ನವದೆಹಲಿ (New Delhi)-ಜ್ಞಾನವಾಪಿ ಮಸೀದಿ ವಿವಾದದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ಸಿವಿಲ್ ಕೋರ್ಟ್ ನಿಂದ ಜಿಲ್ಲಾ ಕೋರ್ಟ್ ನ್ಯಾಯಾಧೀಶರಿಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿನ ಸಂಕೀರ್ಣತೆಯನ್ನು ಮನಗಂಡು ಸರ್ವೋಚ್ಛ ನ್ಯಾಯಾಲಯ ಅನುಭವಿ ನ್ಯಾಯಾಧೀಶರಿಗೆ ವರ್ಗಾವಣೆ ಮಾಡುತ್ತಿರುವುದಾಗಿ ಹೇಳಿದೆ. ಉತ್ತರ ಪ್ರದೇಶ ಉನ್ನತ ನ್ಯಾಯಾಂಗ ಸೇವೆ ಹಿರಿಯ ಹಾಗೂ ಅನುಭವಿ ನ್ಯಾಯಾಂಗದ ಅಧಿಕಾರಿ ಪ್ರಕರಣವನ್ನು ಪರಿಶೀಲಿಸಲಿದ್ದಾರೆ.
ನ್ಯಾ. ಡಿ.ವೈ ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಹಾಗೂ ಪಿ.ಎಸ್ ನರಸಿಂಹ ಅವರು ಈ ಆದೇಶ ನೀಡಿದ್ದು ಮಸೀದಿಯ ಸಮಿತಿ ಅರ್ಜಿಯ ವಿಚಾರಣೆ ನಡೆಯುವವರೆಗೆ ಮೇ 17 ರಂದು ನೀಡಿದ್ದ ಮಧ್ಯಂತರ ಆದೇಶವೇ ಮುಂದುವರೆಯಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಧಾರ್ಮಿಕ ಸ್ಥಳವನ್ನು ಸಿವಿಲ್ ವ್ಯಾಜ್ಯಕ್ಕೆ ಒಳಪಡಿಸಲು ಅವಕಾಶವಿಲ್ಲ ಎಂದು ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಿದೆಯೇ ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮೊದಲು ನಿರ್ಧರಿಸಲಿ ಎಂದೂ ಪೀಠ ಹೇಳಿದೆ.
ಶಿವಲಿಂಗ ಇದೆ ಎನ್ನಲಾಗಿರುವ ಪ್ರದೇಶಕ್ಕೆ ಭದ್ರತೆ ನೀಡಬೇಕು ಮತ್ತು ಮಸೀದಿ ಆವರಣದಲ್ಲಿ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಆದೇಶ ಮುಂದುವರೆಯಲಿದೆ. ಮಸೀದಿಗೆ ನಮಾಜು ಮಾಡಲು ಬರುವ ಮುಸ್ಲಿಮರಿಗೆ ಶುದ್ಧೀಕರಣ ಮಾಡಿಕೊಳ್ಳಲು ಸರಿಯಾದ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿಗೆ ಪೀಠವು ನಿರ್ದೇಶನ ನೀಡಿದೆ.
ಜೊತೆಗೆ ಪೂಜಾ ಸ್ಥಳದ ಧಾರ್ಮಿಕ ಲಕ್ಷಣಗಳನ್ನು ಖಚಿತಪಡಿಸಿಕೊಳ್ಳುವುದನ್ನು 1991ರ ಪೂಜಾ ಸ್ಥಳ ಕಾಯ್ದೆಯಲ್ಲಿ ನಿರ್ಬಂಧಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾಯ್ದೆಯನ್ನು ಅಯೋಧ್ಯೆ ಪ್ರಕರಣದಲ್ಲಿ ಅನ್ವಯಿಸಲಾಗಿದೆ. ಪೂಜಾ ಸ್ಥಳದಲ್ಲಿನ ಧಾರ್ಮಿಕ ಲಕ್ಷಣಗಳನ್ನು ಖಚಿತಪಡಿಸಿಕೊಳ್ಳುವುದನ್ನು ಈ ಕಾಯ್ದೆಯ 3ನೇ ಸೆಕ್ಷನ್ ನಿರ್ಬಂಧಿಸುವುದಿಲ್ಲ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಹೇಳಿದೆ. ಅಯೋಧ್ಯೆ ಪ್ರಕರಣವನ್ನು ನಿರ್ವಹಿಸಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಚಂದ್ರಚೂಡ್ ಸಹ ಇದ್ದರು.
ಪಾರ್ಸಿಗಳ ಅಗ್ನಿ ದೇವಾಲಯವಿದೆ (ಅಗಿಯಾರಿ) ಎಂದಿಟ್ಟುಕೊಳ್ಳಿ. ಆ ದೇವಾಲಯದ ಸಂಕೀರ್ಣದ ಬೇರೆಡೆ ಶಿಲುಬೆ ಇದೆ ಎಂದಿಟ್ಟುಕೊಳ್ಳಿ. ದೇವಾಲಯ ಇದ್ದ ಕಾರಣಕ್ಕೆ ಶಿಲುಬೆಯು ಅಗಿಯಾರಿ ಆಗಿಬಿಡುತ್ತದೆಯೇ? ಶಿಲುಬೆ ಇರುವ ಮಾತ್ರಕ್ಕೆ ಅಗ್ನಿ ದೇವಾಲಯವು ಕ್ರೈಸ್ತರ ಪ್ರಾರ್ಥನೆಯ ಸ್ಥಳವಾಗಿ ಬಿಡುತ್ತದೆಯೇ? ಈ ರೀತಿಯ ಮಿಶ್ರ ಲಕ್ಷಣಗಳು ಇದ್ದರೆ, ವ್ಯಾಜ್ಯದ ಈ ವೇದಿಕೆಯನ್ನು ಮರೆತುಬಿಡಿ. ಈ ರೀತಿಯ ಮಿಶ್ರ ಲಕ್ಷಣಗಳು ಭಾರತಕ್ಕೆ ಹೊಸದೇನಲ್ಲ ಎಂದು ಪೀಠವು ಹೇಳಿದೆ.
1991ರ ಕಾಯ್ದೆ ಏನೆಂದು ಗುರುತಿಸುತ್ತದೆಯೆಂದರೆ, ಶಿಲುಬೆಯ ಇರುವಿಕೆ ಪಾರ್ಸಿ ದೇವಾಲಯವನ್ನು ಕ್ರೈಸ್ತ ಪ್ರಾರ್ಥನಾ ಸ್ಥಳವನ್ನಾಗಿಸುವುದಿಲ್ಲ. ಪಾರ್ಸಿ ಧಾರ್ಮಿಕ ಗುರುತು ಕ್ರೈಸ್ತ ಪ್ರಾರ್ಥನಾ ಸ್ಥಳವನ್ನು ಪಾರ್ಸಿ ದೇವಾಲಯವನ್ನಾಗಿಸುವುದಿಲ್ಲ ಎಂದು ಪೀಠವು ಹೇಳಿದೆ.
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವು ನಡೆಸುತ್ತಿರುವ ವಿಚಾರಣೆಯೂ ನಡೆಯಲಿ. ಹಾಗೆಂದು ಈ ಅರ್ಜಿಯನ್ನು ನಾವು ವಿಲೇವಾರಿ ಮಾಡುವುದಿಲ್ಲ. ಬದಲಿಗೆ ಈ ಅರ್ಜಿಯ ವಿಚಾರಣೆಯನ್ನು ನಾವು ಕಾಯ್ದಿರಿಸುತ್ತೇವೆ ಎಂದು ಪೀಠವು ಹೇಳಿದೆ.
ವಿಡಿಯೋ ಸಮೀಕ್ಷೆಯ ಆಯ್ದ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾಗುವುದು ನಿಲ್ಲಬೇಕು ಎಂದು ಪೀಠ ಹೇಳಿದೆ.