ಮಂಡ್ಯ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೃಷ್ಣರಾಜ ಪೇಟೆ ತಾಲ್ಲೂಕು ಘಟಕದಿಂದ ನಾಗ ಮಂಗಲ ರಸ್ತೆಯಲ್ಲಿರುವ ಶ್ರೀಮತಿ ಜಯಮ್ಮ ಶ್ರೀ ರಾಮಸ್ವಾಮಿ ಸಮುದಾಯ ಭವನದಲ್ಲಿಂದು ಹಮ್ಮಿಕೊಂಡಿದ್ದ ಶೈಕ್ಷಣಿಕ ವಿಚಾರ ಗೋಷ್ಠಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಪೋಷಕರಂತೆ ಶಿಕ್ಷಕರಿಗೂ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ರಾಜ್ಯದ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ಸಂತೋಷದ ವಿಚಾರ, ಸಚಿವರಾದ ಬಿ.ಸಿ.ನಾಗೇಶ್ ಮತ್ತು ಕೆ. ನಾರಾಯಣ ಗೌಡ ಅವರು ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನೂ ಕೂಡ ನಿಮ್ಮ ಯಾವುದೇ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ಸಿದ್ಧ ಇರುವುದಾಗಿ ತಿಳಿಸಿದರು.
ಮಂಡ್ಯ ಜಿಲ್ಲೆಯ ಅನೇಕ ಸಾಹಿತಿಗಳು, ಶಿಕ್ಷಕರು ನಾಡಿನ ಸಾಹಿತ್ಯ,ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದುದು. ಅಂಥಹ ಮಹನೀಯರನ್ನು ಮರೆಯಲು ಸಾಧ್ಯವಿಲ್ಲ.ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇದೇ ಮಾದರಿಯಲ್ಲಿ ಶಿಕ್ಷಕರ ಕಾರ್ಯಕ್ರಮಗಳನ್ನು ಮಾಡಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ವರ್ಷಪೂರ್ತಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಮತ್ತು ಬಸವರಾಜ್ ಬೊಮ್ಮಾಯಿ ಅವರ ರಾಜ್ಯ ಸರ್ಕಾರಗಳು ಅತ್ಯಂತ ಗೌರವದಿಂದ ಕಾಣುತ್ತಿವೆ.ಕೊರೊನಾ ಸಂದರ್ಭದಲ್ಲಿ ಅನೇಕ ಶಿಕ್ಷಕರು ನಮ್ಮಿಂದ ದೂರವಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್,ಯುವಜನ ಸಬಲೀಕರಣ ಖಾತೆ ಸಚಿವ ಕೆ.ನಾರಾಯಣ ಗೌಡ, ಕೃಷ್ಣರಾಜಪೇಟೆ ಪುರಸಭೆ ಅಧ್ಯಕ್ಷೆ ಶ್ರೀಮತಿ ಮಹಾದೇವಿ,ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಮನ್ ಮುಲ್ ನಿರ್ದೇಶಕ ಎಚ್.ಟಿ.ಮಂಜು, ಕೆ.ರವಿ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.