ಮೈಸೂರು: ಕೆರೆ ನೀರು ಕಲುಷಿತಗೊಂಡು ಜಲಚರಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಆಲನಹಳ್ಳಿ ಬಳಿಯ ತಿಪ್ಪಯ್ಯನ ಕೆರೆಯಲ್ಲಿ ನಡೆದಿದೆ.
ಸುತ್ತಮುತ್ತಲಿನ ಬಡಾವಣೆಗಳ ಯುಜಿಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿದ್ದು , ಇದರಿಂದಾಗಿ ಕೆರೆ ನೀರು ಕಲುಷಿತಗೊಂಡು ಮೀನು ಹಾಗೂ ಪಕ್ಷಿಗಳು ಸಾವನ್ನಪ್ಪಿವೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ವಲಸೆ ಬಂದ ಹಲವು ಜಾತಿಯ ಪಕ್ಷಿಗಳು ಕಲುಷಿತ ನೀರಿನಿಂದಾಗಿ ಸಾವನ್ನಪ್ಪಿವೆ. ಅಲ್ಲದೇ ಕೆರೆ ಸುತ್ತ ಕಿಡಿಗೇಡಿಗಳು ಪ್ಲಾಸ್ಟಿಕ್ ಸುರಿದಿದ್ದು, ಕೆರೆ ನೀರು ಕಲುಷಿತವಾಗುತ್ತಿರುವುದರಿಂದ ಅಂತರ್ಜಲವೂ ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
ಸದ್ಯ ಕೆರೆ ಮೈಸೂರು ಮೃಗಾಲಯದ ನಿರ್ವಹಣೆಯಲ್ಲಿದ್ದು, ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.