ಬೆಂಗಳೂರು(Bengaluru): ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇದೇ ಮೊದಲ ಬಾರಿಗೆ ಇಂಗ್ಲಿಷ್, ಹಿಂದಿ, ಕನ್ನಡ, ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಇದರಿಂದಾಗಿ 11,400 ವಿವಿಧ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳು ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು. ಸಿಬ್ಬಂದಿ ನೇಮಕಾತಿ ಆಯೋಗ (ಎಸ್’ಎಸ್’ಸಿ) ನಡೆಸುವ ಈ ಪರೀಕ್ಷೆಗಳು ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಬೇಡಿಕೆಗೆ ಈ ಮೂಲಕ ಮೊದಲ ಜಯ ಸಿಕ್ಕಂತಾಗಿದೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್ ಸ್ಟಾಫ್ ಹಾಗೂ ಹವಾಲ್ದಾರಿ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಷನ್ ಬಿಡುಗಡೆ ಮಾಡಿದೆ. 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ 529 ಸಿಬಿಐಸಿ ಮತ್ತು ಸಿಬಿಜಿಎನ್ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್’ಎಸ್’ಎಲ್’ಸಿಯಲ್ಲಿ ಉತ್ತೀರ್ಣರಾದವರು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆಯನ್ನು ಆಯ್ಕೆ ಮಾಡಲು 08 ಎಂಬ ಕೋಡ್ ಬಳಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.17. ಕಂಪ್ಯೂಟರ್ ಆಧಾರಿತ ಪರೀಕ್ಷೆ ಏಪ್ರಿಲ್ 2023ಕ್ಕೆ ನಡೆಯಲಿದೆ.
ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳಿವೆ.