ಮನೆ ರಾಜ್ಯ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಸಭೆಯಲ್ಲಿ ತೀರ್ಮಾನ

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಸಭೆಯಲ್ಲಿ ತೀರ್ಮಾನ

0

ಮೈಸೂರು(Mysuru): ಚಾಮುಂಡಿ ಬೆಟ್ಟವನ್ನು ಶ್ರದ್ಧಾ ಕೇಂದ್ರವನ್ನಾಗಿಯೇ ಉಳಿಸಿಕೊಳ್ಳಬೇಕಾಗಿದ್ದು, ಇಲ್ಲಿ ‘ರೋಪ್‌ ವೇ’ ಯೋಜನೆ ಅನಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಟ್ಟದಲ್ಲಿ ರೋಪ್‌ವೇ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ರೋಪ್‌ ವೇಗೆ ಬಹುತೇಕರಿಂದ ವಿರೋಧ ವ್ಯಕ್ತವಾಗಿದ್ದು, ಇದನ್ನು ಸರ್ಕಾರಕ್ಕೆ ತಿಳಿಸಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ. ಅಲ್ಲಿಗೆ ರಸ್ತೆ ಸೌಕರ್ಯವಿದೆ. ಮೆಟ್ಟಿಲು ಮಾರ್ಗವೂ ಇದೆ. ಬೆಟ್ಟವು ಪವಿತ್ರ ಸ್ಥಳ. ಅಲ್ಲಿನ ಅರಣ್ಯವನ್ನು ರಕ್ಷಿಸಬೇಕಾದ ಹೊಣೆಯೂ ನಮ್ಮೆಲ್ಲರದಾಗಿದೆ. ರೋಪ್‌ವೇಯಿಂದ ಎಲ್ಲದಕ್ಕೂ ತೊಂದರೆ ಆಗುತ್ತದೆ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಸಂಸದ ಪ್ರತಾಪ ಸಿಂಹ, ಬೆಟ್ಟಕ್ಕೆ ಜನರು ಭಕ್ತಿಯಿಂದ ಬರುತ್ತಾರೆಯೇ ಹೊರತು ಪ್ರವಾಸಕ್ಕಾಗಿ ಅಲ್ಲ. ಅದನ್ನು ಭಕ್ತಿ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಕಾಪಾಡಿಕೊಳ್ಳಬೇಕು. ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿ‍ಪಡಿಸುವುದಕ್ಕೆ ಇತರ ಬಹಳಷ್ಟು ತಾಣಗಳಿವೆ. ಬೆಟ್ಟಕ್ಕೆ ‘ಪ್ರಸಾದ’ ಯೋಜನೆಯಲ್ಲಿ ₹ 50 ಕೋಟಿ ಬರುತ್ತದೆ. ಅದರಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬಹುದು. ಚಾಮುಂಡಿಬೆಟ್ಟವು ಇತರ ರೀತಿಯ ಬೆಟ್ಟಗಳಂತಲ್ಲ. ಅದನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಬೆಟ್ಟದ ಮೇಲೆ ಲಂಗು–ಲಗಾಮಿಲ್ಲದೆ ಮನೆಗಳನ್ನು ಕಟ್ಟಲಾಗುತ್ತಿದೆ. ಜೆಸಿಬಿ ಬಳಸಲಾಗುತ್ತಿದೆ. ಇದರಿಂದ ಬೆಟ್ಟಕ್ಕೆ ತೊಂದರೆ ಆಗುತ್ತಿದೆ. ಇದಕ್ಕೆ ತಡೆ ಹಾಕಬೇಕು. ನಂಜನಗೂಡು ರಸ್ತೆ ಕಡೆಯಿಂದ ಬೆಟ್ಟಕ್ಕೆ ಹೋದರೆ ಮರುಕ ಉಂಟಾಗುತ್ತದೆ ಎಂದು ತಿಳಿಸಿದರು.

ಬೆಟ್ಟದಲ್ಲಿರುವವರು ಹೊಸದಾಗಿ ಮನೆ ಕಟ್ಟಲು ಕೆಳಗಡೆ ನಿರ್ದಿಷ್ಟ ಜಾಗ ಗುರುತಿಸಿ ಅನುವು ಮಾಡಿಕೊಡಬೇಕು. ಕಂದಾಯ ಇಲಾಖೆಯ ಜಾಗದಲ್ಲಿ ನಾಲ್ಕು ಎಕರೆ ಮೀಸಲಿಡಬೇಕು ಎಂದು ದೇವೇಗೌಡ ಕೋರಿದರು.

ಈ ಸಂಬಂಧ ಜಿ.ಪಂ ಪ್ರಸ್ತಾವ ಸಲ್ಲಿಸಿದರೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ಶಾಸಕ ಅಶ್ವಿನ್ ಕುಮಾರ್, ಮೇಯರ್‌ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನಪ್ರವಾಸಿಗರನ್ನು ಸೆಳೆಯುತ್ತಿರುವ ಬಿಳಿಗಿರಿರಂಗನಬೆಟ್ಟ
ಮುಂದಿನ ಲೇಖನಪಿಯು ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ