ಮೈಸೂರು: ಸಾಮಾನ್ಯವಾಗಿ ಶಿಲ್ಪಿಗಳಿಗೂ ವಿಜ್ಞಾನಕ್ಕೂ ಸಂಬಂಧವಿರುವುದಿಲ್ಲ ಎಂದು ಭಾವಿಸುತ್ತೇವೆ ಆದರೆ ಶಿಲ್ಪಿಗಳಿಗಿಂತ ದೊಡ್ಡ ವಿಜ್ಞಾನಿಗಳಿಲ್ಲ ಎಂದು ದಸರಾ ವಿಶೇಷ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಇಂದು ನಗರದ ಕಲಾಮಂದಿರದ ಆವರಣದಲ್ಲಿರುವ ಸುಚಿತ್ರ ಗ್ಯಾಲರಿಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2023ದ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸುಂದರ ಶಿಲ್ಪ ಕಲೆಯು ಕಲೆಗಾರನ ಕಲಾಚಾತುರ್ಯ, ಶ್ರಮ, ಏಕಾಗ್ರತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಶಿಲ್ಪಿಗಳ ಕೈಚಳಕ ಶ್ಲಾಘನೀಯ. ನೂರು ವರ್ಷಗಳ ಹಿಂದಿನ ಕಟ್ಟಡ ಬಾಗಿಲು ಹಾಗೂ ಕಿಟಕಿಗಳು ಅಂದಿನ ಕಾಲದ ಶಿಲ್ಪಗಳ ವೈಭವ ವಾಸ್ತುಶಿಲ್ಪದ ಮಹತ್ವವನ್ನು ಇಂದಿಗೂ ನಮ್ಮ ಮೈಸೂರಿನಲ್ಲಿರುವ ಕೆಲವು ಕಚೇರಿಗಳು ಕಟ್ಟಡಗಳು ನಮಗೆ ಪರಿಚಯಿಸುತ್ತವೆ ಎಂದರು.
ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾದ ಶಿಲ್ಪಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಸರಳವಾಗಿದ್ದರೂ, ಬಹಳ ಮಹತ್ವದ್ದಾಗಿದೆ. ಮೆದುಳಿಗೆ ಅರ್ಥವಾಗದ ವಿಚಾರಗಳನ್ನು ಕಣ್ಣುಗಳು ಗ್ರಹಿಸುವುದಿಲ್ಲ. ದೇಹದ ಎಲ್ಲಾ ಭಾಗಗಳಿಗೂ ನಿರ್ದೇಶನ ನೀಡುವ ರೀತಿಯಲ್ಲಿ ಶಿಲ್ಪಿಗಳು ಶಿಲ್ಪಗಳನ್ನು ಕೆತ್ತುವ ಕೆಲಸದಲ್ಲಿ ಮಗ್ನರಾಗುತ್ತಾರೆ. ಯಾವುದೇ ರೀತಿಯಲ್ಲಿ ಶಿಲ್ಪಗಳಿಗೆ ಚ್ಯುತಿ ಯಯಾಗದಂತೆ ಬಹಳ ತದೇಕಚಿತದಿಂದ ಶಿಲ್ಪಿಗಳು ತಮ್ಮ ಕೆಲಸವನ್ನು ನಿರ್ವಹಿಸಲಿದ್ದಾರೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಜಿಲ್ಲೆಯ ಶಿಲ್ಪಿಗಳಿಗೆ ಶುಭ ಹಾರೈಸಿದರು.
ಈ ಹತ್ತು ದಿನಗಳ ಶಿಬಿರದಲ್ಲಿ ತಯಾರಾದ ಶಿಲ್ಪಗಳನ್ನು ದಸರಾ ಪ್ರದರ್ಶನಕ್ಕಿಡಲಾಗುವುದು. ಮುಂದಿನ ದಿನಗಳಲ್ಲಿ ಈ ಶಿಲ್ಪಗಳನ್ನು ವಿವಿಧ ಕಚೇರಿಗಳಲ್ಲಿ ಪ್ರದರ್ಶನಕಿಟ್ಟು ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಲಾಗುವುದು. ತನ್ನದೇ ಆದ ರಾಯಲ್ ಫ್ಲೇವರ್ ನಿಂದ ವಿಭಿನ್ನವಾಗಿರುವ ಮೈಸೂರಿನಲ್ಲಿ ಶಿಲ್ಪ ಕಲೆಗಳಿಗೆ ಸಿಗುವ ಗೌರವವನ್ನು ಗುರುತಿಸುವ ಕಾರ್ಯ ಆಗಲಿದೆ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಾಟ್ಯ, ವಾದ್ಯ, ಶಿಲ್ಪಕಲೆ ಮುಂತಾದ ಕಲೆಗಳಿಂದ ದಸರಾ ಸಂಭ್ರಮ ಕಲೆಗಳ ಉತ್ಸವವಾಗಿದೆ. ವಿಜಯನಗರ ಕಾಲದಲ್ಲಿ ಆರಂಭವಾದ ದಸರಾ ಮಹೋತ್ಸವ ಆಚರಣೆಯಿಂದ ಹಿಡಿದು ಇಂದಿನ ದಸರಾ ಮಹೋತ್ಸವದಲ್ಲೂ ಕಲೆಗಳಿಗೆ ಅಗ್ರಸ್ಥಾನವಿದೆ. ಇಂದಿಗೂ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ಹತ್ತು ದಿನದ ಶಿಬಿರದಲ್ಲಿ ಅಚ್ಚುಕಟ್ಟಾಗಿ ಶಿಲ್ಪಗಳು ತಯಾರಾಗಲು ಎಲ್ಲರ ಪ್ರೋತ್ಸಾಹವಿದ್ದು, ತಯಾರದ ಶಿಲ್ಪಗಳನ್ನು ಪ್ರದರ್ಶನಕ್ಕಿಡಲಾಗುವುದು ಎಂದು ತಿಳಿಸಿದರು.
ಶಿಲ್ಪಿಗಳು ತಯಾರಿಸಿದ ಅವರ ಶಿಲ್ಪ ಕಲೆಗಳನ್ನು ಏಕಾಗ್ರತೆಯಿಂದ ಗಮನಿಸಿದಾಗ ಅವುಗಳಲ್ಲಿ ವಿಜ್ಞಾನ, ಕಲೆ, ಮಾಹಿತಿ, ಸಂಸ್ಕೃತಿ ಎದ್ದು ತೋರುತ್ತವೆ. ಕಲಾಚಾತುರ್ಯವಿರುವ ಕಲೆಗಾರನಿಗೆ ಏಕಾಗ್ರತೆ ಮುಖ್ಯ. ಮಂದಸ್ಮಿತ ಮುಖ, ದೈವಿಕ ಕಳೆ ಇವುಗಳನ್ನು ತುಂಬುವುದು ಸಹ ಉಳಿಪೆಟ್ಟಿನಿಂದ. ಕಲೆಗೆ ಬೆಲೆ ಕಟ್ಟಲಾಗುವುದಿಲ್ಲ, ಬದಲಾಗಿ ಕಲೆಯನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾ ಇತಿಹಾಸಕಾರರು ಹಾಗೂ ಸಂಶೋಧಕರಾದ ಡಾ. ಚೂಡಾಮಣಿ ನಂದಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಆರ್ ಚಂದ್ರಶೇಖರ್, ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ದೇವರಾಜು ಎ, ಕಾರ್ಯಧ್ಯಕ್ಷರಾದ ನಾಜಿಯ ಸುಲ್ತಾನ ಹಾಗೂ ಕಾರ್ಯದರ್ಶಿಗಳಾದ ರಶ್ಮಿಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.