ಮನೆ ಕಾನೂನು ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0

ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟಿಸಲು ಲೋಕಸಭಾ ಸಚಿವಾಲಯಕ್ಕೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

Join Our Whatsapp Group

ಅರ್ಜಿದಾರರಾದ ವಕೀಲ ಸಿ ಆರ್ ಜಯ ಸುಕಿನ್ ಅವರಿಗೆ ಈ ಕುರಿತು ದಾವೆ ಹೂಡಲು ಯಾವುದೇ ಹಕ್ಕಿಲ್ಲ. ಅವರಿಗೆ ದಂಡ ಹಾಕುತ್ತಿಲ್ಲ ಎಂಬುದಕ್ಕೆ ಅವರು ಕೃತಜ್ಞರಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ನಿಮಗೆ ದಾವೆ ಹೂಡಲು ಯಾವ ಹಕ್ಕಿದೆ? ಇಂಥ ಅರ್ಜಿಯನ್ನು ಏಕೆ ಸಲ್ಲಿಸುತ್ತೀರಿ ಎಂಬುದು ನಮಗೆ ಗೊತ್ತಿದೆ. ಸಂವಿಧಾನದ 32ನೇ ವಿಧಿಯಡಿ ಮಧ್ಯಪ್ರವೇಶಿಸಲು ನಾವು ಇಚ್ಛೆ ಹೊಂದಿಲ್ಲ. ನಾವು ನಿಮಗೆ ದಂಡ ವಿಧಿಸುತ್ತಿಲ್ಲ ಎಂಬುದಕ್ಕೆ ನೀವು ಕೃತಜ್ಞರಾಗಿರಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿ ಹಿಂಪಡೆಯಲು ಸುಕಿನ್ ಕೋರಿದರಾದರೂ ನ್ಯಾಯಾಲಯವು ಅದಕ್ಕೆ ಅನುಮತಿಸಲಿಲ್ಲ.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಅರ್ಜಿ ಹಿಂಪಡೆಯಲು ಅನುಮತಿಸಿದರೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿದಂತಾಗುತ್ತದೆ. ಇವುಗಳನ್ನು ಸಮರ್ಥಿಸಲಾಗದು. ಇದನ್ನು ನ್ಯಾಯಾಲಯ ಪರಿಗಣಿಸಬೇಕು” ಎಂದರು.

ಮೇ 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಸಂಬಂಧ ಮೇ 18ರಂದು ಲೋಕಸಭಾ ಸಚಿವಾಲ ಬಿಡುಗಡೆ ಮಾಡಿರುವ ಹೇಳಿಕೆ ಮತ್ತು ಲೋಕಸಭಾ ಪ್ರಧಾನ ಕಾರ್ಯದರ್ಶಿ ಅವರು ನೀಡಿರುವ ಆಹ್ವಾನವು ಸಂವಿಧಾನಕ್ಕೆ ವಿರುದ್ಧವಾಗಿದೆ. “ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಅವರು ಸಂಸತ್ ನ ಮುಖ್ಯಸ್ಥರಾಗಿದ್ದಾರೆ… ದೇಶಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಷ್ಟ್ರಪತಿ ಅವರ ಹೆಸರಿನಲ್ಲಿ ತೆಗೆದುಕೊಳ್ಳಲಾಗುತ್ತದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.