ಇದೇ ಸೆಪ್ಟೆಂಬರ್ 20ರಿಂದ ಮೂರು ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸುಪ್ರೀಂ ಕೋರ್ಟ್ ನೂತನ ಸಾಂವಿಧಾನಿಕ ಪೀಠ ರಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ಎಂ ಎಂ ಸುಂದರೇಶ್, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರು ಪೀಠದಲ್ಲಿರಲಿದ್ದಾರೆ.
ಪೌರತ್ವ ಕಾಯಿದೆ, ಶಾಸಕರಿಗೆ ಲಂಚದ ಆರೋಪದಿಂದ ರಕ್ಷಣೆ ಹಾಗೂ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಮುಂದುವರೆಸುವುದನ್ನು ಪ್ರಶ್ನಿಸಿರುವ ಪ್ರಕರಣಗಳನ್ನು ಪೀಠ ವಿಚಾರಣೆ ನಡೆಸಲಿದೆ.
ಅಸ್ಸಾಂ ಪಬ್ಲಿಕ್ ವರ್ಕ್ಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣವು, 1955ರ ಪೌರತ್ವ ಕಾಯಿದೆಯ ಸೆಕ್ಷನ್ 6ಎ ಸಾಂವಿಧಾನಿಕ ದೌರ್ಬಲ್ಯದಿಂದ ಕೂಡಿದೆಯೇ ಎಂಬ ಕುರಿತದ್ದಾಗಿದೆ.
ಈ ಸೆಕ್ಷನ್ ಅಸ್ಸಾಂನಲ್ಲಿ ಅಕ್ರಮ ವಲಸಿಗರ ವಲಸೆ ದಿನ ಆಧರಿಸಿ ಅವರ ವಲಸೆಯನ್ನು ಸಕ್ರಮಗೊಳಿಸಲು ಇಲ್ಲವೇ ರದ್ದುಪಡಿಸಲು ಚೌಕಟ್ಟು ಒದಗಿಸಲಿದ್ದು. ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ) ನವೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವದ್ದಾಗಿದೆ.
ಅಶೋಕ್ ಕುಮಾರ್ ಜೈನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸುವ ಮೀಸಲಾತಿಗೆ ಸಂಬಂಧಿಸಿದೆ. ಆರಂಭಿಕ ಹತ್ತು ವರ್ಷಗಳ ಬಳಿಕ ಮೀಸಲಾತಿ ವಿಸ್ತರಿಸುವುದನ್ನು ಅರ್ಜಿದಾರರು ಪ್ರಶ್ನಿಸಿದ್ದು ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂಬುದು ಅವರ ವಾದವಾಗಿದೆ.
ಸೀತಾ ಸೊರೆನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಲಂಚ ಕೊಟ್ಟವರ ಅಪೇಕ್ಷೆಯಂತೆ ಹಣ ಬಳಸದಿದ್ದರೂ ಲಂಚ ಪಡೆದಿದ್ದಕ್ಕಾಗಿ ಶಾಸಕರಿಗೆ ನೀಡಲಾದ ಕಾನೂನು ವಿನಾಯ್ತಿ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದ್ದಾಗಿದೆ.
ಜಾರ್ಖಂಡ್ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅತ್ತಿಗೆ ಸೀತಾ ಸೊರೆನ್ ಪ್ರಕರಣದ ಅರ್ಜಿದಾರೆ. ವಿಧಾನಸಭೆಯಲ್ಲಿ ಮತ ಚಲಾಯಿಸುವುದಕ್ಕಾಗಿ ಲಂಚ ಸ್ವೀಕರಿಸಿದ ಆರೋಪ ಅವರ ವಿರುದ್ಧ ಇದೆ.