2024ರ ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಿ ಯಶಸ್ಸು ಕಂಡ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೆಲ ಸಿನಿಮಾಗಳು ಸೆಟ್ಟೇರಿದ್ದು, ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹಲವು ಚಿತ್ರಗಳು ನಿರ್ಮಾಣ ಹಂತದಲ್ಲಿದ್ದು, ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಲವು ಪ್ರಾಜೆಕ್ಟ್ಸ್ ಪೈಕಿ ‘ಬೃಂದಾವಿಹಾರಿ’ ಕೂಡಾ ಸಾಕಷ್ಟು ಗಮನ ಸೆಳೆಯುತ್ತಿದೆ ಎನ್ನಬಹುದು.
ಶ್ರೀನಿವಾಸ್ ರಾಜ್ ನಿರ್ದೇಶನದ ಈ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗೆ ತುಮಕೂರಿನಲ್ಲಿ ಅದ್ದೂರಿಯಾಗಿ ರಾಧಾ ರಾಧಾ ಶೀರ್ಷಿಕೆಯ ಹಾಡು ಬಿಡುಗಡೆಯಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಅನಾವರಣಗೊಂಡ ಹಾಡು ಮೂರೇ ದಿನಗಳಲ್ಲೇ “ರಾಧಾ ರಾಧಾ” ಹಾಡು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಕಳೆದ ದಿನ ಚಿತ್ರತಂಡ ಹಂಚಿಕೊಂಡ ಪೋಸ್ಟ್ ಪ್ರಕಾರ 2.5ಮಿಲಿಯನ್ಗೂ ಅಧಿಕ ವೀಕ್ಷಣೆಯಾಗಿದೆ. ಈ ಸುಮಧುರ ಹಾಡಿಗೆ ಗಣೇಶ್ ಅವರ ಅಭಿಮಾನಿಗಳು ಸೇರಿದಂತೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿರುವ ಹಾಡನ್ನು ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಸೊಗಸಾಗಿ ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೇವಿಕಾ ಭಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಬುಧವಾರದಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿರುವ ಗಣೇಶ್ ಮತ್ತು ಚಿತ್ರತಂಡ, ”2.5 ಮಿಲಿಯನ್+ ವೀಕ್ಷಣೆಗಳು ಮತ್ತು ವೀಕ್ಷಣೆ ಮುಂದುವರಿದಿದೆ. ಬೃಂದಾವಿಹರಿಯ ರಾಧಾ ರಾಧಾ ವೈರಲ್ ಆಗುತ್ತಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದೆ. 4 ದಿನಗಳ ಹಿಂದೆ ಅನಾವರಣಗೊಂಡ ಹಾಡು ಸದ್ಯ 2.7 ಮಿಲಿಯನ್+ ವೀಕ್ಷಣೆ ಪಡೆದುಕೊಂಡಿದ್ದು, ಕ್ಷಣಕ್ಷಣಕ್ಕೂ ಈ ಸಂಖ್ಯೆ ಏರಿಕೆ ಕಾಣುತ್ತಿದೆ. ಪೋಸ್ಟ್ಗೆ ಕಾಮೆಂಟ್ ಮಾಡಿದ ಅಭಿಮಾನಿಯೊಬ್ಬರು, ‘ಗಣೇಶ್ ಮೂವಿ ಸೂಪರ್ ಆಗಿಯೇ ಇರುತ್ತೆ’ ಎಂದು ತಿಳಿಸಿದರು. ‘ಗೋಲ್ಡನ್ ಯುಗ ಮತ್ತೆ ಶುರುವಾಗಿದೆ ಬಾಸ್’ ಎಂದು ಫ್ಯಾನ್ ಓರ್ವರು ತಿಳಿಸಿದ್ದಾರೆ. ‘ಸೂಪರ್ ಡೂಪರ್ ಹಿಟ್ ಆಗಲಿ ಮೂವಿ’ ಎಂದು ಸಿನಿಪ್ರಿಯರೋರ್ವರು ಹಾರೈಸಿದ್ದಾರೆ. ಉಳಿದಂತೆ ಹಾಡು ಚೆನ್ನಾಗಿದೆ ಎಂದು ಹಲವರು ತಿಳಿಸಿದ್ದಾರೆ ಎನ್ನಲಾಗಿದೆ.
ಆದರಿಂದ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಣೇಶ್, ಹೀರೋ ಆಗಿ 20 ವರ್ಷಗಳಾಗಿವೆ. ನನ್ನ ಈ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಇದು ಸಾಧ್ಯವಾಗಿದ್ದು. ಜೊತೆಗೆ ನನ್ನ ಎಲ್ಲಾ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ತಂತ್ರಜ್ಞರಿಗೆ ಧನ್ಯವಾದಗಳು ಎಂದು ತಿಳಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಸಮೃದ್ಧಿ ಮಂಜುನಾಥ್ ಅವರ ಅದ್ದೂರಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮಾ ಸಾಥ್ ನೀಡಿದ್ದಾರೆ. ಚಂದನವನದ ಅನುಭವಿ ಹಾಗೂ ಹಿರಿಯ ಕಲಾವಿದರ ತಾರಾಬಳಗವೇ ಈ ಚಿತ್ರದಲ್ಲಿದೆ ಎನ್ನಲಾಗಿದೆ.
















