ಮನೆ ಪ್ರವಾಸ ದಕ್ಷಿಣ ಭಾರತದ ಪ್ರವಾಸ ಪ್ಲಾನ್ ಮಾಡುವಾಗ ಈ ತಾಣಗಳು ಇರಲೇಬೇಕು

ದಕ್ಷಿಣ ಭಾರತದ ಪ್ರವಾಸ ಪ್ಲಾನ್ ಮಾಡುವಾಗ ಈ ತಾಣಗಳು ಇರಲೇಬೇಕು

0

ನಮ್ಮ ದಕ್ಷಿಣ ಭಾರತದ ಪ್ರವಾಸ ನಿಜಕ್ಕೂ ರೋಮಾಂಚಕಾರಿ ಎಂದೇ ಹೇಳಬಹುದು. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಸ್ವಲ್ಪ ತಂಪಾದ ಹವಾಮಾನವನ್ನು ಹೊಂದಿರುತ್ತದೆ ಎಂದೇ ಹೇಳಬಹುದು. ಇಲ್ಲಿನ ಸಾಕಷ್ಟು ಗಿರಿಧಾಮಗಳು ತನ್ನ ರಮಣೀಯವಾದ ವಾತಾವರಣದಿಂದ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ.

ನವ ಜೋಡಿಗಳ ಅಥವಾ ದಂಪತಿಗಳ ಏಕಾಂತಕ್ಕೆ ಗಿರಿಧಾಮಗಳು, ನೆಮ್ಮದಿ ಬಯಸುವ ಮಂದಿಗೆ ನಿರ್ಮಲವಾದ ಸರೋವರಗಳು, ಜಲಪಾತಗಳು, ಶ್ರೀಮಂತ ಪಾರಂಪರಿಕ ಸ್ಮಾರಕಗಳು, ಮುಗಿಲೆತ್ತರದ ದೇವಾಲಯಗಳ ಶಿಖರಗಳು ಆಹಾ….! ಅದ್ಭುತವೆನಿಸುತ್ತವೆ.

ಬಾದಾಮಿ, ಕರ್ನಾಟಕ

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಬಾದಾಮಿ, ಕರ್ನಾಟಕದ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಸುಂದರವಾಗಿ ನಿರ್ಮಿಸಲಾದ ರಾಕ್-ಕಟ್ ಗುಹಾ ದೇವಾಲಯಗಳನ್ನು ಇಲ್ಲಿ ನೋಡಬಹುದು.ಇಲ್ಲಿನ ಭೂತನಾಥ ದೇವಾಲಯದಲ್ಲಿ ಸೂರ್ಯಾಸ್ತದ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳುವುದನ್ನು ಮರೆಯದಿರಿ. ಬಾದಾಮಿ ಛಾಯಾಗ್ರಾಹಕರ ಫೇವರೆಟ್ ಸ್ಪಾಟ್ ಎಂದೇ ಹೇಳಬಹುದು. ಅಲ್ಲದೆ, ಬಾದಾಮಿಯಲ್ಲಿ ಸಂದರ್ಶಿಸಲೇಬೇಕಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ.

ಅತಿರಪಲ್ಲಿ ಜಲಪಾತ

ಕೇರಳದ ರಾಜ್ಯದ ತ್ರಿಶ್ಶೂರ್ ಜಿಲ್ಲೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ ಅತಿರಪಲ್ಲಿ ಜಲಪಾತವು ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತದೆ. ಇದು ಕೇರಳ ರಾಜ್ಯದ ಅತಿದೊಡ್ಡ ಜಲಪಾತವು ಹೌದು.

ಇದನ್ನು ಜನರು ಪ್ರೀತಿಯಿಂದ ಬಾಹುಬಲಿ ಜಲಪಾತ ಎಂದು ಸಹ ಕರೆಯುತ್ತಾರೆ. 80 ಅಡಿ ಎತ್ತರ ಹಾಗು 330 ಅಡಿ ಅಗಲದ ಜಲಪಾತವನ್ನು ನೀವು ಎಂದಾದರು ನೋಡಿದ್ದೀರಾ? ಜಲಪಾತದ ಸುತ್ತ ರಮಣೀಯವಾದ ಪ್ರಾಕೃತಿಕ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು.

ಮಹಾಬಲಿಪುರಂ

ಮಹಾಬಲಿಪುರಂ ತಮಿಳುನಾಡು ರಾಜ್ಯದ ಪುರಾತನ ನಗರವಾಗಿದೆ. ಒಂದು ಕಾಲದಲ್ಲಿ ಇದನ್ನು ಮಾಮಲ್ಲಪುರಂ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಮಹಾಬಲಿಪುರಂ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿರೂಪ ಎಂದೇ ಹೇಳಬಹುದು. ಇಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ಕಟ್ಟಡಗಳಿವೆ. ಅಷ್ಟೇ ಅಲ್ಲ, ಕೃಷ್ಣ ಮಂಟಪ, ತಿರುಕಡಲ್ಮಲ್ಲೈ ದೇವಾಲಯ, ಮಹಾಬಲಿಪುರಂ ಬೀಚ್ ಸೇರಿದಂತೆ ಇನ್ನು ಅನೇಕ ಪ್ರೇಕ್ಷಣೀಯ ಸ್ಥಳಗಳು ಹೆಸರುವಾಸಿಯಾಗಿವೆ.

ಚಿತ್ತೂರು

ಚಿತ್ತೂರು ಆಂಧ್ರ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಇಲ್ಲಿ ಹಲವಾರು ಸರೋವರಗಳು, ನದಿಗಳು, ನೈಸರ್ಗಿಕ ದೃಶ್ಯಾವಳಿಗಳು, ಧಾರ್ಮಿಕ ಸ್ಥಳಗಳು ಇವೆ. ಚಿತ್ತೂರಿನಲ್ಲಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯವು ಸಾಕಷ್ಟು ಪ್ರಖ್ಯಾತಿ ಪಡೆದಿರುವ ಪ್ರವಾಸಿ ಆಕರ್ಷಣೆಯಾಗಿದೆ. ಇದರ ಜೊತೆ ತಿರುಪತಿ ಮೃಗಾಲಯ, ಹಾರ್ಸ್ಲಿ ಹಿಲ್ಸ್, ನಾಗಲಾಪುರಂ, ಕೈಗಲ್ ಜಲಪಾತ, ಟ್ರೆಕ್ಕಿಂಗ್ ಮಾಡಲು ಸಾಕಷ್ಟು ಸ್ಥಳಗಳು ಚಿತ್ತೂರಿನಲ್ಲಿವೆ.

ಮುನ್ನಾರ್

ಕೇರಳ ರಾಜ್ಯದ ಸುಂದರವಾದ ಗಿರಿಧಾಮಗಳ ಪೈಕಿ ಮುನ್ನಾರ್ ಹೆಚ್ಚು ಜನಪ್ರಿಯವಾಗಿದೆ. ನವಜೋಡಿಗಳು ಮುನ್ನಾರ್’ನಲ್ಲಿ ಮಧುಚಂದ್ರಕ್ಕಾಗಿ ಭೇಟಿ ನೀಡುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 1,600 ಮೀಟರ್ ಎತ್ತರದಲ್ಲಿರುವ ಮುನ್ನಾರ್, ಸಮೃದ್ಧವಾಗಿ ಬೆಳೆದ ಚಹಾ ತೋಟಗಳು, ಹಚ್ಚ ಹಸಿರಿನ ಪರ್ವತಗಳು ಮತ್ತು ನಿರ್ಮಲವಾದ ಕಣಿವೆಗಳಿಗೆ ಹೆಸರುವಾಸಿಯಾಗಿದೆ. ಮುನ್ನಾರ್ನಲ್ಲಿ ನೋಡಲು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.