ಮನೆ ರಾಜಕೀಯ ರಾಜ್ಯ ಸರ್ಕಾರದಿಂದ ಟೆಂಡರ್ ಗೋಲ್ ಮಾಲ್: ಡಿಕೆಶಿ ಗಂಭೀರ ಆರೋಪ

ರಾಜ್ಯ ಸರ್ಕಾರದಿಂದ ಟೆಂಡರ್ ಗೋಲ್ ಮಾಲ್: ಡಿಕೆಶಿ ಗಂಭೀರ ಆರೋಪ

0

ಬೆಂಗಳೂರು: ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಾಗಿ ಟೆಂಡರ್ ಕರೆಯಲಾಗುತ್ತಿದ್ದು, ರಾಜ್ಯ ಸರ್ಕಾರ ಟೆಂಡರ್ ಗೋಲ್ ಮಾಲ್ ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು,  ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ನಡೆಯುತ್ತಿದ್ದು, 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಸೆಷನ್ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಎರಡು ಪಟ್ಟು ಹೆಚ್ಚು ಮೊತ್ತಕ್ಕೆ ಎಸ್ಟಿಮೇಟ್ ಮಾಡುತ್ತಿದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು, ಗುತ್ತಿಗೆದಾರರನ್ನು ಸೆಟ್ ಮಾಡಲು ಶಾಸಕರಿಗೆ ಹಂಚಿಬಿಟ್ಟಿದ್ದಾರೆ ಎಂದು ಹೇಳಿದರು.

ಮಂತ್ರಿ ಮಾಡದೇ ಇರುವವರಿಗೆ 2-3 ಸಾವಿರ ಕೋಟಿ ಕೆಲಸ ಅಂತ ಟೆಂಡರ್ ಹಂಚಿಕೆ ಮಾಡುತ್ತಾ ಇದ್ದಾರೆ. ನಮಗೆ ಅದೇ ಶಾಸಕರು ಮಾಹಿತಿ ಕೊಡುತ್ತಿದ್ದಾರೆ. ಸಾವಿರಾರು ಕೋಟಿ ರೂ ಮೊತ್ತದ ಹಳೆಯ ಕೆಲಸದ ಬಿಲ್ ಬಾಕಿ ಉಳಿದುಕೊಂಡಿದ್ದರೂ ಹೊಸ ಟೆಂಡರ್​ಗಳನ್ನು ಹಂಚಲಾಗುತ್ತಿದೆ. ಯಾರು ಮುಂಚಿತವಾಗಿ ಹಣ ತಲುಪಿಸುತ್ತಾರೋ ಅವರಿಗೆ ಕೆಲಸದ ಹಂಚಿಕೆ ಮಾಡುತ್ತಿದ್ದಾರೆ. ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದರು.

ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ರದ್ದು ಮಾಡುತ್ತೇವೆ

ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆ ಆಗಿಲ್ಲ. ಆದರೂ ಅಲ್ಲಿ 3 ಸಾವಿರ ಕೋಟಿ ರೂ ಟೆಂಡರ್ ಕರೆದಿದ್ದಾರೆ. ಬರೀ ವಸೂಲಿ ಬಾಜಿ ನಡೆಯುತ್ತಿದೆ. ಬೆಂಗಳೂರಿಗೆ ಕರಪ್ಷನ್ ಕ್ಯಾಟಿಟಲ್ ಅನ್ನೋ ಹೆಸರು ಬಂದಿದೆ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಎಲ್ಲವನ್ನೂ ರದ್ದು ಮಾಡುತ್ತೇವೆ. ಅಧಿಕಾರಿಗಳು, ಗುತ್ತಿಗೆದಾರರು, ರಾಜಕಾರಣಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ, ರಣದೀಪ್ ಸುರ್ಜೆವಾಲ, ಪ್ರಿಯಾಂಕ್ ಖರ್ಗೆ ಇದ್ದರು.

ಹಿಂದಿನ ಲೇಖನಇಂದಿನಿಂದ 10,12ನೇ ತರಗತಿ ಪರೀಕ್ಷೆ: ಚಾಟ್ ಜಿಪಿಟಿ ಬಳಕೆ ನಿಷೇಧ
ಮುಂದಿನ ಲೇಖನತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಪ್ರದೇಶಗಳ ಮೇಲೆ ಎನ್’ಐಎ ದಾಳಿ