ಮನೆ ರಾಜ್ಯ 5 ಸಾವಿರ ಕೂಪನ್ ಹಂಚಿ ಕಾಂಗ್ರೆಸ್ ಗೆದ್ದಿದೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ

5 ಸಾವಿರ ಕೂಪನ್ ಹಂಚಿ ಕಾಂಗ್ರೆಸ್ ಗೆದ್ದಿದೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ

0

ಬೆಂಗಳೂರು: ತಲಾ ₹5,000 ಮೊತ್ತದ ಉಡುಗೊರೆಯ ಕೂಪನ್ ಹಂಚಿ ಕಾಂಗ್ರೆಸ್ ಗೆದ್ದಿದೆ. ಇದರಿಂದಾಗಿಯೇ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

Join Our Whatsapp Group

ಪಕ್ಷದ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಮೊದಲ ದಿನ ಮತದಾರರಿಗೆ ಕೂಪನ್ ಗಳನ್ನು ಹಂಚಲಾಗಿದೆ. ರಾಮನಗರ, ಮಾಗಡಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಈ ರೀತಿಯ ಅಕ್ರಮ ಎಸಗಿದ್ದಾರೆ ಎಂದು ಕೂಪನ್ಗಳನ್ನು ಪ್ರದರ್ಶಿಸಿದರು.

ರಾಮನಗರ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ ಮತದಾರರಿಗೆ ಕೂಪನ್ ಹಂಚಿದ್ದರು. ಇಲ್ಲದಿದ್ದರೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಿರಲಿಲ್ಲ ಎಂದರು.

ಚುನಾವಣೆಯಲ್ಲಿ ಮೂರೂ ಪಕ್ಷಗಳು ಹಣ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಹಣದ ಮೂಲಕ ಚುನಾವಣೆ ನಡೆಸುವ ವ್ಯವಸ್ಥೆಯೇ ಬೇಡ. ರಾಜಕೀಯ ಪಕ್ಷಗಳು ನೀಡುವ ಒಂದೆರಡು ಸಾವಿರ ರೂಪಾಯಿಗಳಿಗಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ಹೇಳಿದರು.

ಎಲ್ಲವೂ ಉಚಿತ ಎಂದು ಗ್ಯಾರಂಟಿ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬರುತ್ತಿದ್ದಂತೆಯೇ ವರಸೆ ಬದಲಿಸಿದೆ. 200 ಯೂನಿಟ್ ಗಳವರೆಗಿನ ವಿದ್ಯುತ್ ಬಿಲ್ ಅನ್ನು ಯಾರೂ ಕಟ್ಟಬೇಡಿ. ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಟಿಕೆಟ್ ಪಡೆಯಬೇಡಿ ಎಂದು ಕುಮಾರಸ್ವಾಮಿ ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಶೇಕಡ 40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಈಗ ಕೂಪನ್ ಹಂಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಷ್ಟು ಕಮಿಷನ್ ಪಡೆಯುತ್ತಾರೆ ಎಂದು ಪ್ರಶ್ನಿಸಿದರು.

ಈ ವಿಚಾರದಲ್ಲಿ ಜನರು ಎಷ್ಟರಮಟ್ಟಿಗೆ ಬೀದಿಗೆ ಇಳಿಯುತ್ತಾರೋ ಗೊತ್ತಿಲ್ಲ. ಜೆಡಿಎಸ್ ಪಕ್ಷವು ಬೀದಿಗಳಿದು ಹೋರಾಟ ನಡೆಸಲಿದೆ. ಬಿಜೆಪಿಯವರನ್ನು ತನಿಖೆ ಹೆಸರಿನಲ್ಲಿ ಸರ್ಕಾರವು ಹೆದರಿಸಬಹುದು. ಜೆಡಿಎಸ್ ಪಕ್ಷವದರನ್ನು ಹೆದರಿಸಲು ಸಾಧ್ಯವಿಲ್ಲʼ ಎಂದು ಹೇಳಿದರು.

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಜೆಡಿಎಸ್ ಬೆಂಬಲಿಸಿದೆ. ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ ಎಂದು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ಮುರ್ಮು ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಏಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು? ಅವಿರೋಧ ಆಯ್ಕೆಗೆ ಏಕೆ ಸಹಕಾರ ನೀಡಿರಲಿಲ್ಲ ಎಂದು ಕೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಮತ್ತು ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ಮುಂದುವರಿಯಲಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದಿನ ಲೇಖನGT vs MI: ಟಾಸ್ ಗೆದ್ದ ಮುಂಬೈ, ಚೇಸಿಂಗ್ ಆಯ್ಕೆ
ಮುಂದಿನ ಲೇಖನನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಉದ್ಘಾಟಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ