ತಿರುವನಂತಪುರಂ: ಹಿಂದಿನ ಎಲ್ಡಿಎಫ್ ಆಡಳಿತದ ಮಹತ್ವಾಕಾಂಕ್ಷೆಯ ಉಪಕ್ರಮವಾದ ತಿರುವನಂತಪುರ-ಕಾಸರಗೋಡು ಸಿಲ್ವರ್ಲೈನ್ ಸೆಮಿ-ಹೈ ಸ್ಪೀಡ್ ರೈಲು ಯೋಜನೆಯನ್ನು ರದ್ದುಗೊಳಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಹೇಳಿದ್ದಾರೆ. ಯೋಜನೆಯ ಭೂಸ್ವಾಧೀನವು ಪರಿಸರಕ್ಕೆಮಾರಕ ಎಂದು ಹಿಂದೆ ವಿಪಕ್ಷದಲ್ಲಿದ್ದ ಕಾಂಗ್ರೆಸ್, ಭಾರಿ ಪ್ರತಿಭಟನೆ ನಡೆಸಿತ್ತು. ಹೀಗಾಗಿ ಸತೀಶನ್ ಸಂಪುಟ ಈ ನಿರ್ಧಾರ ಕೈಗೊಂಡಿದೆ.
ಇದಲ್ಲದೆ, ನ್ಯಾಯಾಲಯದ ತೀರ್ಪಿಗೆ ಒಳಪಟ್ಟು, ಸಿಲ್ವರ್ಲೈನ್ ಯೋಜನೆ ವಿರೋಧಿಸುವವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಶಿಫಾರಸು ಮಾಡುತ್ತದೆ ಎಂದು ಸಿಎಂ ತಿಳಿಸಿದ್ದಾರೆ.ಕೇರಳ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಲ್ ಹಾಗೂ ಹಿಂದಿನ ಎಡರಂಗ ಸರ್ಕಾರಗಳು 530 ಕಿಮೀ ಸಿಲ್ವರ್ಲೈನ್ ಯೋಜನೆ ರೂಪಿಸಿದ್ದವು. ಇದು ಉತ್ತರ-ದಕ್ಷಿಣದ ತುದಿ ನಡುವಿನ ಪ್ರಯಾಣದ ಸಮಯವನ್ನು ಕೇವಲ ನಾಲ್ಕು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಕೇರಳದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ತೀವ್ರ ರಾಜಕೀಯ ಸಂಘರ್ಷ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಮಹತ್ವಾಕಾಂಕ್ಷೆಯ ‘ಸಿಲ್ವರ್ಲೈನ್ ಸೆಮಿ-ಹೈಸ್ಪೀಡ್ ರೈಲು ಯೋಜನೆ’ಗೆ ಪ್ರಸ್ತುತ ಯುಡಿಎಫ್ ಸರ್ಕಾರ ಅಧಿಕೃತವಾಗಿ ಮರಣಶಾಸನ ಬರೆದಿದೆ. ಈ ಮೂಲಕ ವರ್ಷಗಳ ಕಾಲ ನಡೆದ ಸುದೀರ್ಘ ಪ್ರತಿಭಟನೆ, ಗೊಂದಲ ಹಾಗೂ ಅನಿಶ್ಚಿತತೆಗೆ ಅಂತಿಮ ತೆರೆ ಬಿದ್ದಿದೆ. ಹಿಂದಿನ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಯೋಜನೆಯ ವಿರುದ್ಧ ನಡೆದ ‘ಸಿಲ್ವರ್ಲೈನ್ ವಿರೋಧಿ ಆಂದೋಲನ’ವು, ಕೇರಳದ ಇತಿಹಾಸದಲ್ಲೇ ಅತ್ಯಂತ ಉಗ್ರ ಹಾಗೂ ವ್ಯಾಪಕ ಜನಸಮೂಹ ಚಳವಳಿಯಾಗಿ ರೂಪಾಂತರಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ ಎನ್ನಲಾಗಿದ.
ಯೋಜನೆಯನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಸಾಮಾನ್ಯ ಜನರಿಗೆ ದೊಡ್ಡ ರಿಲೀಫ್ ನೀಡುವ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿದೆ. ಯೋಜನೆಗಾಗಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಭೂಸ್ವಾಧೀನ ಅಧಿಸೂಚನೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್: “ಯೋಜನೆಯ ಕಾಮಗಾರಿಗಳು ಪ್ರಾಯೋಗಿಕವಾಗಿ ಸ್ಥಗಿತಗೊಂಡಿದ್ದರೂ, ಭೂಸ್ವಾಧೀನದ ಸರ್ಕಾರಿ ಅಧಿಸೂಚನೆಗಳು ಮಾತ್ರ ಹಾಗೇ ಚಾಲ್ತಿಯಲ್ಲಿದ್ದವು. ಇದರಿಂದಾಗಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದ ಜಮೀನಿನ ಮಾಲೀಕರು ತಮ್ಮ ಭೂಮಿಯನ್ನು ಮಾರಾಟ ಮಾಡಲು, ಹೊಸದಾಗಿ ಖರೀದಿಸಲು ಅಥವಾ ಬ್ಯಾಂಕುಗಳಲ್ಲಿ ಅಡಮಾನ ಇಟ್ಟು ಸಾಲ ಪಡೆಯಲು ಸಾಧ್ಯವಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಸಾಮಾನ್ಯ ಜನರ ಈ ತೊಂದರೆಯನ್ನು ನಿವಾರಿಸಲು ನಮ್ಮ ಸರ್ಕಾರ ಅಧಿಸೂಚನೆಗಳನ್ನೇ ರದ್ದುಗೊಳಿಸಿದೆ,” ಎಂದರು. ಯುಡಿಎಫ್ ಸರ್ಕಾರವು ಕೇವಲ ರಾಜಕೀಯ ಕಾರಣಕ್ಕಾಗಿ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ವಿರೋಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ರಾಜ್ಯದ ಮೇಲೆ ಆರ್ಥಿಕ ಅಥವಾ ಪರಿಸರ ವಿಪತ್ತು ಎದುರಾಗದಿದ್ದರೆ ಇಂತಹ ಯೋಜನೆಗಳಿಗೆ ನಮ್ಮ ಬೆಂಬಲ ಇರಲಿದೆ ಎಂದರು. ಆದರೆ ಸಿಲ್ವರ್ಲೈನ್ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿತ್ತು ಎಂದು ಅವರು ದೂರಿದರು.
ಸಿಲ್ವರ್ಲೈನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮರ್ಪಕ ಅಥವಾ ವೈಜ್ಞಾನಿಕವಾದ ಡಿಪಿಆರ್ ಇರಲಿಲ್ಲ. ಯೋಜನೆಯ ನಕ್ಷೆಯ ಪ್ರಕಾರ, ಸುಮಾರು 300 ಕಿಲೋಮೀಟರ್ ಉದ್ದಕ್ಕೂ 30 ಅಡಿ ಎತ್ತರದ ಒಡ್ಡುಗಳನ್ನು ನಿರ್ಮಿಸಲು ಮತ್ತು ಇನ್ನುಳಿದ 200 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಅಡಿ ಎತ್ತರದ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಇಷ್ಟೊಂದು ಬೃಹತ್ ಪ್ರಮಾಣದ ಗೋಡೆಗಳನ್ನು ರಾಜ್ಯದ ಮಧ್ಯಭಾಗದಲ್ಲಿ ನಿರ್ಮಿಸಿದರೆ, ಮಳೆಗಾಲದಲ್ಲಿ ನೈಸರ್ಗಿಕ ನೀರಿನ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡು ಇಡೀ ಕೇರಳ ರಾಜ್ಯವೇ ಭೀಕರ ಪರಿಸರ ವಿಕೋಪ ಹಾಗೂ ಪ್ರವಾಹಕ್ಕೆ ತುತ್ತಾಗುತ್ತಿತ್ತು ಎಂದು ಸತೀಶನ್ ವಿವರಿಸಿದರು. ಸಿಲ್ವರ್ಲೈನ್ ವಿರುದ್ಧ ನಡೆದ ನಿರಂತರ ಹೋರಾಟಗಳಲ್ಲಿ ಭಾಗವಹಿಸಿದ್ದ ಪರಿಸರವಾದಿಗಳು, ಸ್ಥಳೀಯ ನಿವಾಸಿಗಳು ಮತ್ತು ವಿರೋಧ ಪಕ್ಷದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯಲು ಗೃಹ ಇಲಾಖೆಯು ಶಿಫಾರಸು ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ, ಪ್ರತಿಯೊಂದು ಪ್ರಕರಣದ ಸ್ವರೂಪ ಮತ್ತು ಸದ್ಯದ ಸ್ಥಿತಿಗತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

















