ ಸಂವಹನ ನಡೆಸಲು ಮತ್ತು ಹಗಲಿನಲ್ಲಿ ದುಡಿಮೆ ಮಾಡಿ ಸಂಜೆ ಜೈಲಿಗೆ ಮರಳಲು ಅನುವು ಮಾಡಿಕೊಡುತ್ತದೆ” ಎಂದು ರಾಜಸ್ಥಾನ ಮೂಲದ ನ್ಯಾಯಮೂರ್ತಿ ಮೆಹ್ತಾ ಹೇಳಿದರು.
ಹೀಗಾಗಿ ಖೈದಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣದಲ್ಲಿ ಮತ್ತೊಬ್ಬ ಅಮಿಕಸ್ ಕ್ಯೂರಿಯನ್ನು ನೇಮಿಸಿರುವ ನ್ಯಾಯಾಲಯ ಈ ವಿಚಾರದಲ್ಲಿ ತನಗೆ ಸಹಾಯ ಮಾಡುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು (NALSA) ಕೇಳಿದೆ.
ಕೈದಿಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸುಹಾಸ್ ಚಕ್ಮಾ ಎಂಬುವವರು 2020ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು.
ಭಾರತೀಯ ನ್ಯಾಯಾಂಗ ಈಚಿನ ದಿನಗಳಲ್ಲಿ ಬಯಲು ಜೈಲು ಅಥವಾ ಮುಕ್ತ ಕಾರಾಗೃಹಗಳ ಕುರಿತು ಅನೇಕ ಶಿಫಾರಸುಗಳನ್ನು ಮಾಡಿದೆ. ಛತ್ತೀಸ್‌ಗಢ ಹೈಕೋರ್ಟ್ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಈ ಪರಿಕಲ್ಪನೆಯನ್ನು ಜಾರಿಗೆ ತರಲು ಸಾಧ್ಯವೇ ಎಂದು ಕೇಳಿತ್ತು.
ಅಲಾಹಾಬಾದ್ ಹೈಕೋರ್ಟ್ ಕೂಡ ಇತ್ತೀಚೆಗೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳ ಪುನರ್ವಸತಿಗಾಗಿ ‘ತೆರೆದ ಜೈಲು’ ಪರಿಕಲ್ಪನೆಯನ್ನು ಅಧ್ಯಯನ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.