ಚಾಮರಾಜನಗರ (Chamrajnagar): ಮಕ್ಕಳಿಗೆ ಹೊರೆಯಾಗಬಾರದೆಂದು 20 ವರ್ಷಗಳ ಹಿಂದೆಯೇ ತಮ್ಮ ಸಮಾಧಿಯನ್ನು ನಿರ್ಮಿಸಿದ್ದ ವ್ಯಕ್ತಿ ನಿಧನರಾಗಿದ್ದು, ಇಂದು ಅವರ ಅಂತ್ಯಸಂಸ್ಕಾರ ನೆರವೇರಿದೆ.
ಪುಟ್ಟನಂಜಪ್ಪ (85) ಮೃತಪಟ್ಟವರು. ತಮ್ಮ ಸಾವಿನ ನಂತರ ಮಕ್ಕಳ ಮೇಲೆ ಖರ್ಚಿನ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ತಾಲ್ಲೂಕಿನ ನಂಜೇದೇವನಪುರದ ಪುಟ್ಟನಂಜಪ್ಪ ಎಂಬವರು 20 ವರ್ಷಗಳ ಹಿಂದೆಯೇ ತಮ್ಮ ಅಂತ್ಯ ಸಂಸ್ಕಾರ ಮಾಡಬೇಕಾದ ಸ್ಥಳವನ್ನು ನಿಗದಿಪಡಿಸಿ, ಅಲ್ಲಿ ಸಮಾಧಿಯನ್ನೂ ನಿರ್ಮಿಸಿದ್ದರು.
ನಿನ್ನೆ ರಾತ್ರಿ ನಿಧನ ಹೊಂದಿದ ಪುಟ್ಟನಂಜಪ್ಪ ಅವರ ಅಂತ್ಯಸಂಸ್ಕಾರವನ್ನು ತಂದೆಯ ಇಚ್ಛೆಯಂತೆ ಮೊದಲೇ ನಿರ್ಮಿಸಿದ್ದ ಸಮಾಧಿಯಲ್ಲಿ ಇಂದು ನೆರವೇರಿಸಲಾಗಿದೆ.
ಪುಟ್ಟನಂಜಪ್ಪ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಕುಟುಂಬ ಆರ್ಥಿಕವಾಗಿಯೂ ಸದೃಢವಾಗಿದೆ. ಸ್ವಾಭಿಮಾನದಲ್ಲೇ ಬದುಕಿದ ಪುಟ್ಟನಂಜಪ್ಪ ಅವರು 20 ವರ್ಷಗಳ ಮೊದಲೇ ತಮ್ಮ ಜಮೀನಿನಲ್ಲಿ ಸಮಾಧಿ ನಿರ್ಮಿಸಿ ಮರಳು ತುಂಬಿದ್ದರು. ಕಳೆದ ವರ್ಷ ಅವರ ಪತ್ನಿ ನಾಗಮ್ಮ ಅನಾರೋಗ್ಯದಿಂದ ನಿಧನ ಹೊಂದಿದ್ದರು. ತಾವು ನಿರ್ಮಿಸಿದ್ದ ಸಮಾಧಿಯ ಪಕ್ಕದಲ್ಲೇ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಆರೋಗ್ಯದಿಂದಲೇ ಇದ್ದ ಪುಟ್ಟನಂಜಪ್ಪ ಅವರು 12 ದಿನಗಳ ಹಿಂದೆ ಅಸ್ವಸ್ಥರಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಮೂರು ಮಕ್ಕಳನ್ನು ಕರೆದು, ತಮ್ಮ ನಿಧನದ ನಂತರ ನಡೆದ ಬೇಕಾದ ಕಾರ್ಯಗಳಿಗಾಗಿ ಲಕ್ಷ ರೂಪಾಯಿಯಷ್ಟು ಹಣ ನೀಡಿ ಎಲ್ಲ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಬಂದವರಿಗೆಲ್ಲರಿಗೂ ಊಟ ಹಾಕುವಂತೆಯೂ ಹೇಳಿದ್ದರು. ಅಷ್ಟೇ ಅಲ್ಲದೇ, ಕ್ರಿಯಾ ಸಮಾಧಿ ಮಾಡಲು ಬೇಕಾದ ಕಳಶಗಳು, ವಿಭೂತಿ ಸೇರಿದಂತೆ ಎಲ್ಲ ಪದಾರ್ಥಗಳನ್ನೂ ಪುಟ್ಟನಂಜಪ್ಪ ಸಂಗ್ರಹಿಸಿಟ್ಟಿದ್ದರು.
ತಂದೆಯವರು 20 ವರ್ಷಗಳ ಹಿಂದೆಯೇ ತಮ್ಮ ಸಮಾಧಿಯನ್ನು ಸಿದ್ಧ ಮಾಡಿದ್ದರು. ಅಂತ್ಯಸಂಸ್ಕಾರದ ದಿನ ಪ್ರಸಾದ ಖರ್ಚಿಗೆ 1 ಲಕ್ಷ ರೂ. ಇಟ್ಟಿದ್ದರು. ಮೂವರು ಗಂಡು ಮಕ್ಕಳನ್ನೂ ಕರೆದು ಅಂತ್ಯಕ್ರಿಯೆಗೆ ಬಂದವರಿಗೆ ಯಾವುದೇ ಲೋಪವಾಗದಂತೆ ಪ್ರಸಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದರು. 12 ದಿನಗಳ ಹಿಂದೆ ಅವರಿಗೆ ಅನಾರೋಗ್ಯ ಕಾಡಿತ್ತು. ಐದು ದಿವಸಗಳಿಂದ ಪ್ರಜ್ಞಾ ಹೀನರಾಗಿದ್ದರು ಎಂದು ಪುಟ್ಟನಂಜಪ್ಪ ಪುತ್ರ ಗೌಡಿಕೆ ನಾಗೇಶ್ ತಿಳಿಸಿದರು.