ಮನೆ ಪೌರಾಣಿಕ ನಾವು ಪೂಜಿಸುವ ಈ ತುಳಸಿ ನಿಜಕ್ಕೂ ಯಾರು ಗೊತ್ತಾ.? ಇಲ್ಲಿದೆ ಮಾಹಿತಿ

ನಾವು ಪೂಜಿಸುವ ಈ ತುಳಸಿ ನಿಜಕ್ಕೂ ಯಾರು ಗೊತ್ತಾ.? ಇಲ್ಲಿದೆ ಮಾಹಿತಿ

0

ಸ್ನೇಹಿತರೆ ಕಾರ್ತಿಕ ಮಾಸ ಬಂದರೆ ಸಾಕು, ನಮಗೆ ತುಳಸಿ ವಿವಾಹ ಜ್ಞಾಪಕಕ್ಕೆ ಬಂದು ಬಿಡುತ್ತದೆ. ಏಕಾದಶಿ ಅಥವಾ ಹುಣ್ಣಿಮೆಯ ದಿನ ಮನೆಯ ಮುಂದೆ ಇರುವ ತುಳಸಿ ಗಿಡ ಹಾಗೂ ವಿಷ್ಣುವಿನ ಸ್ವರೂಪಿ ಸಾಲಿಗ್ರಾಮಕ್ಕೆ ಮದುವೆ ಮಾಡಿಸುವುದು ನಮ್ಮ ಸಂಪ್ರದಾಯ. ಆ ದಿನ ಹೆಣ್ಣು ಮಕ್ಕಳಿಗೆ ಅದೇನು ಸಂಭ್ರಮ. ಇಷ್ಟಕ್ಕೂ ಸಾಮಾನ್ಯ ಒಂದು ತುಳಸಿ ಗಿಡವನ್ನು ವಿಷ್ಣುವಿನ ಪತ್ನಿ ಎಂದು ಪೂಜಿಸುವ ವಿಶಿಷ್ಟ ಆಚರಣೆ ಶುರುವಾಗಿದ್ದು ಹೇಗೆ? ಹೋಗಲಿ ಈ ತುಳಸಿ ಯಾರು? ಈಕೆಗೆ ಗಿಡದ ರೂಪ ಬಂದಿದ್ದು ಹೇಗೆ ತುಳಸಿಯ ಕುರಿತಾದ ಕುತೂಹಲಕಾರಿ ವಿಚಾರಗಳು ಇಲ್ಲಿವೆ.

ಅಸುರನ ರಾಣಿಯೊಬ್ಬಳು ತುಳಸಿ ಗಿಡವಾಗಿದ್ದು ಹೇಗೆ ಮತ್ತು ಆಕೆ ವಿಷ್ಣುವಿಗೆ ಶಾಪ ನೀಡಿದ್ಯಾಕೆ ಎಂಬುದರ ಕುರಿತು ವಿಷ್ಣು ಪುರಾಣದಲ್ಲಿ ಒಂದು ಕಥೆಯಿದೆ. ಅಂದಹಾಗೆ ಈ ತುಳಸಿಯ ಪೂರ್ವಜನ್ಮದ ಹೆಸರು ವೃಂದ. ಈಕೆ ಕಾಲನೇಮಿ ಎಂಬ ಅಸುರ ರಾಜನ ಮಗಳು, ಅಸುರನ ಮಗಳಾದರೂ ವೃಂದ ವಿಷ್ಣುವಿನ ಮಹಾ ಭಕ್ತೆಯಾಗಿದ್ದಳು. ಮುಂದೆ ಕಾಲನೇಮಿ ಈಕೆಯನ್ನು ಜಲಂಧರ ಎಂಬ ಅಸುರ ರಾಜನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಈ ವೇಳೆಯಲ್ಲಿ ದೇವದಾನವರು ಕ್ಷೀರ ಮಂಥನ ಶುರುಮಾಡಿದಾಗ ಈ ದಾನವ ರಾಜ ಅದು ತನಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಾನೆ.

ಇದೇ ಕಾರಣಕ್ಕೆ ದೇವಾಸುರರ ನಡುವೆ ಘೋರ ಕದನ ಶುರುವಾಯಿತು, ಆಗ ದೇವತೆಗಳು ಜಲಂಧರನನ್ನ ಕೊಲ್ಲಲು ವಿಷ್ಣುವಿನ ಮೊರೆ ಹೋಗುತ್ತಾರೆ. ಆದರೆ ತನ್ನ ಮಹಾಭಕ್ತೆ ಯಾಗಿರುವ ವೃಂದಳ ಪತಿಯನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ವಿಷ್ಣು ಅವರ ಮನವಿಯನ್ನು ತಿರಸ್ಕರಿಸುತ್ತಾನೆ. ಹೀಗಾಗಿ ದೇವತೆಗಳು ನಾರದ ಋಷಿಯ ಮೊರೆಹೋಗುತ್ತಾರೆ. ಆಗ ಜಲಂಧರನ ಅರಮನೆಗೆ ಬಂದು ತ್ರಿಲೋಕಸಂಚಾರಿ ಸಾಕ್ಷಾತ್ ಪಾರ್ವತಿಯ ರೂಪ ಲಾವಣ್ಯವನ್ನು ವರ್ಣಿಸಲು ಆರಂಭಿಸುತ್ತಾರೆ. ಇದರಿಂದ ಚಂಚಲ ಚಿತ್ತನಾದ ಜಲಂಧರ ತಾನು ಶಿವಪುತ್ರ ಎಂಬುದನ್ನೇ ಮರೆತು ಪಾರ್ವತಿಯನ್ನು ಮೋಹಿಸಲು ಆರಂಭಿಸುತ್ತಾನೆ.

ಎಷ್ಟು ತಿಳಿ ಹೇಳಿದರು ಕೇಳದ ಜಲಂಧರನನ್ನು ಪರಮೇಶ್ವರ ಕೊಲ್ಲಲು ಮುಂದಾಗುತ್ತಾನೆ. ಸಾಕ್ಷಾತ್ ಶಿವನ ವಿರುದ್ಧವೇ ಯುದ್ಧಕ್ಕೆ ನಿಂತಿರುವ ಜಲಂಧರನನ್ನು ಬೀಳ್ಕೊಟ್ಟ ಆತನ ಪತ್ನಿ ವೃಂದಾ. ಈ ಯುದ್ಧದಲ್ಲಿ ತನ್ನ ಪತಿ ಜಲಂಧರನಿಗೆ ಜಯ ಸಿಗಲಿ ಎಂದು ವಿಷ್ಣುವಿನ ಜಪ ಆರಂಭಿಸುತ್ತಾಳೆ. ಹೀಗಾಗಿ ಜಲಂಧರ ಯುದ್ಧದಲ್ಲಿ ಜಯಶಾಲಿಯಾಗಿ ಬರುವವರೆಗೂ ಈ ಜಪವನ್ನು ನಿಲ್ಲಿಸುವುದಿಲ್ಲ ಎಂದು ಜಪದಲ್ಲಿ ಮಗ್ನಳಾಗುತ್ತಾಳೆ. ಈ ಬಾರಿ ದೇವತೆಗಳ ಮನವಿಗೆ ಮಣಿದ ವಿಷ್ಣು, ಜಲಂಧರನ ರೂಪಧರಿಸಿ ಅರಮನೆಗೆ ಬರುತ್ತಾನೆ.

ಆಗ ವೃಂದ ಸ್ವತಃ ತನ್ನ ಪತ್ನಿಯೇ ಯುದ್ಧ ಗೆದ್ದು ಬಂದಿದ್ದಾರೆ ಎಂದು ಭಾವಿಸಿ, ತಾನು ಕೈಗೊಂಡಿದ್ದ ವಿಷ್ಣು ಜಪವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾಳೆ. ಇತ್ತ ವೃಂದಾಳ ಜಪ ಭಂಗ ವಾಗುತ್ತಿದ್ದಂತೆ, ಅತ್ತ ಶಿವನ ಕೈಯಿಂದ ಜಲಂದರ ಸಂಹಾರವಾಗುತ್ತಾನೆ. ಇದರಿಂದ ಕೋಪಗೊಂಡ ಬೃಂದಾ ವ್ರತಕ್ಕೆ ಬಂಗಾ ತಂದು ಪತಿಯ ಸಾವಿಗೆ ಕಾರಣವಾದ ವಿಷ್ಣುವಿಗೆ “ಭಕ್ತೆಯ ವಿಚಾರದಲ್ಲಿ ಕಲ್ಲು ಮನಸ್ಸಿನವನಾದ ನೀನು, ಮುಂದಿನ ಜನ್ಮದಲ್ಲಿ ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಾಗಿ ಬಿಡು, ಜೊತೆಗೆ ನಿನ್ನ ಪತ್ನಿ ಲಕ್ಷ್ಮಿಯನ್ನು ಕಳೆದುಕೊಂಡು ನನ್ನಂತೆ ನೀನು ಕೂಡ ವಿರಹ ವೇದನೆಯನ್ನು ಅನುಭವಿಸುವುದು” ಎಂದು ವಿಷ್ಣುವಿಗೆ ಶಾಪ ನೀಡಿದ್ದಾಳೆ‌.

ಮುಂದೆ ತನ್ನ ಗಂಡನ ತಲೆಯನ್ನು ಹಿಡಿದು ಚಿತೆಗೆ ಹಾರಿದ ವೃಂದ. ಕಾಲಕ್ರಮೇಣ ಸುಟ್ಟು ಭಸ್ಮವಾದ ಆಕೆಯ ಚಿತೆಯ ಬೂದಿಯಿಂದಲೇ ವೃಂದ ತುಳಸಿ ಗಿಡದ ರೂಪ ಧರಿಸಿದ್ದಳಂತೆ. ಅಷ್ಟೇ ಅಲ್ಲದೆ ವೃಂದ ಚಿತೆಗೆ ಬೂದಿಯಿಂದ ಹುಟ್ಟಿದ ಆ ಅಮೂಲ್ಯವಾದ ಗಿಡಕ್ಕೆ ತುಳಸಿ ಎಂದು ಹೆಸರಿಟ್ಟ ಮಹಾವಿಷ್ಣು ಇದರಿಂದಲೇ ನನ್ನ ಸಾಲಿಗ್ರಾಮ ರೂಪವನ್ನ ಪೂಜಿಸುವಂತಗಲಿ ಎನ್ನುತ್ತಾನೆ. ಇನ್ನು ಹಿಂದುಗಳ ಪಾಲಿಗಂತೂ ಈ ತುಳಸಿ ಹಬ್ಬ, ಸುಗ್ಗಿ ಮುಗಿದು ಮದುವೆ ಕಾಲ ಶುರುವಾದ ಶುಭಸೂಚನೆ. ಹೀಗಾಗಿ ಈ ಕಾಲದಲ್ಲಿ ಹೆಚ್ಚು ಮದುವೆಗಳನ್ನು ನಾವು ಕಾಣಬಹುದು.

ಹಿಂದಿನ ಲೇಖನಗುರುಲಿಂಗಸ್ವಾಮಿ ಪಾರ್ಥಿವ ಶರೀರಕ್ಕೆ ಸಿಎಂ ಬೊಮ್ಮಾಯಿ ಅಂತಿಮ ನಮನ
ಮುಂದಿನ ಲೇಖನಸಿದ್ದರಾಮಯ್ಯ ಅವರು ಹಿಂದೂಗಳ ನಂಬಿಕೆಯ ಬಗ್ಗೆ ಉಡಾಫೆ ತೋರಿಸಿದ್ದಾರೆ: ನಳಿನ್ ಕುಮಾರ್ ಕಟೀಲ್