ಮನೆ ಸುದ್ದಿ ಜಾಲ ಸಂವಿಧಾನ ವಕೀಲರ ದಾಖಲೆಯಲ್ಲ, ಪ್ರತಿ ಮಕ್ಕಳು ಅಧ್ಯಯನ ಮಾಡಬೇಕು: ಸಚಿವ ಡಾ.ಕೆ.ಸುಧಾಕರ್

ಸಂವಿಧಾನ ವಕೀಲರ ದಾಖಲೆಯಲ್ಲ, ಪ್ರತಿ ಮಕ್ಕಳು ಅಧ್ಯಯನ ಮಾಡಬೇಕು: ಸಚಿವ ಡಾ.ಕೆ.ಸುಧಾಕರ್

0

ಬೆಂಗಳೂರು: ಭಾರತದ ಸಂವಿಧಾನ ಕೇವಲ ವಕೀಲರು ಓದುವ ದಾಖಲೆಯಾಗಬಾರದು. ಇದನ್ನು ಪ್ರತಿ ಭಾರತೀಯ ಮಕ್ಕಳು ಅಧ್ಯಯನ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 73 ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತದ ಸರ್ವಶ್ರೇಷ್ಠ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನವಿದು. ಇಡೀ ವಿಶ್ವದಲ್ಲಿ ನಮ್ಮ ಸಂವಿಧಾನ ಅತಿ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ತಂಡವನ್ನು ಇಂದು ಸ್ಮರಿಸಬೇಕು. ಸಮಾಜದ ಅಸಮಾನತೆ ನಿವಾರಿಸಿ, ಅಸಮಾನತೆ, ಸಹಬಾಳ್ವೆ, ಸಾಮಾಜಿಕ ಸಮಾನತೆ, ಸೋದರತೆ ಎಲ್ಲವನ್ನೂ ಒಳಗೊಂಡ ಸಂವಿಧಾನವನ್ನು ಕೊಟ್ಟ ಈ ಮಹನೀಯರಿಗೆ ಕೋಟಿ ನಮನಗಳನ್ನು ಅರ್ಪಿಸಬೇಕು. ಜೊತೆಗೆ ಪ್ರತಿ ಭಾರತೀಯ ಇದನ್ನು ಅಧ್ಯಯನ ಮಾಡಬೇಕು. ಮಕ್ಕಳು ಕೂಡ ಅಧ್ಯಯನ ಮಾಡಲು ಪ್ರೇರಣೆ ನೀಡಬೇಕು ಎಂದರು.

ಬ್ರಿಟಿಷರು ದೇಶದ ಬಿಟ್ಟು ಹೋಗುವಾಗ ನಾವೇ ಸಂವಿಧಾನ ಮಾಡಿಕೊಡುತ್ತೇವೆ ಎನ್ನುತ್ತಾರೆ. ಆದರೆ ನಮಗೆ ಆ ಬುದ್ಧಿವಂತಿಕೆ ಇದೆ, ಸಾಮಥ್ರ್ಯ ಇದೆ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಾರೆ. ನಂತರ ವಿಶ್ವವೇ ಹೆಮ್ಮೆ ಪಡುವ ಸಂವಿಧಾನ ರಚನೆಯಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಹಂಚಿಹೋದ ರಾಜ್ಯಗಳನ್ನು ಒಂದುಗೂಡಿಸಿ ಐಕ್ಯತೆ ಮೂಡಿಸಿದ್ದರು. ಆದರೆ ನಾವು ಅವರಿಗೆ ಮಾನ್ಯತೆ, ಗೌರವ ಸಿಕ್ಕಿರಲಿಲ್ಲ. ಈ ಲೋಪ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅಹಿಂಸೆಯ ಹೋರಾಟದಿಂದಲೇ ಬ್ರಿಟಿಷರು ದೇಶ ಬಿಟ್ಟು ಹೋದರು ಎಂಬುದು ಎಷ್ಟು ಸತ್ಯವೋ, ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಸೇನೆ ಭಯ ಹುಟ್ಟಿಸಿದ್ದು ಕಾರಣ ಎಂಬುದು ಕೂಡ ಅಷ್ಟೇ ಸತ್ಯ. ಅವರ ಸ್ಮರಣಾರ್ಥ ಇಂಡಿಯಾ ಗೇಟ್ ನಲ್ಲಿ ಕೇಂದ್ರ ಸರ್ಕಾರ ಪ್ರತಿಮೆ ಸ್ಥಾಪಿಸುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ಯುವಪೀಳಿಗೆ ಇವರ ಚರಿತ್ರೆಯನ್ನು ಸದಾ ಸ್ಮರಿಸುವಂತಾಗಲಿದೆ ಎಂದರು.

ಈ ಭಾಗದಲ್ಲಿ ಜನಪ್ರಿಯರಾಗಿದ್ದ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಇಡೀ ಜೀವನವನ್ನು ಉತ್ತಮ ಆಡಳಿತಕ್ಕಾಗಿ ಮೀಸಲಿಟ್ಟರು.  54 ಪೇಟೆಗಳನ್ನು ನಿರ್ಮಿಸಿ, ಕೆರೆಗಳನ್ನು ನಿರ್ಮಿಸಿ, ಅರಣ್ಯ ಬೆಳೆಸಿ, ಸಮ ಸಮಾಜ ಸೃಷ್ಟಿಸಿ ನಾಡಿನ ಅಭಿವೃದ್ಧಿ ಮಾಡಿದರು. ಅವರಿದ್ದ ಪ್ರದೇಶವಾದ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ಸಿಕ್ಕಿರುವುದು ನನ್ನ ಭಾಗ್ಯ ಎಂದರು.

ಜಿಲ್ಲಾಸ್ಪತ್ರೆ ನಿರ್ಮಾಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸ ಜಿಲ್ಲಾಸ್ಪತ್ರೆ ಬೇಕಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಹೊಸಕೋಟೆಯಲ್ಲಿ ಹೊಸ ತಾಯಿ ಮತ್ತು ಶಿಶು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯಲಿದೆ. ನೆಲಮಂಗಲದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಸುಸಜ್ಜಿತ ತಾಲೂಕು ನಿರ್ಮಿಸಲಾಗುವುದು. ಮೆಟ್ರೊ ರೈಲ್ವೆ ಬೇಡಿಕೆ ಕೂಡ ಇದ್ದು, ಶೀಘ್ರದಲ್ಲೇ ಈ ಭಾಗದ ಜನಪ್ರತಿನಿಧಿಗಳ ಸಹಯೋಗದಲ್ಲಿ ಕಾಮಗಾರಿ ಆರಂಭಕ್ಕೆ ಯತ್ನಿಸಲಾಗುವುದು. ಈ ಭಾಗದ ರೈತರಿಂದ ರಾಗಿ ಪಡೆಯಲು ಒತ್ತಾಯವಿದ್ದು, ಸರ್ಕಾರ ಈ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ನಿವೇಶನ ರಹಿತರಿಗೂ ಮನೆ ನಿರ್ಮಿಸಲಾಗುವುದು ಎಂದರು.

ಕೋವಿಡ್ ನಿಯಂತ್ರಣ

ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯಿಂದ ಕೋವಿಡ್ ಸಮರ್ಪಕ ನಿರ್ವಹಣೆಯಾಗಿದ್ದು, ಮೂರನೇ ಅಲೆಯನ್ನೂ ನಿಯಂತ್ರಿಸಿ 162 ಕೋಟಿ ಲಸಿಕೆ ನೀಡಲಾಗಿದೆ. 2024 ರವರೆಗೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ವಿರೋಧ ಪಕ್ಷಗಳು ರಾಜಕಾರಣ ಮಾಡಿದ್ದವು. ಆದರೆ ರಾಜ್ಯದಲ್ಲಿ, ಮೊದಲ ಡೋಸ್ 100%, ಎರಡನೇ ಡೋಸ್ 86% ಪ್ರಗತಿಯಾಗಿದೆ ಎಂದರು.

ಹಿಂದಿನ ಲೇಖನ`ಜೇಮ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್: ಅಪ್ಪುವಿನ ಯೋಧನ ಲುಕ್ ಮೆಚ್ಚಿದ ಫ್ಯಾನ್ಸ್
ಮುಂದಿನ ಲೇಖನಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ