ಮನೆ ಕಾನೂನು ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗೆ ಕೈಗೊಂಡಿರುವ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗೆ ಕೈಗೊಂಡಿರುವ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

0

ಬೆಂಗಳೂರು: ರಾಜ್ಯದ ವಿವಿಧ ಬಾಲಮಂದಿರಗಳಿಂದ ನಾಪತ್ತೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ಹಾಗೂ ಈವರೆಗೆ ನಡೆಸಿರುವ ತನಿಖೆಯ ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತಂತೆ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾರ್ಚ್‌ 9ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ ?:

ಅರ್ಜಿಯಲ್ಲಿ 2015-16 ರಿಂದ 2021 ರ ಅಕ್ಟೋಬರ್‌ ನಡುವೆ ರಾಜ್ಯದಲ್ಲಿ, ಸರ್ಕಾರದ ಅಧೀನದಲ್ಲಿರುವ ಬಾಲ ಮಂದಿರಗಳಿಂದ ಒಟ್ಟು 420 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಕುರಿತಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ. ಆದರೆ, ನಾಪತ್ತೆಯಾದ ಮಕ್ಕಳಲ್ಲಿ 141 ಮಂದಿ ಈವರೆಗೆ ಪತ್ತೆಯಾಗಿಲ್ಲ. ಈ ಕುರಿತಂತೆ ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆ ಅಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದಿದ್ದಾರೆ.

ಈ ವೇಳೆ ನಾಪತ್ತೆಯಾದ ಮಕ್ಕಳ ಕುರಿತಂತೆ ಪೊಲೀಸರು ತನಿಖೆ ನಡೆಸಿಲ್ಲ ಎಂಬುದು ತಿಳಿದು ಬಂದಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.ಬಾಲ ನ್ಯಾಯ ಕಾಯ್ದೆ ಪ್ರಕಾರ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಕ್ಕಳ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಪೊಲೀಸ್ ಘಟಕ ಇರಬೇಕು. ಆದರೆ, ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಹಿಂದಿನ ಲೇಖನಮತದಾನದ ಮೂಲಕ ಪ್ರಜಾಪ್ರಭುತ್ವ ಬಲಪಡಿಸಿ: ಪ್ರಧಾನಿ
ಮುಂದಿನ ಲೇಖನಏರ್​ಥಿಂಗ್​ ಮಾಸ್ಟರ್ಸ್​ ಟೂರ್ನಿಯ ನಾಕೌಟ್​ ಹಂತ ತಲುಪುವಲ್ಲಿ ಆರ್​.ಪ್ರಜ್ಞಾನಂದ್ ವಿಫಲ