ಬೆಂಗಳೂರು: ಮಧ್ಯ ಕರ್ನಾಟಕ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಕೋರಿ ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದೆ.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃವದಲ್ಲಿ ಆಗಮಿಸಿದ್ದ ವಕೀಲರ ನಿಯೋಗ, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಹೈಕೋರ್ಟ್ ಪೀಠಕ್ಕೆ ಮನವಿ ಮಾಡಿತು ಎನ್ನಲಾಗಿದ್ದು ಬೆಂಗಳೂರಿನಿಂದ ಸುಮಾರು 250 ರಿಂದ 300 ಕಿಮೀ ದೂರದಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರಿಗೆ ಶೀಘ್ರದಲ್ಲಿ ನ್ಯಾಯ ಲಭ್ಯವಾಗಬೇಕಾಗಿದೆ. ಪ್ರತಿಯೊಂದು ಪ್ರಕರಣಕ್ಕೂ ಬೆಂಗಳೂರಿಗೆ ಆಗಮಿಸಬೇಕಾಗಿದ್ದು, ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಸ್ಥಾಪನೆ ಮಾಡಬೇಕಾಗಿದೆ ಹೈಕೋರ್ಟ್ಗಳ ಪೀಠಗಳ ರಚನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಸಮಿತಿಯ ಮಾರ್ಗಸೂಚಿಗಳ ಅನ್ವಯ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಮಧ್ಯ ಕರ್ನಾಟಕ ಭಾಗವು ಸಂಪೂರ್ಣವಾಗಿ ಹೊಂದಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲೇ 18 ಜನ ಹಿರಿಯ ವಕೀಲರನ್ನೊಳಗೊಂಡ ಸಮರ್ಥ ವಕೀಲರ ತಂಡವಿದ್ದು, ಈ ಭಾಗದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಒಮ್ಮತದ ಬೆಂಬಲ ಈ ಬೇಡಿಕೆಗಿದೆ.
ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನರಿಗಾಗಿ ಕಲಬುರಗಿ ಮತ್ತು ಧಾರವಾಡಗಳಲ್ಲಿ ಸಂಚಾರಿ ಪೀಠಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಮಾದರಿಯಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲೂ ಉಚ್ಚ ನ್ಯಾಯಾಲಯದ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಕೋರಲಾಯಿತು. ಈ ವೇಳೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಶಿವಮೊಗ್ಗದ ಹಿರಿಯ ವಕೀಲರುಗಳು ಉಪಸ್ಥಿತರಿದ್ದರು. ಹಾಗೂ ಕರಾವಳಿ ಭಾಗದ ಜನರಿಗೆ ತ್ವರಿತ ನ್ಯಾಯದಾನ ಕಲ್ಪಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರದ ಮೂಲಕ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು.
ಆದರಿಂದ ಕರಾವಳಿ ಜಿಲ್ಲೆಗಳ ಜನರಿಗಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಲು ಮತ್ತು ಅದಕ್ಕಾಗಿ ಜಮೀನು ಮಂಜೂರು ಮಾಡಲು ರಾಜ್ಯ ಸರ್ಕಾರ ನಡೆಸುತ್ತಿರುವ ಸಿದ್ಧತೆಗಳಿಗೆ ಬೆಂಗಳೂರು ವಕೀಲರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪತ್ರ ಬರೆದಿದ್ದರು. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಸಂಚಾರಿ ಪೀಠದ ಅಗತ್ಯತೆಯ ಕುರಿತಂತೆ ಸೂಕ್ತ ಸಮಾಲೋಚನೆ ನಡೆಸದೆ, ಕರಾವಳಿ ಭಾಗದಲ್ಲಿ ಅಧಿಕೃತ ಅಂಕಿ-ಅಂಶಗಳ ಅಧ್ಯಯನ ನಡೆಸದೆ, ಏಕಪಕ್ಷೀಯವಾಗಿ ಈ ನಿರ್ಧಾರಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು ಎಂಬುದ್ದಾಗಿದೆ.
















