ಮನೆ ಕಾನೂನು ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

0

ಚೆನ್ನೈ: ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ವೈದ್ಯಕೀಯ ಕೋಟಾ ಮೀಸಲಿರಿಸುವ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.

ತಮಿಳುನಾಡಿನಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡಾ 7.5 ಕೋಟಾವನ್ನುಮೀಸಲಿರಿಸುವ ಸರ್ಕಾರದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಸರ್ಕಾರ ಘೋಷಣೆ ಮಾಡಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಖಾಸಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ತಮಗೂ ಇದೇ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ನೇತೃತ್ವದ ಮೊದಲ ಪೀಠ ಈ ತೀರ್ಪು ಪ್ರಕಟಿಸಿತು.

ವೈದ್ಯಕೀಯ ಕೋರ್ಸ್ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ಅಲ್ಲದೆ ಐದು ವರ್ಷಗಳಲ್ಲಿ ಮೀಸಲಾತಿ ಕೋಟಾವನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.  ಅಲ್ಲದೆ ಮೀಸಲಾತಿಯನ್ನು ಪ್ರಶ್ನಿಸಿ ಮತ್ತು ಅದೇ ರೀತಿಯ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

ಈ ಆದೇಶವು ದೂರಗಾಮಿ ಪರಿಣಾಮಗಳನ್ನು ಹೊಂದಿದ್ದು, ದ್ರಾವಿಡ ಚಳವಳಿಯನ್ನು ಎತ್ತಿ ಹಿಡಿದ ಮುಖ್ಯ ವೇದಿಕೆಯಾದ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಡಿಎಂಕೆ ಸರ್ಕಾರದ ಬದ್ಧತೆಗೆ ದೊಡ್ಡ ಉತ್ತೇಜನ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಈ ಮೀಸಲಾತಿಯನ್ನು ಹಿಂದಿನ ಎಐಎಡಿಎಂಕೆ ಸರ್ಕಾರವು ಪರಿಚಯಿಸಿತ್ತು. ಆದರೆ ಕಾನೂನಾಗಿ ಪರಿವರ್ತಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ನಿಭಾಯಿಸುವಲ್ಲಿ ಎಡವಿತ್ತು. 

ಪ್ರಸ್ತುತ ಸರ್ಕಾರವು ಈಗ ಅವುಗಳನ್ನು ನಿವಾರಿಸಿದ್ದು, ಸರ್ಕಾರವು ಕಪಿಲ್ ಸಿಬಲ್, ಪಿ ವಿಲ್ಸನ್ ಮತ್ತು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಶುಣ್ಮುಗಸುಂದರಂ ಸೇರಿದಂತೆ ಹಿರಿಯ ವಕೀಲರನ್ನು ಕಣಕ್ಕಿಳಿಸಿ ಮೀಸಲಾತಿಯನ್ನು ಸಮರ್ಥಿಸಲು ಶತ ಪ್ರಯತ್ನ ಮಾಡಿತ್ತು.  ಸರ್ಕಾರವು ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಹಲವಾರು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗಲು ಸಹಾಯ ಮಾಡಿತು ಎಂದು ಹಿರಿಯ ವಕೀಲ ಮತ್ತು ಡಿಎಂಕೆ ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಅವರು ತೀರ್ಪನ್ನು ದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.