ಬೆಂಗಳೂರು: ಬ್ಲಾಕ್‌ಮೇಲರ್ ಎಂದು ಕರೆದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ವಕೀಲ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಬುಧವಾರ (ಅ30) ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದ ಅರ್ಜಿದಾರರಲ್ಲಿ ಟಿ.ಜೆ.ಅಬ್ರಹಾಂ ಕೂಡ ಒಬ್ಬರು.
“ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್‌ಮೇಲರ್ ಮತ್ತು ಕೆಟ್ಟ ಪೂರ್ವಾಪರ ಹೊಂದಿರುವ ವ್ಯಕ್ತಿ ಎಂದು ಕರೆದಿದ್ದಾರೆ ”ಎಂದು ಅಬ್ರಹಾಂ ಪಿಟಿಐಗೆ ತಿಳಿಸಿದ್ದಾರೆ.
“ಸಿದ್ದರಾಮಯ್ಯ ನಕಲಿ ಮತ್ತು ಅಕ್ರಮ ಹಕ್ಕು ಸೃಷ್ಟಿಸಿ 14 ಸೈಟ್‌ಗಳನ್ನು ತೆಗೆದುಕೊಂಡಿದ್ದು, ನೀವು ನನ್ನನ್ನು ಬ್ಲ್ಯಾಕ್‌ಮೇಲರ್ ಎಂದು ಹೇಗೆ ಕರೆಯುತ್ತೀರಿ?. ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನೀವು ಹೇಗೆ ತಪ್ಪಿಸಿಕೊಳ್ಳುತ್ತೀರಿ ಎಂದು ನಾವು ನೋಡುತ್ತೇವೆ, ”ಎಂದು ಹೇಳಿದ್ದಾರೆ.
”ಟಿ.ಜೆ.ಅಬ್ರಹಾಂ ಅವರ ಪೂರ್ವಾಪರವನ್ನು ನೋಡಿದರೆ, ಅವರೊಬ್ಬ ಬ್ಲ್ಯಾಕ್‌ಮೇಲರ್. ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳುವುದು ಕಾನೂನು ಬಾಹಿರ” ಎಂದು ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 2 ರಂದು ಆಕ್ರೋಶಭರಿತರಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.