ಮನೆ ಕಾನೂನು ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿ ನಿಷೇಧ ಕೋರಿದ್ದ ಹಿಂದೂ ಸೇನಾ ಅರ್ಜಿ ವಜಾ ಮಾಡಿದ ಸುಪ್ರೀಂ...

ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿ ನಿಷೇಧ ಕೋರಿದ್ದ ಹಿಂದೂ ಸೇನಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

0

ಎರಡು ದಶಕಗಳ ಹಿಂದೆ ನಡೆದಿದ್ದ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ʼಇಂಡಿಯಾ: ದ ಮೋದಿ ಕ್ವಶ್ಚನ್ʼ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ವಾಹಿನಿಯ ಮೇಲೆ ಸಂಪೂರ್ಣ ನಿಷೇಧ ಹೇರಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ .

[ವಿಷ್ಣು ಗುಪ್ತಾ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು].

ಅರ್ಜಿಯು ತಪ್ಪಾದ ಗ್ರಹಿಕೆಯಿಂದ ಕೂಡಿದೆ, ನ್ಯಾಯಾಲಯವು ಸೆನ್ಸಾರ್’ಶಿಪ್ ಹೇರಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಅರ್ಜಿ ತಪ್ಪು ಗ್ರಹಿಕೆಯಿಂದ ಕೂಡಿದೆ. ಇದನ್ನು ವಾದಿಸುವುದಾದರೂ ಹೇಗೆ ಸಾಧ್ಯ? ನಾವು ಸಂಪೂರ್ಣವಾಗಿ ಸೆನ್ಸಾರ್ಶಿಪ್ ಹೇರಲು ನೀವು ಬಯಸುತಿದ್ದೀರಿ. ಏನಿದು?” ಎಂದು ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಪಿಂಕಿ ಆನಂದ್ ಅವರನ್ನು ಪ್ರಶ್ನಿಸಿತು.

ಪಿಂಕಿ ಆನಂದ್ ಅವರು “ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರದ ವಿಷಯದಲ್ಲಿಯೂ ಹೀಗೆ ಆಗಿತ್ತು… ಕಾಶ್ಮೀರ ಮತ್ತು ಮುಂಬೈ ಗಲಭೆಯ ವಿಚಾರದಲ್ಲೂ ಹೀಗೆ ಆಗಿತ್ತು. ಇದನ್ನು ಆಲಿಸಬೇಕು” ಎಂದರು.

ಇದಕ್ಕೆ ಪೀಠವು “ಹೆಚ್ಚು ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಅರ್ಜಿಯು ತಪ್ಪಾದ ಗ್ರಹಿಕೆಯಿಂದ ಸಲ್ಲಿಕೆಯಾಗಿದೆ. ಇದಕ್ಕೆ ವಿಚಾರಣಾರ್ಹತೆಯೇ ಇಲ್ಲ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಆದೇಶದಲ್ಲಿ ಹೇಳಿತು.

ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಮತ್ತು ಆನ್ಲೈನ್’ನಲ್ಲಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಈ ನಡುವೆಯೂ ದೇಶದ ವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿದೆ. ಬಲಪಂಥೀಯ ಸಂಘಟನೆಯಾದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ರೈತ ಬೀರೇಂದ್ರ ಕುಮಾರ್ ಸಿಂಗ್ ಅವರು ಸುಪ್ರೀಂ ಕೋರ್ಟ್’ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಸಾಕ್ಷ್ಯಚಿತ್ರವನ್ನು ಭಾರತ ವಿರೋಧಿ ಎಂದು ಕರೆಯಲಾಗಿದ್ದು ಅದನ್ನು ಸಂಪೂರ್ಣ ನಿಷೇಧಿಸುವಂತೆ ಕೋರಿದ್ದರಲ್ಲದೆ ಸಾಕ್ಷ್ಯಚಿತ್ರ ನಿರ್ಮಿಸಿದ ಬಿಬಿಸಿ ವಿರುದ್ಧ ತನಿಖೆ ನಡೆಸುವಂತೆಯೂ ಕೋರಿದ್ದರು.

ಹಿಂದಿನ ಲೇಖನದಕ್ಷಿಣ ಭಾರತದ ಪ್ರವಾಸ ಪ್ಲಾನ್ ಮಾಡುವಾಗ ಈ ತಾಣಗಳು ಇರಲೇಬೇಕು
ಮುಂದಿನ ಲೇಖನಬೇಸಿಗೆಯಲ್ಲಿ ಬಾಡಿಹೀಟ್ ಕಡಿಮೆ ಮಾಡುವ ಪಾನೀಯಗಳು