ಮಹಾರಾಷ್ಟ್ರ: ಪ್ರವರ ನದಿಯಲ್ಲಿ ಈಜಲು ಹೋಗಿ ಕಾಣೆಯಾಗಿದ್ದ ಇಬ್ಬರನ್ನು ಹುಡುಕಲು ತೆರಳಿದ್ದ ಎಸ್ಡಿಆರ್ಎಫ್ ಸಿಬ್ಬಂದಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.
ಪ್ರವರ ನದಿಪಾತ್ರದಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಮೃತದೇಹಗಳ ಹುಡುಕಾಟಕ್ಕೆ ತೆರಳಿದ್ದ ಎಸ್ ಡಿಆರ್ ಎಫ್ ರಕ್ಷಣಾ ತಂಡದ ಬೋಟ್ ಕೂಡ ಪ್ರವರ ನದಿಪಾತ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಈ ಬೋಟ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಸಾಗರ್ ಪೋಪಟ್ ಜೆಡಗುಲೆ(25) ಮತ್ತು ಅರ್ಜುನ್ ರಾಮದಾಸ್ ಜೆಡಗುಲೆ (18 )ಇಬ್ಬರೂ ಪ್ರವರ ಪತ್ರದಲ್ಲಿರುವ ಪಜಾರ್ ಸರೋವರದ ಬಳಿ ಸ್ನಾನಕ್ಕೆ ಹೋಗಿದ್ದರು. ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಾಗರ್ ಜೆಡಗುಳೆ ಶವ ಪತ್ತೆಯಾದ ಬಳಿಕ ಮತ್ತೋರ್ವ ಯುವಕನ ಶವ ಪತ್ತೆಗೆ ಎಸ್ ಡಿಆರ್ ಎಫ್ ತಂಡವನ್ನು ಕರೆಸಲಾಗಿತ್ತು.
ಆದರೆ, ಈ ಬಾರಿ ದುರದೃಷ್ಟವಶಾತ್ ಎಸ್ ಡಿಆರ್ ಎಫ್ ಬೋಟ್ ನೀರಿನಲ್ಲಿ ಪಲ್ಟಿಯಾಗಿದೆ. ಐವರು ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ಮೃತ ಯೋಧರ ಹೆಸರು ಪ್ರಕಾಶ್ ನಾಮ ಶಿಂಧೆ, ವೈಭವ್ ಸುನಿಲ್ ವಾಘ್, ರಾಹುಲ್ ಗೋಪಿಚಂದ್ ಪಾವ್ರಾ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರಾಜ್ಯದ ಮಾಜಿ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಅವರು ಸ್ಥಳಕ್ಕೆ ಧಾವಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದರು.
ಉಜನಿ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಆರು ಮಂದಿ ಸಾವು ಉಜನಿ ಅಣೆಕಟ್ಟಿನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಲ್ಟಿಯಾಗಿ ಭಾರಿ ಅವಘಡ ಸಂಭವಿಸಿದೆ. ಆರು ಮಂದಿ ಪ್ರಯಾಣಿಕರು ಅಣೆಕಟ್ಟಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಅಣೆಕಟ್ಟಿನಲ್ಲಿ ಮುಳುಗಿದ ಆರು ಜನರ ಪತ್ತೆಗಾಗಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಾಹುಲ್ ಡೋಂಗ್ರೆ ದೋಣಿಯಲ್ಲಿದ್ದರು. ಬೋಟ್ ಪಲ್ಟಿಯಾದ ನಂತರ ಧೈರ್ಯದಿಂದ ಅಣೆಕಟ್ಟಿನ ಅಂಚಿಗೆ ಬಂದು ಪ್ರಾಣ ಉಳಿಸಿಕೊಂಡರು. ದೋಣಿಯಲ್ಲಿ ಬದುಕುಳಿದ ಯುವ ಪೊಲೀಸ್ ಅಧಿಕಾರಿಯು ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.