ಮುಂಬೈ: ಮಹಾರಾಷ್ಟ್ರದ ಮುಂಬೈ ಸಮೀಪದ ಥಾಣೆಯ ಡೊಂಬಿವ್ಲಿಯಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು (ಗುರುವಾರ) ಸಂಭವಿಸಿದ ಭಾರೀ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಎಂಐಡಿಸಿ 2ನೇ ಹಂತದಲ್ಲಿರುವ ರಾಸಾಯನಿಕ ಕಾರ್ಖಾನೆಯೊಳಗಿನ ಬಾಯ್ಲರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೆಮಿಕಲ್ ಕಾರ್ಖಾನೆಯಲ್ಲಿ 3 ಸ್ಫೋಟಗಳು ಕೇಳಿಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದುರಂತದ ವೇಳೆ ರಾಸಾಯನಿಕ ಫ್ಯಾಕ್ಟರಿಯೊಳಗೆ ಸಿಲುಕಿದ ಸುಮಾರು 8 ಜನರನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಬೆಂಕಿ ನಂದಿಸಲು ಸುಮಾರು 15 ಇಂಜಿನ್‌ಗಳನ್ನು ನಿಯೋಜಿಸಲಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿ ನಂದಿಸಲು 4 ಗಂಟೆಗೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳ ಗಾಜುಗಳು ಒಡೆದು ಹೋಗಿವೆ. ಕಾರು ಶೋರೂಂ ಸೇರಿದಂತೆ ಇನ್ನೆರಡು ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಇಂದು ಮಧ್ಯಾಹ್ನ 1.40ರ ಸುಮಾರಿಗೆ ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಪ್ರಾಥಮಿಕ ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ ಹಲವಾರು ವಾಹನಗಳು ಮತ್ತು ಮನೆಗಳು ಹಾನಿಗೊಳಗಾಗಿವೆ ಮತ್ತು ಕನಿಷ್ಠ 7 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.