ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ರ್ಯಾಪಿಡೋ ಮತ್ತು ಉಬರ್ ರೀತಿಯ ಕಂಪೆನಿಗಳಿಗೆ ಮಾರ್ಗಸೂಚಿ ಹೊರಡಿಸುವವರೆಗೆ ಅಂತಹ ಕಂಪೆನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ದೆಹಲಿ ಹೈಕೋರ್ಟ್ ನ ಎರಡು ತೀರ್ಪುಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ .
[ದೆಹಲಿ ಸರ್ಕಾರ ಮತ್ತಿತರರು ಮತ್ತು ರೊಪ್ಪೆನ್ ಟ್ರಾನ್ಸ್ ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಸರ್ಕಾರ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಯಂತ್ರಿಸುವ ಮಾರ್ಗಸೂಚಿ ಪ್ರಕಟಿಸುವವರೆಗೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಈ ಆದೇಶದ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ರಜೆಕಾಲೀನ ಪೀಠ ತಡೆಹಿಡಿದಿದೆ.
ದೆಹಲಿ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿಗಳಿಗೆ ಪರವಾನಗಿ ನೀಡುವ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿದೆ ಎಂಬ ಅಂಶವನ್ನು ಗಮನಿಸಿದರೆ ಅವುಗಳ ಕಾರ್ಯಾಚರಣೆಯನ್ನು ನಿಷೇಧಿಸುವ ಅಧಿಸೂಚನೆಗೆ ಹೈಕೋರ್ಟ್ ಸಂಪೂರ್ಣ ತಡೆಯಾಜ್ಞೆ ನೀಡುವುದು ಅನಗತ್ಯ ಎಂದು ನ್ಯಾಯಾಲಯ ವಿವರಿಸಿದೆ.
ಅದರಂತೆ ದೆಹಲಿ ಹೈಕೋರ್ಟ್ ಆದೇಶಗಳಿಗೆ ತಡೆ ನೀಡಿದ ಸರ್ವೋಚ್ಚ ನ್ಯಾಯಾಲಯ ಅಧಿಸೂಚನೆಗೆ ಸಂಬಂಧಿಸಿದ ಪ್ರಕರಣವನ್ನು ತ್ವರಿತವಾಗಿ ಆಲಿಸುವಂತೆ ನಿರ್ದೇಶಿಸಿತು. ಜೊತೆಗೆ ಹೈಕೋರ್ಟ್ ಗೆ ಬೇಗನೇ ಅರ್ಜಿಗಳ ವಿಚಾರಣೆಯನ್ನು ನಡೆಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಲು ನ್ಯಾಯಾಲಯವು ಪಕ್ಷಕಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.
ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಮನೀಶ್ ವಶಿಷ್ಟ್, ಉಬರ್ ಪರ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ) ಸಂಜಯ್ ಜೈನ್ ವಾದ ಮಂಡಿಸಿದರು.