ಮನೆ ಕಾನೂನು ಧಾರವಾಡ, ಕಲಬುರ್ಗಿಗಳಲ್ಲಿ ಹೈಕೋರ್ಟ್ ಪೀಠಗಳ ಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಧಾರವಾಡ, ಕಲಬುರ್ಗಿಗಳಲ್ಲಿ ಹೈಕೋರ್ಟ್ ಪೀಠಗಳ ಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

0

ಧಾರವಾಡ ಮತ್ತು ಕಲಬುರ್ಗಿಗಳಲ್ಲಿ ಹೈಕೋರ್ಟ್ ಪೀಠಗಳ ಸ್ಥಾಪನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಎರಡೂ ಪೀಠಗಳಿಂದ ಬಡ ಕ್ಷಕಿದಾರರಿಗೆ ತ್ವರಿತ ನ್ಯಾಯದಾನವಾಗುತ್ತಿದೆ. ವ್ಯಾಜ್ಯ ವೆಚ್ಚ ತಗ್ಗುವ ಜೊತೆಗೆ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿನ ಉದ್ದೇಶ ಸಾರ್ಥಕವಾಗಿದೆ ಎಂದು ನ್ಯಾಯಾಲಯ ಹೇಳಿದೆ .

Join Our Whatsapp Group

[ಎನ್ ಪಿ ಅಮೃತೇಶ್ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು].

ಬೆಂಗಳೂರಿನ ವಕೀಲ ಎನ್ ಪಿ ಅಮೃತೇಶ್ 2014ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ.

ನ್ಯಾಯಾಲಯ ತನ್ನ 197 ಪುಟಗಳ ತೀರ್ಪಿನಲ್ಲಿ ಧಾರವಾಡ ಮತ್ತು ಕಲಬುರ್ಗಿ ಪೀಠಗಳ ಸ್ಥಾಪನೆ ಅಗತ್ಯತೆ ಮತ್ತು ಅವುಗಳ ಆರಂಭದಿಂದ ನ್ಯಾಯದಾನದಲ್ಲಿ ಆಗಿರುವ ಬದಲಾವಣೆಗಳು, ಸಾರ್ವಜನಿಕರಿಗೆ ಆಗುವ ಅನುಕೂಲಗಳು ಹೀಗೆ ನಾನಾ ಅಂಶಗಳನ್ನು ಪ್ರಸ್ತಾಪಿಸಿದೆ.

ನ್ಯಾಯಾಲಯ ಅರ್ಜಿದಾರರಿಗೆ ದಂಡ ವಿಧಿಸಲು ಬಯಸಿತ್ತು. ಆದರೆ, ಅರ್ಜಿದಾರರಿಗೆ 62 ವರ್ಷವಾಗಿದ್ದು, ಅವರು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರು ಹಿಂದೆ ಕೆಲವು ನೈಜ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿರುವುದನ್ನು ಪರಿಗಣಿಸಿ ದಂಡದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ವಜಾಗೊಳಿಸಿದೆ.

“ಎಲ್ಲೂ ನ್ಯಾಯ ಸಿಗದೇ ಇದ್ದಾಗ ಜನರು ಕೊನೆಯದಾಗಿ ನ್ಯಾಯಾಲಯವೆಂಬ ದೇಗುಲಕ್ಕೆ ಆಗಮಿಸುತ್ತಾರೆ. ಈ ದೇವಾಲಯವನ್ನು ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳ ಯಾವುದೇ ಭೇದ ಭಾವ ಇಲ್ಲದೆ ಪೂಜಿಸುತ್ತಿದ್ದಾರೆ. ಧಾರವಾಡ ಹಾಗೂ ಕಲಬುರ್ಗಿ ಪೀಠಗಳ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯ ದೊರಕುತ್ತಿದೆ. ಯುವ ವಕೀಲರಿಗೆ ಉದ್ಯೋಗಾವಕಾಶ ದೊರಕುತ್ತಿದೆ. ಆ ಮೂಲಕ ನ್ಯಾಯದಾನ ವ್ಯವಸ್ಥೆಯ ಉದ್ದೇಶ ಈಡೇರಿದೆ” ಎಂದು ಆದೇಶದಲ್ಲಿ ಹೇಳಿದೆ.

ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆಯಂತೆ ಹೈಕೋರ್ಟ್ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಅಂದಿನ ಮುಖ್ಯ ನ್ಯಾಯಮೂರ್ತಿ ಏಳು ಜನರ ಸಮಿತಿಯನ್ನು ರಚಿಸಿದ್ದರು. ಸಮಿತಿಯು ಎಲ್ಲ ಸಾಧಕ ಬಾಧಕ ಪರಿಶೀಲಿಸಿದ ನಂತರ ಪೀಠಗಳ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಅದರಂತೆ ಮೊದಲು ಸಂಚಾರಿ ಪೀಠಗಳನ್ನು ಸ್ಥಾಪಿಸಿ ಬಳಿಕ ಕಾಯಂ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದೆ.

“ಉತ್ತರ ಕರ್ನಾಟಕ ಭಾಗದ ಜನರ ಮನೆ ಬಾಗಿಲಿಗೆ ನ್ಯಾಯಾಲಯ ಬಂದ ಪರಿಣಾಮ ಆ ಭಾಗದ ಜನರಲ್ಲಿ ಕಾನೂನು ಬಗೆಗೆ ಅರಿವು ಹೆಚ್ಚಾಗಿದೆ. ನ್ಯಾಯಾಲಯದ ಕದತಟ್ಟುವ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಾತ್ಮಕ ನ್ಯಾಯ ದೊರಕುತ್ತಿದೆ. ಜನರು ನ್ಯಾಯಾಂಗದ ಮೆಲೇಟ್ಟಿರುವ ವಿಶ್ವಾಸ ವೃದ್ಧಿಯಾಗಿದೆ” ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

84 ಸಾವಿರ ಪ್ರಕರಣ ಬಾಕಿ: 2008ರಲ್ಲಿ ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಸ್ಥಾಪನೆ ಆದ ನಂತರ ಈವರೆಗೆ ಕ್ರಮವಾಗಿ 20,766 ಮತ್ತು 25,606 ಕೇಸುಗಳನ್ನು ಇತ್ಯರ್ಥಪಡಿಸಲಾಗಿದೆ. ಅಂತೆಯೇ 2023ರ ಫೆಬ್ರವರಿ 28ರವರೆಗಿನ ಅಂಕಿ ಅಂಶಗಳಂತೆ ಎರಡೂ ಪೀಠಗಳಲ್ಲಿ ಕ್ರಮವಾಗಿ 58,586 ಮತ್ತು 25,606 ಪ್ರಕರಣಗಳು ಸೇರಿ ಒಟ್ಟು 84 ಸಾವಿರ ಪ್ರಕರಣಗಳು ಬಾಕಿ ಇವೆ, ಇವುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕೇಸುಗಳಿವೆ.

ಅಲ್ಲದೇ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ 2008-09ರಿಂದ 2022-23ರವರೆಗೆ ಕ್ರಮವಾಗಿ 148,61,49,833 ಮತ್ತು 118,97,81,691ರೂಪಾಯಿ ವ್ಯಯ ಮಾಡಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಸುಪ್ರೀಂ ಪೀಠ

“ಸುಪ್ರೀಂ ಕೋರ್ಟ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಬಾಕಿ ಪ್ರಕರಣಗಳು ಇವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ಪ್ರಮಾಣ/ಮಿತಿ ಹೆಚ್ಚಿಸಲು ಮತ್ತು ಖಾಲಿ ಹುದ್ದೆಗಳನ್ನು ತುಂಬಲು ಶಿಫಾರಸ್ಸು ಮಾಡಲಿಕ್ಕೆ ಹಾಗೂ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಪೀಠಗಳನ್ನು ಆರಂಭಿಸಲಿಕ್ಕೆ ಕಾಲ ಕೂಡಿ ಬಂದಿದೆ” ಎಂದು ಕಾನೂನು ಆಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಅಂಶವನ್ನು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.