ಮಂಡ್ಯ(Mandya): ಆರ್ಟಿಐ ಅಡಿ ಮಾಹಿತಿ ಕೋರಿದ ಅರ್ಜಿದಾರನಿಗೆ ಮಾಹಿತಿ ನೀಡದ ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿಗೆ 7,500 ರೂಪಾಯಿ ದಂಡ ವಿಧಿಸಲಾಗಿದೆ.
ಮಾಹಿತಿ ಕೇಳಿ ಆರ್ಟಿಐ ಮೂಲಕ ನಾರಾಯಣಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ 30 ದಿನದೊಳಗೆ ಅಧಿಕಾರಿಗಳು ಮಾಹಿತಿ ಕೊಟ್ಟಿರಲಿಲ್ಲ.
ಇದರಿಂದ ಬೇಸತ್ತ ಅರ್ಜಿದಾರ ಕರ್ನಾಟಕ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಕೊನೆಗೆ ವರ್ಷದ ಬಳಿಕ ಇದು ಹಳೇ ಮಾಹಿತಿ, ಕಡತ ಇಲ್ಲ ಎಂದು ಉತ್ತರ ಬಂದಿತ್ತು. ಈ ಕಡತ ಶಾಶ್ವತ ದಾಖಲೆ ಆಗಿದ್ದರಿಂದ ಮಾಹಿತಿ ನೀಡಬೇಕಿತ್ತು. ಕಡತ ನಿರ್ವಹಣೆ ಮಾಡದ್ದಕ್ಕೆ ಆಯೋಗ ನೋಟಿಸ್ ನೀಡಿತ್ತು. ನೋಟಿಸ್ಗೆ ಲಿಖಿತ ಉತ್ತರವನ್ನೂ ಸಲ್ಲಿಸಿರಲಿಲ್ಲ. ಈ ತಪ್ಪಿಗೆ 7,500 ರೂ. ದಂಡ ವಿಧಿಸಿದೆ. ಮಾಸಿಕ ಸಂಬಳದಲ್ಲೇ ದಂಡ ಕಡಿತಗೊಳಿಸುವಂತೆ ಆದೇಶಿಸಿದೆ.