ಮನೆ ರಾಜಕೀಯ ಸಶಕ್ತ ಕರ್ನಾಟಕ ನಿರ್ಮಾಣಕ್ಕೆ ‘ಟೀಂ ಕರ್ನಾಟಕ’ ಕೆಲಸ: ಸಿಎಂ ಬೊಮ್ಮಾಯಿ

ಸಶಕ್ತ ಕರ್ನಾಟಕ ನಿರ್ಮಾಣಕ್ಕೆ ‘ಟೀಂ ಕರ್ನಾಟಕ’ ಕೆಲಸ: ಸಿಎಂ ಬೊಮ್ಮಾಯಿ

0

ಬೆಂಗಳೂರು: ರಾಜ್ಯದ ಸಚಿವ ಸಂಪುಟದ ಸದಸ್ಯರನ್ನು ಟೀಂ ಕರ್ನಾಟಕ ಎಂದು ಕರೆದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾನು ಟೀಂ ಕರ್ನಾಟಕದ ಸದಸ್ಯನಾಗಿದ್ದು, ನಮ್ಮ ಟೀಂ ಸಶಕ್ತ ಕರ್ನಾಟಕ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ತಮ್ಮ ಸರ್ಕಾರ 6 ತಿಂಗಳು ಪೂರೈಸಿದ ಹಿನ್ನೆಲೆ ಬ್ಯಾಕ್ವೆಂಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದಿಕೆ ಮೇಲೆ ಕುಳಿತಿದ್ದ ಸಚಿವರನ್ನು ಟೀಂ ಕರ್ನಾಟಕ ಎಂದು ಕರೆದರು. ನಾನು ಟೀಂನ ಸದಸ್ಯನಾಗಿದ್ದು, ನಮ್ಮ ಟೀಂ ಸಶಕ್ತ ಕರ್ನಾಟಕ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ಬಳಿಕ ರಾಜ್ಯವನ್ನು ಕೊಂಡಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ದೇವರ ಆಶೀರ್ವಾದ ಇರೋ ನಾಡು. ನೈಸರ್ಗಿಕವಾಗಿ ಶ್ರೀಮಂತವಾಗಿರೋ ನಾಡು ಕರ್ನಾಟಕ. ಕರ್ನಾಟಕದಲ್ಲಿ ಹುಟ್ಟುವ ನದಿಗಳು ಪೂರ್ವ ದಿಂದ ಪಶ್ಚಿಮಕ್ಕೆ ಹರಿಯುತ್ತವೆ. ಗಂಗಾ ಮಾತೆ ನಮ್ಮನ್ನು ಹರಸಿದ್ದಾಳೆ. 365 ದಿನವೂ ತೋಟಗಾರಿಕೆ ಉತ್ಪನ್ನ ಬೆಳೆಯುವ ನಾಡು ನಮ್ಮದು. ಬೇರೆ ಯಾವ ರಾಜ್ಯಕ್ಕೂ ಈ ಹೆಮ್ಮೆ ಇಲ್ಲ. ಖನಿಜ ಸಂಪತ್ತು, ಅರಣ್ಯ ಸಂಪತ್ತು ಅಪಾರವಾಗಿ ನಮ್ಮಲ್ಲಿ ಇದೆ. ಗಂಗರು, ಚೋಳರು, ಮೈಸೂರು ಅರಸರು ವಿಜಯನ ನಗರ ಅರಸರು ದೊಡ್ಡ ಸಂಸ್ಕೃತಿ ನಮಗೆ ಬಿಟ್ಟು ಹೋಗಿದ್ದಾರೆಂದು ಹೊಗಳಿದರು. 

ನಮ್ಮ ರಾಜ್ಯದ ಮಹನೀಯರಾದ ರಾಯಣ್ಣ, ಚೆನ್ನಮ್ಮ, ಅಬ್ಬಕ್ಕ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ಶ್ರೇಷ್ಠ ಆಡಳಿತ ಕೊಟ್ಟ ಪರಂಪರೆ ನಮ್ಮ ಕರ್ನಾಟಕದಲ್ಲಿ ಇದೆ. ಕರ್ನಾಟಕಕ್ಕೆ ಎಲ್ಲರೂ ಕೊಟ್ಟ ಪರಂಪರೆ ನೆನಪು ಮಾಡಿಕೊಳ್ಳುತ್ತೇನೆ. ರಾಜ್ಯದ ಹಿತ ಕಾಪಾಡಲು ನಾವು ಯಾವತ್ತು ಕೆಲಸ ಮಾಡುತ್ತೇವೆ. ಕೃಷಿಯಲ್ಲಿ ನಾವು ಮುಂದೆ ಇದ್ದೇವೆ. ನಮ್ಮ ಕರ್ನಾಟಕ ಕೃಷಿಯಲ್ಲಿ ಮುಂದೆ ಇದೆ. ರಾಜ್ಯದಲ್ಲಿ ಕೈಗಾರಿಕೆ ವಲಯವೂ ಮುಂದಿದೆ. ಸಂಶೋಧನಾ ವಲಯದಲ್ಲಿ ನಾವು ಮುಂದೆ ಇದ್ದೇವೆ.

ಸರ್ಕಾರದ ಯಶಸ್ಸು ಆಗೋದು ತನಗಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ರಾಜ್ಯ ಕಟ್ಟುವುದರಿಂದ. ಐದು ಜನ ಮುಖ್ಯಮಂತ್ರಿಗಳ ಜೊತೆ ನಾನು ಹತ್ತಿರದಿಂದ ಆಡಳಿತ ನೋಡಿದ್ದೇನೆ. ಆದರೆ, ಆರೋಗ್ಯ ಸಮಸ್ಯೆ ಮತ್ತು ಪ್ರವಾಹದ ಸ್ಥಿತಿ ಒಟ್ಟಿಗೆ ಬಂದಿರಲಿಲ್ಲ. ಜನರ ಜೀವ ಉಳಿಸೋದು, ಜನರ ಜೀವನ ಕಟ್ಟಿಕೊಡೋದು ನಮ್ಮ ಮುಂದೆ ಇತ್ತು. 

ಕೊರೊನಾದಿಂದ ಅರ್ಥಿಕ ಸವಾಲು ಕಂಡಿದ್ದೇವೆ. ರೈತರು, ಯುವಕರು, ಎಲ್ಲಾ ವರ್ಗಕ್ಕೆ ಹೊಸ ಹೊಸ ಕಾರ್ಯಕ್ರಮ ಮಾಡೋ ಆಸೆ ತುಡಿಯುತ್ತೆ. ಆದರೆ, ಆರ್ಥಿಕ ಪರಿಸ್ಥಿತಿ ನಮಗೆ ಸಮಸ್ಯೆ ಆಗಿದೆ. ನಮ್ಮದು ಅರಿವು ಇರುವ ಸರ್ಕಾರ. ಏನೇ ಕಷ್ಟ ಬಂದರು ಜನರ ಪರ ಇರುತ್ತೇವೆ. ವೈಯಕ್ತಿಕ ಹಿತಾಸಕ್ತಿಗೆ ನಾವು ಅವಕಾಶ ಕೊಟ್ಟಿಲ್ಲ. ಜನರ ಪರ ಕೆಲಸ ಮಾಡಿದ್ದೇವೆ. ಎಂತಹ ಕಷ್ಟ ಬಂದರು ನಮ್ಮ ಸರ್ಕಾರ ಮಾನವೀಯತೆ ಬಿಟ್ಟುಕೊಟ್ಟಿಲ್ಲ. 

ಪ್ರವಾಹ ಸಮಯದಲ್ಲಿ ಕೇಂದ್ರ ಸರ್ಕಾರದ ನಿಯಮ ಮೀರಿ ದುಪ್ಪಟ್ಟು ಹಣ ಬಿಡುಗಡೆ ಮಾಡಿದ್ದೇವೆ. ಸರ್ಕಾರಕ್ಕೆ ಎಷ್ಟೇ ಕಷ್ಟ ಇದ್ದರು ರೈತರಿಗೆ ಕಷ್ಟ ಆಗಲು ಬಿಡಲಿಲ್ಲ. 14 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಲಾಭ ಸಿಕ್ಕಿದೆ ಎಂದು ತಿಳಿಸಿದರು. 

ಅಂಗವೈಕಲ್ಯರು, ವಿಧವೆಯರ ಮಾಶಾಸನ, ಸಂಧ್ಯಾ ಸುರಕ್ಷಾ ಮಾಶಾಸನದ ಹಣ ಹೆಚ್ಚಳ ಮಾಡಿದ್ದೇವೆ. 58 ಲಕ್ಷ ಜನರಿಗೆ ಇದರಿಂದ ಲಾಭವಾಗಿದೆ. ಸೂಕ್ಷ್ಮತೆಯಿಂದ ಸರ್ಕಾರ ನಡೆಸಬೇಕು. ರೈತನ ಕೃಷಿ ಬೆಳೆಗೆ ಸುರಕ್ಷತೆ ನೀಡುವ ಕೆಲಸ ಮಾಡಿದ್ದೇವೆ. ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಜಾರಿ ಮಾಡಿದ್ದೇವೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಸ್ಥಾಪನೆ ಮಾಡಿದ್ದೇವೆ. 

ಎಲ್ಲಾ ಯೋಜನೆ ಹಣ ಆನ್‍ಲೈನ್ ಮೂಲಕ ಹಣ ತಲುಪಿದೆ. ಕೋವಿಡ್ ನಿಂದ ಮೃತರಾದವರಿಗೆ ರಾಜ್ಯ 1 ಲಕ್ಷ ಕೇಂದ್ರ 50 ಸಾವಿರ ಪರಿಹಾರ ಕೊಟ್ಟಿದ್ದೇವೆ. ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಆಶಯ. ಜನರನ್ನ ಪಾಲುದಾರರನ್ನಾಗಿ ಮಾಡೋದು ಇದರ ಉದ್ದೇಶ. ರಾಜ್ಯ ಕಟ್ಟಲು ಅವ್ರನ್ನು ಸಶಕ್ತರಾಗಿ ಮಾಡೋದು ನಮ್ಮ ಗುರಿ. 

7,500 ಸ್ತ್ರೀ ಶಕ್ತಿ ಸಂಘಕ್ಕೆ ಹಣ ಸಹಾಯ ಮಾಡಲಾಗಿದೆ. ಹೊಸ ಉದ್ಯೊಗ ನೀತಿ ಜಾರಿ ಮಾಡಿದ್ದೇವೆ. ಸಮಗ್ರ ಕೃಷಿಗೆ ಸೆಕೆಂಡರಿ ಡೈರೆಕ್ಟರಿರೇಟ್ ಸ್ಥಾಪನೆ ಮಾಡಿದ್ದೇವೆ. ಹೈನುಗಾರಿಕೆ, ತೋಟಗಾರಿಕೆ ಸೇರಿದಂತೆ ಅನೇಕ ವರ್ಗಕ್ಕೆ ಅನುಕೂಲ ಮಾಡಿದ್ದೇವೆ. ದುಡಿಯೋ ವರ್ಗದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ. ಕೆಲವರು ದುಡ್ಡೇ ದೊಡ್ಡಪ್ಪ ಅಂದು ಕೊಂಡಿದ್ದಾರೆ. ಆದ್ರೆ ದುಡಿಮೆಯೇ ದೊಡ್ಡಪ್ಪ ಅನ್ನೋದು ನಮ್ಮ ಸರ್ಕಾರ ತಿಳಿದಿದೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಲೇಖನದ್ವಿಚಕ್ರವಾಹನ – ಕಾರ್ ನಡುವೆ ಅಪಘಾತ : ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ ಎಂ ಕೆ ಸೋಮಶೇಖರ್
ಮುಂದಿನ ಲೇಖನಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ