ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ ಕೆಲ ಅಭ್ಯರ್ಥಿಗಳು ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸರಿಪಡಿಸಲು ಅಭ್ಯರ್ಥಿಗಳಿಗೆ ಫೆ.12 ಮತ್ತು 13ರಂದು ಕಾಲಾವಕಾಶ ನೀಡಲಾಗಿದೆ.
ಕೆಲವು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸೇವಾ ಅನುಭವದ ವಿವರ, ಸ್ನಾತಕೋತ್ತರ ಪದವಿ ಅಂಕಗಳು, ಪಿಎಚ್.ಡಿ. ಮತ್ತು ಎಂ.ಫಿಲ್ ಇತ್ಯಾದಿ ವಿವರಗಳ ಬಗ್ಗೆ ನೀಡಿರುವ ತಪ್ಪು ಮಾಹಿತಿಗಳನ್ನು ಸರಿಪಡಿಸಲು ಅವಕಾಶ ಕೋರಿದ್ದಾರೆ. ಹೀಗಾಗಿ, ತಪ್ಪು ಮಾಹಿತಿಗಳನ್ನು ಅಪ್‌ಲೋಡ್ ಮಾಡಿರುವ ಎಲ್ಲ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ ಆನ್‌ಲೈನ್ ಅರ್ಜಿಯಲ್ಲಿ ಸರಿಪಡಿಸಲು ಈ ಎರಡು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ವಾಸ್ತವ ಮಾಹಿತಿ ಮಾತ್ರ ನಮೂದಿಸಬೇಕು. ಒಂದು ವೇಳೆ ವಾಸ್ತವ ಮಾಹಿತಿಯನ್ನು ಮರೆಮಾಚಿ ಪುನಃ ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಈಗಾಗಲೇ ಮೊದಲ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಂಡಿದ್ದು, ಬಹುತೇಕ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಲಭ್ಯ ಇರುವ ಸ್ಥಾನಗಳಿಗೆ ಕೌನ್ಸೆಲಿಂಗ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಶೀಘ್ರ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.